ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಪಾರದರ್ಶಕತೆ ಅಳವಡಿಸಿಕೊಳ್ಳಿ

ಕನಕಪುರ: ಮೊದಲನೆ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ
Last Updated 7 ಡಿಸೆಂಬರ್ 2019, 13:17 IST
ಅಕ್ಷರ ಗಾತ್ರ

ಕಸಬಾ (ಕನಕಪುರ): ನರೇಗಾ ಯೋಜನೆ ಬಳಸಿಕೊಂಡು ರೈತರು ಮಾಡುವ ಕೆಲಸದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ಕೊಟ್ಟರೆ ರೈತರು ಕೂಡ ಇದನ್ನೇ ಅನುಸರಿಸಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಶ್ರೀನಿವಾಸ್‌ ಎಚ್ಚರಿಸಿದರು.

ಇಲ್ಲಿನ ಕಸಬಾ ಹೋಬಳಿ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಮೊದಲನೆ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಅವರು ಮಾತನಾಡಿದರು.

ನರೇಗಾ ಯೋಜನೆಯನ್ನು ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆಯಡಿ ಅನುಷ್ಠಾನಗೊಳಿಸಬಹುದಾಗಿದೆ. ಪ್ರತಿ ಕೂಲಿ ಕಾರ್ಮಿಕನಿಗೂ 100 ದಿನ ಕೂಲಿ ನೀಡಬೇಕೆಂಬುದು ಯೋಜನೆ ಉದ್ದೇಶ. ರೈತರು ಮೊದಲು ತಮ್ಮ ವೈಯಕ್ತಿಕ ಕಾಮಗಾರಿಗಳಿಗ ಜಾಬ್‌ ಕಾರ್ಡ್ ಬಳಸಿ ನಂತರ ಸಮುದಾಯದ ಕಾಮಗಾರಿಗಳಿಗೆ ಬಳಸಬೇಕೆಂದು ಹೇಳಿದರು.

ಯೋಜನೆಯಲ್ಲಿ ಧಾರ್ಮಿಕ ಮತ್ತು ಖಾಸಗಿ ಸ್ಥಳ ಬಿಟ್ಟು ಉಳಿದಂತೆ ಎಲ್ಲ ಕೆಲಸಗಳಿಗೂ ಬಳಸಬಹುದಾಗಿದೆ. ಶಾಲಾ –ಕಾಲೇಜು ವಿದ್ಯಾರ್ಥಿಗಳು, ಮರಣ ಹೊಂದಿದವರು, ಗ್ರಾಮ ತೊರೆದವರ ಹೆಸರಿನಲ್ಲಿ ಕೂಲಿ ಹಣ ಪಡೆಯುವಂತಿಲ್ಲ ಎಂದರು.

ಜಿಲ್ಲೆಯಲ್ಲಿ ಕೂಲಿ ಮೊತ್ತ ಮತ್ತು ಸಾಮಗ್ರಿ ವೆಚ್ಚ ಶೇಕಡ 40:60 ಅನುಪಾತದಲ್ಲಿರಬೇಕು. ಅನುಪಾತ ಇಲ್ಲದಿದ್ದರೆ ಕೂಲಿ ಮೊತ್ತ ಮಾತ್ರ ಬರುತ್ತದೆ ಎಂದು ತಿಳಿಸಿದರು.

ಜಮೀನಿನಲ್ಲಿ ಬದು ನಿರ್ಮಾಣಕ್ಕೆ ನರೇಗಾದಲ್ಲಿ ಹಣ ಸಿಗಲಿದೆ. ಜಾಬ್‌ಕಾರ್ಡ್ ಬಳಸಿ ಕೆಲಸ ಮಾಡಿದರೆ ಖಂಡಿತ ಪ್ರತಿವರ್ಷ ಒಂದು ಎಕರೆಗೆ ₹12ಸಾವಿರ ಹಣ ಪಡೆಯಬಹುದಾಗಿದೆ ಎಂದು ಹೇಳಿದರು.

ರೇಷ್ಮೆ ಇಲಾಖೆ ಪುಟ್ಟಮಾದಯ್ಯ, ಸಾಮಾಜಿಕ ಅರಣ್ಯ ಇಲಾಖೆ ಸೋಮು ಇಲಾಖೆ ಕಾರ್ಯಕ್ರಮ ಸಭೆಗೆ ತಿಳಿಸಿದರು. ಅರಣ್ಯೀಕರಣ ಯೋಜನೆಯಲ್ಲಿ ಗಿಡ ನೆಡುವವರು ಈಗಲೇ ಪಂಚಾಯಿತಿಯಲ್ಲಿ ನೋಂದಣಿ ಮಾಡಿಸಿದರೆ ಮುಂದಿನ ಜೂನ್‌ – ಜುಲೈನಲ್ಲಿ ಸಸಿ ಕೊಡಲಾಗುವುದು ಎಂದರು.

ಗಿಡಗಳನ್ನು ನೆಟ್ಟು ಮೂರು ವರ್ಷ ಕಾಪಾಡಲು ನರೇಗಾ ಯೋಜನೆಯಲ್ಲಿ ಹಣ ಸಿಗಲಿದೆ. ರೇಷ್ಮೆ ಇಲಾಖೆಯಲ್ಲಿ ಹೊಸದಾಗಿ ನಾಟಿ ಮಾಡಲು ಮತ್ತು ರೇಷ್ಮೆ ಕಡ್ಡಿ ನರ್ಸರಿ ಮಾಡಲು, ಚಂದ್ರಿಕೆ ಮನೆ, ಹುಳು ಸಾಕಾಣಿಕೆ ಮನೆ ನಿರ್ಮಾಣ ಮಾಡಲು ಮುಕ್ತವಾದ ಅವಕಾವಿದೆ. ಇಲಾಖೆ ನಿಯಮಾನುಸಾರವಾಗಿ ಮಾಡಬೇಕು. ಮೊದಲು ಜಿಪಿಎಸ್‌ ಮಾಡಿಸಿ ನಂತರ ಕೆಲಸ ಮಾಡಬೇಕೆಂದು ಹೇಳಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜು, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಮೇಲ್ವಿಚಾರಕ ಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಮ್ಮ, ಮಾಜಿ ಉಪಾಧ್ಯಕ್ಷ ಜೈ ಲಿಂಗೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಪ್ಪ ರೇಣಿ, ಪಂಚಾಯಿತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT