ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಪರಿವರ್ತಕ, ಕಂಬಗಳು

ಸುರಕ್ಷತೆ, ನಿರ್ವಹಣೆ ಹೊಣೆ ಮರೆತ ಬೆಸ್ಕಾಂ: ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಚಿತ
Published 9 ಡಿಸೆಂಬರ್ 2023, 6:26 IST
Last Updated 9 ಡಿಸೆಂಬರ್ 2023, 6:26 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿರುವ ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳ ಪೈಕಿ ಹಲವು ಅಪಾಯಕಾರಿ ಸ್ಥಿತಿಯಲ್ಲಿವೆ. ಮುಖ್ಯರಸ್ತೆಗಳಿಂದಿಡಿದು ಗಲ್ಲಿ ರಸ್ತೆಗಳ ಅಲ್ಲಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳ ಬಳಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವುದು ಖಚಿತ. ಸುರಕ್ಷತೆ ಮರೀಚಿಕೆಯಾಗಿರುವ ಈ ಸ್ಥಳಗಳಲ್ಲಿ ಅಪಾಯ ಲೆಕ್ಕಿಸದೆ ಜನ ಓಡಾಡುತ್ತಿದ್ದಾರೆ.

ನಗರದ ಬೆಂಗಳೂರು–ಮೈಸೂರು ರಸ್ತೆ, ಮುಖ್ಯರಸ್ತೆ, ಮಾರುಕಟ್ಟೆ, ಗಾಂಧಿನಗರ, ಐಜೂರು, ವಿವೇಕಾನಂದ ನಗರ, ಕೆಂಪೇಗೌಡನ ದೊಡ್ಡಿ, ರಾಯರದೊಡ್ಡಿ, ರೈಲು ನಿಲ್ದಾಣ ರಸ್ತೆ, ಕಾಲೇಜು ರಸ್ತೆ, ವಾಟರ್ ಟ್ಯಾಂಕ್ ವೃತ್ತ, ಎಂ.ಜಿ. ರಸ್ತೆ, ಐಜೂರು, ಕನಕಪುರ ರಸ್ತೆ ಸೇರಿದಂತೆ ನಗರದಲ್ಲಿರುವ ಬಹುತೇಕ ವಿದ್ಯುತ್ ಪರಿವರ್ತಕಗಳಿರುವೆಡೆ ಸುರಕ್ಷತೆಗೆ ಒತ್ತು ಕೊಟ್ಟಿಲ್ಲ. ಕೆಲವೆಡೆ ಕಂಬಗಳು ಹಳೆಯದಾಗಿ ಶಿಥಿಲಗೊಂಡಿದ್ದರೂ ಗಮನಿಸಿಲ್ಲ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟ ಘಟನೆ ಬೆನ್ನಲ್ಲೇ, ‘ಪ್ರಜಾವಾಣಿ’ಯು ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿರುವ ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳ ಸುರಕ್ಷತೆ ಕುರಿತು ನಡೆಸಿದ ರಿಯಾಲಿಟಿ ಚೆಕ್‌, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯಿತು.

ಕಂಬಕ್ಕೆ ಹೊಂದಿಕೊಂಡ ಅಂಗಡಿ: ನಗರದ ಮುಖ್ಯ ರಸ್ತೆ ಸೇರಿದಂತೆ ಕೆಲ ಬೀದಿಗಳಲ್ಲಿರುವ ಗೂಡಂಗಡಿಗಳು ವಿದ್ಯುತ್ ಕಂಬ ಅಥವಾ ಪರಿವರ್ತಕ್ಕೆ ಹೊಂದಿಕೊಂಡಂತಿವೆ. ನಗರದೊಳಗೆ ಒಂದು ಸುತ್ತು ಹಾಕಿದರೆ, ಕಂಬಗಳಿಗೆ ಹಗ್ಗ ಕಟ್ಟಿ ಗೂಡಂಗಡಿ ಮಾಡಿಕೊಂಡಿರುವ ಅಥವಾ ಅದನ್ನು ಸೇರಿಸಿಯೇ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವವರ ದರ್ಶನವಾಗುತ್ತದೆ. ಮಳೆ ಮತ್ತು ಗಾಳಿ ಸಂದರ್ಭದಲ್ಲಿ ಸ್ವಲ್ಪ ಯಡವಟ್ಟಾದರೂ ಅಪಾಯ ತಪ್ಪಿದ್ದಲ್ಲ.

ಇನ್ನುಳಿದೆಡೆ ವಿದ್ಯುತ್ ಕಂಬಗಳಿರುವ ಸ್ಥಳದಲ್ಲೇ ವಿವಿಧ ರೀತಿಯ ಕಸವನ್ನು ತಂದು ಎಸೆಯುತ್ತಾರೆ. ತರಕಾರಿ, ಆಹಾರ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯದ ರಾಶಿಯು ಬೀದಿ ಹಸು, ಹೋರಿ ಹಾಗೂ ನಾಯಿಗಳು ಆಹಾರದ ತಾಣವಾಗಿದೆ. ಅತ್ಯಂತ ಕೆಳಭಾಗದಲ್ಲಿರುವ ವೈಯರ್‌ಗಳು ಸ್ವಲ್ಪ ತಾಕಿದರೂ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ.

ಕಂಬವೇರಿದ ಬಳ್ಳಿ: ಕೆಲವೆಡೆ ವಿವಿಧ ರೀತಿಯ ಬಳ್ಳಿಗಳು ವಿದ್ಯುತ್ ಕಂಬಗಳನ್ನು ಏರಿ ಕುಳಿತಿವೆ. ಇನ್ನು ಅದರ ಸುತ್ತಮುತ್ತಲೂ ಸುಳಿಯಲಾರದಂತಹ ಕುರುಚಲು ಕಾಡು ನಿರ್ಮಾಣವಾಗಿದೆ. ವಿದ್ಯುತ್ ತಂತಿಗಳಿರುವ ಮಾರ್ಗದಲ್ಲಿ ಹಲವೆಡೆ ಮರದ ಟೊಂಗೆಗಳಿವೆ. ಮಳೆ, ಗಾಳಿ ಹಾಗೂ ಒಣಗಿ ತಂತಿಗಳ ಮೇಲೆ ಅಥವಾ ಕಂಬಗಳ ಮೇಲೆ ಬೀಳಬಹುದಾದ ಅಪಾಯದಲ್ಲಿ ಹಲವು ಕಂಬಗಳಿವೆ.

‘ಬೆಸ್ಕಾಂನವರು ವಿದ್ಯುತ್ ತಂತಿ ಸಾಗಿರುವ ಮಾರ್ಗದಲ್ಲಿರುವ ಮರದ ಕೊನೆಗಳು ತಂತಿ ಸಮೀಪ ಬಂದಿದ್ದರೆ, ಅವುಗಳನ್ನು ಕತ್ತರಿಸಬೇಕು. ಇನ್ನು ಅಕ್ಕಪಕ್ಕದಲ್ಲೇನಾದರೂ ಮರಗಳು ಒಣಗಿದ್ದರೆ ಅಥವಾ ಗಾಳಿಗೆ ಬಾಗಿದ್ದರೆ ಬೆಸ್ಕಾಂನನವರು ಅವುಗಳನ್ನು ಸಹ ಕತ್ತರಿಸಬೇಕು. ಇಲ್ಲದಿದ್ದರೆ, ಮಳೆ–ಗಾಳಿಗೆ ಅವು ತಂತಿ ಮೇಲೆ ಬಿದ್ದು ದೊಡ್ಡ ಅನಾಹುತವೇ ಸಂಭವಿಸುತ್ತದೆ. ಮಳೆಗಾಲದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಅನಾಹುತ ಸಂಭವಿಸಿದಾಗ ಎಚ್ಚೆತ್ತುಕೊಳ್ಳುವ ಬದಲು, ಈಗಲೇ ಮುಂಜಾಗ್ರತೆ ವಹಿಸಬೇಕು’ ಎಂದು ಅರ್ಕಾವತಿ ಬಡಾವಣೆಯ ರಕ್ಷಿತ್ ‘‍ಪ್ರಜಾವಾಣಿ’ಗೆ ಒತ್ತಾಯಿಸಿದರು.

ಕಂಬವೇ ಆಧಾರ: ನಗರದಲ್ಲಿ ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ತಾವೇನಾದರೂ ಕಾರ್ಯಕ್ರಮ ಆಯೋಜಿಸಿದಾಗ ವಿದ್ಯುತ್ ಕಂಬಳಿಗೆ ಫ್ಲೆಕ್ಸ್ ಅಳವಡಿಸುವುದು, ಬ್ಯಾನರ್ ಕಟ್ಟುವುದು ಸಾಮಾನ್ಯವಾಗಿದೆ. ಅನಧಿಕೃತ ಕೇಬಲ್‌ಗಳು ಮತ್ತು ಬಾಕ್ಸ್‌ಗಳ ಅಳವಡಿಕೆ ಸಹ ಎಗ್ಗಿಲ್ಲದೆ ನಡೆದಿದೆ. ಆದರೆ, ಬೆಸ್ಕಾಂ ಅಧಿಕಾರಿಗಳು ಮಾತ್ರ ಅದ್ಯಾವುದನ್ನೂ ಗಮನಿಸದ ಕಣ್ಮುಚ್ಚಿ ಕುಳಿತಿದ್ದಾರೆ.

‘ನಗರದ ಪ್ರದೇಶಲ್ಲಿ ವಿದ್ಯುತ್ ಕಂಬಗಳ ಬದಲು, ಭೂಗತವಾಗಿ (ಅಂಡರ್‌ಗ್ರೌಂಡ್‌) ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇದರಿಂದಾಗಿ ಸುರಕ್ಷತೆಗೂ ಒತ್ತು ಕೊಟ್ಟಂತಾಗುತ್ತದೆ. ಕಂಬಗಳನ್ನು ಅಳವಡಿಸಿರುವ ಕಾರಣಕ್ಕೆ ಎಷ್ಟೋ ಸಲ ಅನಾಹುತ ಸಂಭವಿಸಿದೆ. ರಸ್ತೆ ಬದಿ ಇರುವ ಕಂಬಗಳಿಗೆ, ಬೇಕಾಬಿಟ್ಟಿ ಬರುವ ವಾಹನಗಳು ಗುದ್ದಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಬೆಸ್ಕಾಂನವರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಮುಖ್ಯರಸ್ತೆಯ ವಿಶ್ವನಾಥ್ ಹೇಳಿದರು.

ರಾಮನಗರದ ಹಳೇ ಬಸ್ ನಿಲ್ದಾಣದ ಬಳಿಯ ಗೂಡಂಗಡಿಗೆ ಆಧಾರವಾಗಿರುವ ವಿದ್ಯುತ್ ಕಂಬ 
ರಾಮನಗರದ ಹಳೇ ಬಸ್ ನಿಲ್ದಾಣದ ಬಳಿಯ ಗೂಡಂಗಡಿಗೆ ಆಧಾರವಾಗಿರುವ ವಿದ್ಯುತ್ ಕಂಬ 
ರಾಮನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕದ ಸುತ್ತ ಯಾವುದೇ ಸುರಕ್ಷತೆ ಇಲ್ಲ
ರಾಮನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕದ ಸುತ್ತ ಯಾವುದೇ ಸುರಕ್ಷತೆ ಇಲ್ಲ
ಐಜೂರು ವೃತ್ತದ ಬಳಿ ಇರುವ ಅಸುರಕ್ಷಿತ ಟ್ರಾನ್ಸ್‌ಫಾರ್ಮರ್ ಬಳಿಯೇ ಬೈಕ್‌ಗಳನ್ನು ನಿಲ್ಲಿಸಿರುವುದು
ಐಜೂರು ವೃತ್ತದ ಬಳಿ ಇರುವ ಅಸುರಕ್ಷಿತ ಟ್ರಾನ್ಸ್‌ಫಾರ್ಮರ್ ಬಳಿಯೇ ಬೈಕ್‌ಗಳನ್ನು ನಿಲ್ಲಿಸಿರುವುದು
ಪರಿವರ್ತಕದ ಸುತ್ತ ಬೇಲಿಯೇ ಇಲ್ಲ
ಜನನಿಬಿಡ ಸ್ಥಳ ಸೇರಿದಂತೆ ಯಾವುದೇ ಜಾಗದಲ್ಲಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಿದರೆ ಅಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಂಬದ ಸುತ್ತ ಮನುಷ್ಯರು ಮತ್ತು ಪ್ರಾಣಿಗಳು ಸುಳಿಯದಂತೆ ಬೇಲಿ ನಿರ್ಮಿಸಬೇಕು. ಆದರೆ ನಗರದ ಬಹುತೇಕ ಪರಿವರ್ತಕಗಳ ಬಳಿ ಇಂತಹ ಯಾವುದೇ ಸುರಕ್ಷತೆ ಇಲ್ಲ. ‘ಬೆಸ್ಕಾಂನವರು ನಿರ್ಲಕ್ಷ್ಯದಿಂದಾಗಿಯೇ ವ್ಯಾಪಾರಿಗಳು ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಒತ್ತರಿಸಿಕೊಂಡು ಅವುಗಳನ್ನು ಬಳಸಿಕೊಂಡೇ ಅಂಗಡಿ ಮಾಡಿಕೊಂಡಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಕಂಬಗಳ ಸುತ್ತ ಯಾರೂ ಸುಳಿಯದಂತೆ ಬೇಲಿ ನಿರ್ಮಿಸಬೇಕು. ಜೊತೆಗೆ ಬೆಸ್ಕಾಂ ಜಾಗೃತ ದಳದವರು ಸಹ ಆಗಾಗ ನಗರದೊಳಗೆ ಸುತ್ತಾಡಿ ಕಾರ್ಯಾಚರಣೆ ನಡೆಸಬೇಕು. ಕಂಬವನ್ನು ಸೇರಿಸಿ ಟಾರ್ಪಲಿನ್ ಕಟ್ಟಿ ಯಾರಾದರೂ ವ್ಯಾಪಾರ ಮಾಡುತ್ತಿದ್ದರೆ ಬುದ್ಧಿವಾದ ಹೇಳಿ ತೆಗೆಸಬೇಕು. ಅದಕ್ಕೂ ಬಗ್ಗದಿದ್ದರೆ ಅವರನ್ನ ಸ್ಥಳಾಂತರಿಸಬೇಕು’ ಎಂದು ಐಜೂರಿನ ಶಿವರಾಜು ಸಲಹೆ ನೀಡಿದರು.
ಅವಘಡಕ್ಕೂ ಮುಂಚೆ ಎಚ್ಚೆತ್ತುಕೊಳ್ಳಬೇಕು ವಿದ್ಯುತ್‌ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಸ್ವಲ್ಪ ವ್ಯತ್ಯಾಸವಾದರೂ ಜೀವಹಾನಿ ಸಂಭವಿಸುವ ಅಪಾಯವಿರುತ್ತದೆ. ಬೆಸ್ಕಾಂನವರು ಕೂಡಲೇ ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅವಘಡ ಸಂಭವಿಸುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕು
– ಮಲ್ಲರಾಜೇ ಅರಸ್ ನಿವೃತ್ತ ನೌಕರ ರಾಮನಗರ
ಸುರಕ್ಷತೆ ನಿರ್ವಹಣೆಯಲ್ಲೂ ನಿರ್ಲಕ್ಷ್ಯ ನಗರವಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬ ಮತ್ತು ಪರಿವರ್ತಕಗಳ ಸುರಕ್ಷತೆ ಮತ್ತು ನಿರ್ವಹಣೆಯಲ್ಲಿ ಬೆಸ್ಕಾಂ ಲೋಪ ಎದ್ದು ಕಾಣುತ್ತದೆ. ಮಳೆ–ಗಾಳಿ ಬಂದರೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗಳ ಮೇಲೆ ಟೊಂಗೆ ಅಥವಾ ಮರ ಬಿದ್ದು ರಾತ್ರಿಯಿಡೀ ವಿದ್ಯುತ್ ಇಲ್ಲದೆ ದಿನ ಕಳೆಯುವುದು ಸಾಮಾನ್ಯವಾಗಿದೆ. ಬೆಂಗಳೂರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಕಡೆಯೂ ಸುರಕ್ಷತಾ ಕ್ರಮ ಕೈಗೊಳ್ಳಬೇಕು.
– ಕುಂಬಾಪುರ ಬಾಬು ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT