ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ಟ್ಯಾಕ್ಸಿ ಚಾಲಕ ಪ್ರತಾಪ್‌ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

Last Updated 1 ಏಪ್ರಿಲ್ 2021, 12:34 IST
ಅಕ್ಷರ ಗಾತ್ರ

ರಾಮನಗರ: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲ್ಲೂಕಿನ ತುಂಬೇನಹಳ್ಳಿಯ ಕ್ಯಾಬ್ ಚಾಲಕ ಪ್ರತಾಪ್ ಮನೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರತಾಪ್‌ರ ತಾಯಿ ಸುಶೀಲಮ್ಮ, ತಂದೆ ಕೃಷ್ಣಪ್ಪ ಅವರಿಗೆ ನಿಖಿಲ್‌ ಸಾಂತ್ವನ ಹೇಳಿದರು. ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಬಹಳಷ್ಟು ಯುವಕರು ಸ್ವ ಉದ್ಯೋಗ ಮಾಡಬೇಕೆಂದು ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಅನೇಕ ಕ್ಷೇತ್ರಗಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಂಬೇನಹಳ್ಳಿ ಗ್ರಾಮದ ಪ್ರತಾಪ್ ಸಹ ಸಾಲದ ನೆರವಿನಿಂದ ಕ್ಯಾಬ್ ಚಲಾಯಿಸುತ್ತಿದ್ದು, ಈ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇದೆ. ಕೆಎಸ್‍ಟಿಡಿಸಿ ಹಾಗೂ ಓಲಾ ಕ್ಯಾಬ್‍ಗಳ ನಡುವೆ ದರ ವ್ಯಾತ್ಯಾಸ ಇರುವುದರಿಂದ ಗ್ರಾಹಕರು ಕಡಿಮೆ ದರ ಇರುವ ಕಡೆ ಹೋಗುತ್ತಾರೆ. ಇದರಿಂದ ಸಾಲ ಪಡೆದು ಟ್ಯಾಕ್ಸಿ ಚಲಾಯಿಸುತ್ತಿರುವವರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಸರ್ಕಾರ ಇವರ ಸಮಸ್ಯೆ ಆಲಿಸಿ ಅವರ ನೆರವಿಗೆ ಧಾವಿಸಬೇಕು’ ಎಂದು ಕೋರಿದರು. ‘ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂದು ನಗರ ಪ್ರದೇಶಗಳಿಗೆ ವಲಸೆ ಬಂದಿರುವ ಗ್ರಾಮೀಣ ಯುವಕರಿಗೆ ಸರ್ಕಾರ ರಕ್ಷಣೆ ನೀಡಿ ಆಸರೆಯಾಗಿ ನಿಲ್ಲಬೇಕು’ ಎಂದರು.

‘ಇಡೀ ರಾಮನಗರ ಜಿಲ್ಲೆಯ ಜನ ಎಚ್‍ಡಿಕೆ ಕುಟುಂಬದವರನ್ನು ತಮ್ಮ ಮನೆಯವರು ಎಂಬ ಭಾವನೆ ಹೊಂದಿದ್ದಾರೆ. ಕುಮಾರಸ್ವಾಮಿ ಹಾಸನದಲ್ಲಿ ಹುಟ್ಟಿದ್ದರೂ ಸಹ ರಾಜಕೀಯವಾಗಿ ರಾಮನಗರ ಜಿಲ್ಲೆಯ ಜನರು ನಮ್ಮ ಕುಟುಂಬವನ್ನು ಬೆಳೆಸಿದ್ದಾರೆ. ಇಲ್ಲಿಯ ಜನರ ಕಷ್ಟ ಸುಖ ಆಲಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಇಡೀ ಜಿಲ್ಲೆಯಾದ್ಯಂತ ಸಂಚಾರ ಮಾಡುವುದು ಸಹಜ’ ಎಂದರು.

‘ಚುನಾವಣೆ ಉದ್ದೇಶದಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿಲ್ಲ. ಚೀಲೂರು ನಾಟಕ ಪ್ರದರ್ಶನ ಸಂದರ್ಭದಲ್ಲಿ ಉಂಟಾದ ಗೊಂದಲ ಅನಗತ್ಯ. ಇಲ್ಲಿ ಯಾರಿಗೂ ಭಯ ಉಂಟು ಮಾಡಲು ನಾನು ಸಂಚರಿಸುತ್ತಿಲ್ಲ. ಶಾಂತಿಯುತ ರಾಜಕೀಯ ಮಾಡಬೇಕೆಂಬ ಉದ್ದೇಶವಿದೆ. ಇಲ್ಲಿಯ ಜನರು ಸಹ ಗ್ರಾಮಗಳಿಗೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಪ್ರೀತಿಯಿಂದ ಕರೆದಾಗ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ನುಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಗುತ್ತಿಗೆದಾರ ತುಂಬೇನಹಳ್ಳಿ ಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಆರ್. ಪಾಂಡುರಂಗ, ಯುವ ಘಟಕ ಅಧ್ಯಕ್ಷ ಅಜಯ್ ದೇವೇಗೌಡ, ಮುಖಂಡರಾದ ಮರಿಲಿಂಗಯ್ಯ, ಯಕ್ಷರಾಜು, ಬನ್ನಿಕುಪ್ಪೆ ಚಂದ್ರಗಿರಿ, ನಂಜಾಪುರ ಚಲುವರಾಜ್, ಲಕ್ಕೋಜನಹಳ್ಳಿ ನವೀನ ನಾಗರಾಜು, ಮುಖಂಡರಾದ ಕೃಷ್ಣಪ್ಪ, ಜಯಣ್ಣ, ರವಿ, ಅಜಯ್, ಸೋಮಲಿಂಗಯ್ಯ, ಗುನ್ನೂರು ದೇವರಾಜು, ಕಾಡನಕುಪ್ಪೆ ನವೀನ್, ಜೈಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT