ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದ ರಿಕ್ಕಿ ರೈ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು
ಬಿಡದಿ (ರಾಮನಗರ): ‘ನನ್ನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನ್ಯಾಯ ಸಿಗಲೇಬೇಕು. ಇಲ್ಲವಾದಲ್ಲಿ ನಾವು ಪ್ರತೀಕಾರ ತೆಗೆದುಕೊಳ್ಳುತ್ತೇವೆ...’ – ತಮ್ಮ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸ್ ವಿಚಾರಣೆಗೆ ಹಾಜರಾದ ಭೂಗತ ಲೋಕದ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ಇದು.
‘ಏ. 18ರಂದು ರಾತ್ರಿ ಮನೆಯಿಂದ ಹೊರಗಡೆ ಬಂದಾಗ ನನ್ನ ಕಾರಿನ ಮೇಲೆ ಶೂಟರ್ ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ನನ್ನ ಮೂಗು ಕಟ್ ಆಗಿದ್ದು, ಕೈಗೂ ಗುಂಡು ತಗುಲಿತು. ದೇವರ ದಯೆಯಿಂದ ಏನು ಆಗಲಿಲ್ಲ. ನಾನು ಸಹ ಬಲಿಷ್ಠವಾಗಿದ್ದೇನೆ. ಘಟನೆ ಹಿಂದಿರುವ ಶಂಕಿತರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನದಾಗಿ ಬೇರೆನೂ ಹೇಳಲು ಸಾಧ್ಯವಿಲ್ಲ’ ಎಂದು ರಿಕ್ಕಿ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಾಜಿ ಅಂಗರಕ್ಷಕ ಮೊನ್ನಪ್ಪ ವಿಠ್ಠಲ ಬಂಧನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಕ್ಕಿ, ‘ತನಿಖೆ ನಡೆಯುತ್ತಿದ್ದು, ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.
ಬೆಳಿಗ್ಗೆ 11.45ರ ಸುಮಾರಿಗೆ ಬಿಡದಿ ಪೊಲೀಸ್ ಠಾಣೆಗೆ ತಮ್ಮ ವಕೀಲರು, ಅಂಗರಕ್ಷಕರು ಹಾಗೂ ಕೆಲ ಬೆಂಬಲಿಗರೊಂದಿಗೆ ಬಂದ ರಿಕ್ಕಿ ಸುಮಾರು 4 ತಾಸು ವಿಚಾರಣೆ ಎದುರಿಸಿ, ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದರು. ಎಎಸ್‌ಪಿ ರಾಮಚಂದ್ರಪ್ಪ, ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್ ಹಾಗೂ ಬಿಡದಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ವಿಚಾರಣೆ ನಡೆಸಿದರು.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ರಿಕ್ಕಿ ರೈ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಪ್ರಕರಣದ ಆರೋಪಿಗಳಾದ ಮುತ್ತಪ್ಪ ರೈ ಆಪ್ತರಾಗಿದ್ದ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ, ಎರಡನೇ ಪತ್ನಿ ಅನುರಾಧ, ರಿಯಲ್ ಎಸ್ಟೇಟ್ ಉದ್ಯಮಿ ನಿತೇಶ್ ಶೆಟ್ಟಿ ವಿಚಾರಣೆ ನಡೆಸಿದ್ದ ಪೊಲೀಸರು, ನಂತರ ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ಅವರಿಗೆ ನೋಟಿಸ್ ನೀಡಿದ್ದರು.
6ಕ್ಕೆ ಮತ್ತೆ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತೊಂದು ಸುತ್ತಿನ ವಿಚಾರಣೆಗಾಗಿ ಜೂನ್ 6ರಂದು ಠಾಣೆಗೆ ಬರಲು ಸೂಚಿಸಲಾಗಿದೆ. ಕೃತ್ಯದಲ್ಲಿ ರಿಕ್ಕಿ ಮಾಜಿ ಅಂಗರಕ್ಷಕ ಮೊನ್ನಪ್ಪ ವಿಠ್ಠಲ ಸಹ ಭಾಗಿಯಾಗಿರುವ ಆರೋಪದ ಮೇಲೆ ಆತನನ್ನು ಏಪ್ರಿಲ್ 24ರಂದೇ ಬಂಧಿಸಲಾಗಿತ್ತು. ವಿಚಾರಣೆಗಾಗಿ 10 ದಿನ ಪೊಲೀಸ್ ವಶಕ್ಕೆ ಪಡೆದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತ ಇನ್ನೂ ಜೈಲಿನಲ್ಲಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.