ಶುಕ್ರವಾರ, ಫೆಬ್ರವರಿ 28, 2020
19 °C
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಪುಷ್ಪಲತಾ ಜಿ.ರಾಯ್ಕರ್ ಅಭಿಮತ

ಲಿಂಗಾನುಪಾತ ಸರಿದೂಗಿಸಲು ಪುಷ್ಪಲತಾ ಜಿ.ರಾಯ್ಕರ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಹೆಚ್ಚುತ್ತಿರುವ ಭ್ರೂಣ ಹತ್ಯೆಯಿಂದಾಗಿ ಲಿಂಗಾನುಪಾತ ಕುಸಿತವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಪುಷ್ಪಲತಾ ಜಿ.ರಾಯ್ಕರ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಹಿಳೆ ಕೇಂದ್ರ ಹಾಗೂ ಮಹಿಳಾ ಶಕ್ತಿ ಕೇಂದ್ರ ವತಿಯಿಂದ ನಡೆದ ಜಿಲ್ಲಾಮಟ್ಟದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ‘ಬೆಟಿ ಬಚಾವ್ ಬೆಟಿ ಪಡಾವ್’ ವಿಶೇಷ ಯೋಜನೆ ರೂಪಿಸಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ,ಲಿಂಗಾನುಪಾತ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಮೂಢ ನಂಬಿಕೆ, ಅನಕ್ಷರತೆ, ಕುಟುಂಬದ ಸದಸ್ಯರ ಒತ್ತಡ ಹಲವು ಕಾರಣದಿಂದ ಹೆಣ್ಣು ಮಗುವಿನ ಮೇಲೆ ನಿರ್ಲಕ್ಷ್ಯದ ಭಾವನೆ ಮೂಡುತ್ತಿದೆ. ಭ್ರೂಣಹತ್ಯೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳು ಮುಂದುವರಿದಿವೆ ಎಂದು ಕಳವಳ ವ್ಯಕ್ತಪಡಿಸಿದರು.

2001ರ ಗಣತಿ ಪ್ರಕಾರ 1000 ಪುರುಷರಿಗೆ 928 ಮಹಿಳೆಯರು, 2011ರಲ್ಲಿ 1000 ಪುರುಷರಿಗೆ 918 ಮಹಿಳೆಯರು ಇದ್ದಾರೆ. ಹೆಣ್ಣು – ಗಂಡು ಸರಿ ಸಮಾನರು. ಬದುಕು ಸಾಗಿಸಲು ಇಬ್ಬರು ಅರ್ಹರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 13 ಮತ್ತು 14ವರ್ಷಕ್ಕೆ ಮದುವೆ, ಬಾಲ್ಯವಿವಾಹ ಕಾಯ್ದೆ ವ್ಯಾಪ್ತಿಗೆ ಬರಲಿದೆ. 18ವರ್ಷದ ನಂತರ ಮದುವೆಯಾಗಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೆಣ್ಣು ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಹೋರಾಟ ನಡೆಸುವ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. 

ಭ್ರೂಣ ಹತ್ಯೆ ಕಾಯ್ದೆ ನೋಡಲ್ ಅಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, 1990ರಿಂದ ಈವರೆಗೆ 1ಕೋಟಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಮಾಡಲಾಗಿದೆ. ವಾರ್ಷಿಕ 5ಲಕ್ಷ ಹೆಣ್ಣು ಮಕ್ಕಳು ಜೀವ ಕಳೆದುಕೊಳ್ಳತ್ತಿದ್ದಾರೆ. ವಾರ್ಷಿಕ ಒಂದು ಲಕ್ಷ ಭ್ರೂಣ ಹತ್ಯೆಯಾಗುತ್ತಿದೆ ಎಂಬುದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ.1870 ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಭ್ರೂಣಹತ್ಯೆ ಕಾಯ್ದೆ ಮೊದಲ ಬಾರಿಗೆ ಜಾರಿಗೊಳಿಸಲಾಗಿತ್ತು. 1994ರಲ್ಲಿ ಮತ್ತೊಮ್ಮೆ ಜಾರಿಗೊಳಿಸಿ ಪ್ರಸ್ತುತ ಕಠಿಣ ಶಿಕ್ಷೆ ಮತ್ತು ದಂಡವನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಭವಿಷ್ಯದಲ್ಲಿ ಲಿಂಗಾನುಪಾತ ಸರಿದೂಗಿಸದಿದ್ದರೆ 5ರಿಂದ 10ಗಂಡಸರು ಒಂದು ಮಹಿಳೆಗಾಗಿ ಪರದಾಡಬೇಕಾಗುತ್ತದೆ. ಲೈಂಗಿಕ ಅತ್ಯಾಚಾರ, ಅಪಹರಣ, ಮಾರಾಟ, ಲೈಂಗಿಕತೃಷೆಗಾಗಿ ಅಮಾಯಕ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

‌ವಕೀಲ ಕೆಂಪೇಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ, ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣಾಧಿಕಾರಿ ಪದ್ಮಾವತಿ, ಮಹಿಳಾ ವೇದಿಕೆ ಸಂಚಾಲಕಿ ಲಲಿತಮ್ಮ, ಪ್ರಾಂಶುಪಾಲ ಶಿವಶಂಕರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು