ಬುಧವಾರ, ಏಪ್ರಿಲ್ 1, 2020
19 °C
18 ತಿಂಗಳಲ್ಲಿ ಕಾಮಗಾರಿ ಮುಕ್ತಾಯ: ಸಂಸದ ಡಿ.ಕೆ. ಸುರೇಶ್ ಭರವಸೆ

‘ಬೈರಮಂಗಲ ಕೆರೆ ಶುದ್ಧೀಕರಣಕ್ಕೆ ₹40 ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಿಡದಿಯ ಬೈರಮಂಗಲ ಜಲಾಶಯದ ತಿರುವು ಕಾಲುವೆ ಮತ್ತು ವಿಯರ್ ನಿರ್ಮಿಸುವ ಕಾಮಗಾರಿಯನ್ನು ಸಂಸದ ಡಿ.ಕೆ.ಸುರೇಶ್ ಶುಕ್ರವಾರ ಪರಿಶೀಲಿಸಿದರು.

ಕೆರೆಗೆ ಹೊಸ ರೂಪ ನೀಡುವ ಸಲುವಾಗಿ ₹140 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 18 ತಿಂಗಳಲ್ಲಿ ಈ ಕಾಮಗಾರಿ ಮುಗಿಯಲಿದ್ದು, ಇದರಿಂದ 40 ಗ್ರಾಮಗಳ ಕೆರೆಗಳಿಗೆ ನೀರು ಸಿಗಲಿದೆ ಎಂದರು.

ಕೈಗಾರಿಕೆಗಳಿಂದ ಬರುವ ಶುದ್ಧೀಕರಿಸದ ನೀರು ಹಾಗೂ ನಗರ ಪ್ರದೇಶದಿಂದ ಬರುವ ಚರಂಡಿ ನೀರು ಮತ್ತು ಇನ್ನಿತರೆ ತ್ಯಾಜ್ಯಗಳನ್ನು ನೇರವಾಗಿ ಬೈರಮಂಗಲ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಕೆರೆಯ ನೀರು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದೆ. ಜಲಾಶಯದ ಮೇಲ್ಭಾಗದಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಗ್ರಾಮಾಂತರದ ಹಳ್ಳಿಗಳು, ರಾಜಾಜಿನಗರ, ಪೀಣ್ಯ, ಕುಂಬಳಗೋಡು, ಬಿಡದಿ ಕೈಗಾರಿಕಾ ಪ್ರದೇಶಗಳಿವೆ ಎಂದು ವಿವರಿಸಿದರು.

ತಿರುವು ಕಾಲುವೆ ನಿರ್ಮಾಣ ಮಾಡುವ ಮಾರ್ಗದಲ್ಲಿ ಸಿಎಚ್. 0.35 ಕಿ.ಮೀ. ನಿಂದ 0.60 ಕಿ.ಮೀ ನಲ್ಲಿ ಕೆಐಎಡಿಬಿ ಇಲಾಖೆಯವರು ಸ್ಥಳ ತಮ್ಮ ಭಾಗದಲ್ಲಿದೆ ಎಂದು ತಿಳಿಸಿರುತ್ತಾರೆ. ಸರ್ವೆ ಇಲಾಖೆ ವತಿಯಿಂದ ಗಡಿಯನ್ನು ಗುರುತಿಸಿ ಕೊಡಲು ತಹಶೀಲ್ದಾರ್ ಅವರಿಗೆ ಹಾಗೂ ಭೂ ದಾಖಲೆಗಳ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.

ಕೆರೆಯಿಂದ ತೆಗೆಯುವ ಹೂಳನ್ನು ರೈತರಿಗೆ ಉಚಿತವಾಗಿ ನೀಡಲು ಚಿಂತಿಸಲಾಗುತ್ತಿದೆ. ಕೆರೆ ಸುತ್ತ ತಡೆಗೋಡೆ ರಚಿಸಿ ಶುದ್ಧೀಕರಿಸಿದ ನೀರನ್ನು ಮಾತ್ರ ಕೆರೆಗೆ ಬಿಡಲಾಗುವುದು. ಕೆರೆಯ ಹತ್ತಿರವೇ ನೀರು ಶುದ್ಧೀಕರಿಸುವ ಘಟಕ ಸ್ಥಾಪಿಸಿ, ನೀರನ್ನು ಶುದ್ಧೀಕರಿಸಿ ಜಲಾಶಯಕ್ಕೆ ಬಿಡಲು ಸಹ ಯೋಜಿಸಲಾಗುತ್ತಿದೆ. ಕೆರೆಗೆ ಕಲುಷಿತ ನೀರು ಬಿಡುತ್ತಿರುವುದರಿಂದ ಬೈರಮಂಗಲದ ಸುತ್ತ ಮುತ್ತ ಇರುವ 40 ರಿಂದ 50 ಹಳ್ಳಿಯ ಜನರಿಗೆ ಸೊಳ್ಳೆಗಳ ಕಾಟ ಹಾಗೂ ದುರ್ವಾಸನೆಯಿಂದ ಬಹಳ ತೊಂದರೆಯಾಗುತ್ತಿದೆ. ತೊಂದರೆಯನ್ನು ಪರಿಹರಿಸಲು ಈ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಸ್ಥಳೀಯ ರೈತರು ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ತಿಳಿಸಿದರು.

ಶಾಸಕ ಎ.ಮಂಜುನಾಥ್‌ ಹಾಗೂ ಅಧಿಕಾರಿಗಳು ಜೊತೆಗಿದ್ದರು.

ಗೃಹ ಸಚಿವರ ರಾಜೀನಾಮೆಗೆ ಆಗ್ರಹ

‘ದೆಹಲಿ ಗಲಭೆಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಪ್ರಚೋದನೆಯೇ ಕಾರಣ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು’ ಎಂದು ಸಂಸದ ಡಿ.ಕೆ ಸುರೇಶ್‌ ಆಗ್ರಹಿಸಿದರು. ‘ಗಲಭೆಯಲ್ಲಿ ಅಮಾಯಕರು ಸಾವನ್ನಪ್ಪಿದ್ದಾರೆ. ಬಿಜೆಪಿ ಮುಖಂಡರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿ ‘ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಯಾವಾಗ ಬೇಕಾದರೂ ಆಯ್ಕೆ ಮಾಡಲಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು