ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ದಂದೆ ಹಿಂದೆ ಕಾಣದ ಕೈ

ಡಿ.ಕೆ. ಸಹೋದರರ ವಿರುದ್ಧ ಡಿಸಿಎಂ ಹೇಳಿಕೆಗೆ ಲಿಂಗಪ್ಪ ತಿರುಗೇಟು
Last Updated 8 ಡಿಸೆಂಬರ್ 2019, 20:45 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯಲ್ಲಿನ ಅಧಿಕಾರಿಗಳ ವರ್ಗಾವಣೆಯಲ್ಲಿ ಸಂವಿಧಾನಾತೀತ ಶಕ್ತಿಯೊಂದು ಕೈ ಹಾಕುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮೊದಲು ಅದನ್ನು ನಿಯಂತ್ರಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.

‘ಡಿ.9ರ ನಂತರ ರಾಮನಗರದಲ್ಲಿ ‘ಕ್ಲೀನಿಂಗ್‌’ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಮೋದಿ ಸರ್ಕಾರ ಸ್ವಚ್ಛ ಭಾರತ ಕಾರ್ಯಕ್ರಮ ಆರಂಭಿಸಿ ನಾಲ್ಕು ವರ್ಷವಾಯಿತು. ಅದನ್ನು ಜಿಲ್ಲೆಯಲ್ಲಿ ಅವರು ಮುಂದುವರಿಸುವುದಾದರೆ ನಾವೇ ಅವರಿಗೆ ಪೊರಕೆ, ಫಿನಾಯಿಲ್ ಕೊಡುತ್ತೇವೆ. ಸ್ವಚ್ಛತಾ ಕಾರ್ಯಕ್ಕೆ ಪಂಚಾಂಗದಲ್ಲಿ ಒಳ್ಳೆಯ ದಿನವನ್ನು ಹುಡುಕಿ ಕೊಡುತ್ತೇವೆ. ಅದನ್ನು ಬಿಟ್ಟು ಸಚಿವರು ಡಿ.ಕೆ. ಸಹೋದರರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರೆ ಅದನ್ನು ಸಹಿಸುವುದಿಲ್ಲ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ರಾಮನಗರದಲ್ಲಿ ಈಗ ಇರುವ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್ಪಿ ಎಲ್ಲರೂ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವರ್ಗಾವಣೆ ಆಗಿ ಬಂದವರೇ. ಇದರಲ್ಲಿ ಡಿ.ಕೆ. ಸಹೋದರರ ಕೈವಾಡ ಏನೂ ಇಲ್ಲ. ಇವರನ್ನು ಜಿಲ್ಲೆಗೆ ಹಾಕುವಂತೆ ಅವರೇನು ಶಿಫಾರಸು ಮಾಡಿಲ್ಲ. ಹೀಗಾಗಿ ಯಾವ ವ್ಯವಸ್ಥೆಯನ್ನು ಸಚಿವರು ಈಗ ಕ್ಲೀನ್‌ ಮಾಡುತ್ತಾರೆ?’ ಎಂದು ಪ್ರಶ್ನಿಸಿದರು.

‘ಆದಾಗ್ಯೂ, ಎಸ್ಪಿ ಅನೂಪ್‌ ಶೆಟ್ಟಿ ಬಗ್ಗೆ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ. ಎಲ್ಲಿ ಜಿಲ್ಲೆಗೆ ಬಂದ ಮೇಲೆ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಂದಾಗಿ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ’ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

‘ಕೆಲವು ಅಧಿಕಾರಿಗಳಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಬಿಡದಿಯ ಎಂ. ಕರೇನಹಳ್ಳಿಯಲ್ಲಿನ ತೋಟಿಗಳ ಏಳು ಕುಟುಂಬಕ್ಕೆ 10 ಎಕರೆ ಭೂಮಿ ಹಂಚಿಕೆ ಮಾಡಲು ರಾಮನಗರದ ಅಧಿಕಾರಿಯೊಬ್ಬರು ₨10 ಲಕ್ಷ ಲಂಚ ಕೇಳುತ್ತಿದ್ದಾರೆ. ಇಂತಹವರನ್ನು ಬೇಕಿದ್ದರೆ ಸ್ವಚ್ಛ ಮಾಡಿ’ ಎಂದರು.

ಕಾಂಗ್ರೆಸ್‌ ಮುಖಂಡ ಕೆ. ಶೇಷಾದ್ರಿ ಮಾತನಾಡಿ ‘ರಾಮನಗರ ವ್ಯಾಪ್ತಿಯಲ್ಲಿ ಅರ್ಕಾವತಿ ನದಿ ಗಬ್ಬೆದ್ದು ನಾರುತ್ತಿದೆ. ಸಚಿವರು ಮೊದಲು ಅದರ ಸ್ವಚ್ಛತೆಯತ್ತ ಗಮನ ಹರಿಸಬೇಕು’ ಎಂದು ದೂರಿದರು.

ಕೆಪಿಸಿಸಿ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ ಮಾತನಾಡಿ ‘ಕನಕಪುರಕ್ಕೆ ಕೊಟ್ಟ ಮೆಡಿಕಲ್‌ ಕಾಲೇಜನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ. ರಾಜೀವ್‌ಗಾಂಧಿ ವಿ.ವಿ. ಕ್ಯಾಂಪಸ್‌ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನೂ ಹಿಂಪಡೆಯುತ್ತಿದೆ’ ಎಂದು ದೂರಿದರು.

ಮುಖಂಡರಾದ ಸಿಎನ್‌ಆರ್‌ ವೆಂಕಟೇಶ್‌, ಬಿ. ರಾಮಚಂದ್ರಯ್ಯ ಇದ್ದರು.

ಮೆಡಿಕಲ್‌ ಕಾಲೇಜಿಗಾಗಿ ಹೋರಾಟ

‘ರಾಮನಗರಕ್ಕೆ ಈಗಾಗಲೇ ರಾಜೀವ್‌ಗಾಂಧಿ ವಿ.ವಿ. ಘೋಷಿಸಿರುವ ಕಾರಣ ಜಿಲ್ಲೆಯ ಕೋಟಾ ಅಡಿ ಕನಕಪುರಕ್ಕೆ ಮೆಡಿಕಲ್‌ ಕಾಲೇಜು ನೀಡುವುದು ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲೇ ತೀರ್ಮಾನ ಆಗಿತ್ತು. ಬಿಜೆಪಿ ಸರ್ಕಾರ ಇಲ್ಲಿಂದ ಕಿತ್ತು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದು ಸರಿಯಲ್ಲ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರ ಜೊತೆಗೆ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರೂ ಹೋರಾಟಕ್ಕೆ ನಿಲ್ಲಲಿದ್ದೇವೆ’ ಎಂದು ಲಿಂಗಪ್ಪ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT