ಶುಕ್ರವಾರ, ಜುಲೈ 30, 2021
23 °C
ಕೊರೊನಾ ನಡುವೆ ರೇಷ್ಮೆಬೆಳೆಗಾರರಿಗೆ ಮತ್ತೊಂದು ಸಂಕಷ್ಟ

ರೇಷ್ಮೆಬೆಳೆಗಾರರಿಗೆ ಮತ್ತೊಂದು ಸಂಕಷ್ಟ; ಹಿಪ್ಪನೇರಳೆ ಸೊಪ್ಪಿಗೆ ನುಸಿರೋಗ

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ರೇಷ್ಮೆಗೂಡಿನ ಧಾರಣೆ ಕುಸಿದು ರೈತನ ಆತ್ಮಸ್ಥೈರ್ಯ ಕುಗ್ಗಿಸಿರುವ ಬೆನ್ನಲ್ಲೇ ಹಿಪ್ಪನೇರಳೆ ಗಿಡಕ್ಕೆ ನುಸಿ ಮತ್ತು ಹೇನು ಹುಳು ರೋಗ ತಗುಲಿ ರೇಷ್ಮೆ ಕೃಷಿಗೆ ಕೊಡಲಿಪೆಟ್ಟು ಬಿದ್ದಿದೆ.

ರೈತರಿಗೆ ಯಾವ ಕೃಷಿಯೂ ಕೈ ಹಿಡಿಯದೆ ವಿಮುಖರಾಗುವ ಪರಿಸ್ಥಿತಿಯಲ್ಲಿದ್ದಾಗ ಕೈ ಹಿಡಿದಿದ್ದು ರೇಷ್ಮೆ ಕೃಷಿ. ರೈತನಿಗೆ ನಿರ್ದಿಷ್ಟ ಹಾಗೂ ನಿಶ್ಚಿತ ಲಾಭ ತಂದು ಕೊಟ್ಟಿತ್ತು. ಉತ್ತಮ ಬೆಲೆಯಿಂದ ಉತ್ತೇಜನಗೊಂಡ ರೈತ ರೇಷ್ಮೆ ಕೃಷಿಯತ್ತ ಮುಖ ಮಾಡಿದ್ದ. ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಸಾವಿರಾರು ಯುವಕರು ರೇಷ್ಮೆ ಕೃಷಿಯಿಂದ ಆಕರ್ಷಿತರಾಗಿ ಹಳ್ಳಿಗಳಿಗೆ ವಾಪಸು ಬಂದು ಪಾಳು ಬಿದ್ದ ಒಣಭೂಮಿ ಹದ ಮಾಡಿ ರೇಷ್ಮೆ ಕೃಷಿ ಪ್ರಾರಂಭಿಸಿ ಒಂದರೆಡು ವರ್ಷ ಕೈತುಂಬ ಹಣ ಸಂಪಾದಿಸಿದ್ದರು.

ಕೊರೊನಾದಿಂದ ಬಹುತೇಕರು ತಮ್ಮ ಗ್ರಾಮಗಳಿಗೆ ವಾಪಸು ಬಂದು ರೇಷ್ಮೆ ಕೃಷಿ ಮಾಡಲು ಮುಂದಾಗಿದ್ದಾರೆ. ರೇಷ್ಮೆ ಕೃಷಿ ಉತ್ತೇಜಿಸಲು ಸರ್ಕಾರದ ವತಿಯಿಂದ ಈ ಬಾರಿ ಸಾಮಾಜಿಕ ಅರಣ್ಯ ಇಲಾಖೆ 3ಲಕ್ಷ ಸಸಿಗಳನ್ನು ನರ್ಸರಿಯಲ್ಲಿ ಬೆಳಸಿ ಹೊಸ ನಾಟಿ ಮಾಡಲು ರೈತರಿಗೆ ಉಚಿತವಾಗಿ ನೀಡಿದೆ.

ರೇಷ್ಮೆ ಕೃಷಿಯಲ್ಲಿ ಹೊಸ ಕ್ರಾಂತಿಯಾಗುತ್ತಿದೆ ಎಂದರೆ ತಪ್ಪಾಗಲಾರದು. ಇಡೀ ರಾಜ್ಯದಲ್ಲೇ ರಾಮನಗರ ಜಿಲ್ಲೆ ರೇಷ್ಮೆನಗರಿ ಎಂದು ಹೆಸರು ಪಡದು ಪ್ರಥಮ ಸ್ಥಾನದಲ್ಲಿದ್ದರೆ, ಕನಕಪುರ ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮವಾಗಿದೆ. ಇಂತಹ ಉತ್ತಮ ಸ್ಥಿತಿಯಲ್ಲಿದ್ದ ರೇಷ್ಮೆಗೆ ಕೊರೊನಾದಿಂದ ಬರಸಿಡಿಲು ಬಡಿದಿದೆ. ಇದರ ಅದರ ಪರಿಣಾಮವಾಗಿ ₹400 ಗಡಿದಾಟಿದ್ದ ರೇಷ್ಮೆ ಗೂಡಿನ ಬೆಲೆ ದಿಢೀರನೆ ₹150 ಕ್ಕೆ ಕುಸಿದಿದೆ. ಇದರ ನಡುವೆ ರೇಷ್ಮೆ ಸೊಪ್ಪಿಗೆ ಹೇನು ಮತ್ತು ನುಸಿ ರೋಗ ತಗುಲಿ ಕೃಷಿಕರನ್ನು ಕಂಗಾಲು ಮಾಡಿದೆ. 

ಕಡ್ಡಿ ಕಟಾವು ಮಾಡಿ ಗಿಡ ಚಿಗುರುತ್ತಿದ್ದಂತೆ ಹೇನು ಮತ್ತು ನುಸಿ ಹುಳುಗಳು ಸೊಪ್ಪಿನಲ್ಲಿರುವ ರಸ ಹೀರಿಕೊಂಡು ಬೆಂಡಾಗಿಸುತ್ತಿವೆ. ಚಿಗುರು ಹತ್ತಾರು ಕವಲುಗಳಾಗಿ ಸೊಪ್ಪೆ ಬಾರದಂತಾಗುತ್ತಿದೆ. ಈ ಸೊಪ್ಪು ತಿಂದರೆ ರೇಷ್ಮೆ ಹುಳುಗಳು ಬೆಳವಣಿಗೆಯಾಗುವುದಿಲ್ಲ. 100 ಮೊಟ್ಟೆ ಮೇಯಿಸುವ ತೋಟದಲ್ಲಿ 50 ಮೊಟ್ಟೆಗೆ ಸೊಪ್ಪು ಸಾಕಾಗುವುದಿಲ್ಲ ಎನ್ನುತ್ತಾರೆ ರೈತರು. 

ಕಳೆದ ವರ್ಷ ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ನುಸಿ ಮತ್ತು ಹೇನು ರೋಗ ಈ ಬಾರಿ ತಾಲ್ಲೂಕಿನ ಎಲ್ಲ ಕಡೆ ಹರಡಿಕೊಂಡಿದೆ. ಕಳೆದ ಎರಡು ತಿಂಗಳಿನಿಂದ ಈ ರೋಗ ವ್ಯಾಪಕವಾಗಿ ಹರಡುತ್ತಿದ್ದು ಇಲಾಖೆ ಇದುವರೆಗೂ ರೋಗ ನಿಯಂತ್ರಣಕ್ಕೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎನ್ನುತ್ತಾರೆ ರೈತರು.  

ಇದೇ ರೀತಿ ಹೇನು ಮತ್ತು ನುಸಿ ರೋಗ ಉಲ್ಬಣಿಸುತ್ತಾ ಹೋದರೆ ಮುಂದೆ ರೇಷ್ಮೆ ಬೆಳೆಯೇ ಕಷ್ಟವಾಗಲಿದೆ ಎನ್ನುತ್ತಾರೆ ಬೇಕುಪ್ಪೆ ಗ್ರಾಮದ ಯುವ ರೈತ ಶಿವಕುಮಾರ್‌. ರೇಷ್ಮೆ ಇಲಾಖೆ ಎಚ್ಚೆತ್ತುಕೊಂಡು ರೋಗ ಸಂಪೂರ್ಣವಾಗಿ ನಿಯಂತ್ರಣ ಮಾಡಲು ಕಾರ್ಯಕ್ರಮ ರೂಪಿಸಬೇಕು ಎನ್ನುತ್ತಾರೆ ತಾಲ್ಲೂಕಿನ ರೈತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು