ಚನ್ನಪಟ್ಟಣ: ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೊ ಪಾದಯಾತ್ರೆ ಸಿದ್ಧತೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಶುಕ್ರವಾರ ಕಾರ್ಯಕರ್ತರ ಪ್ರತ್ಯೇಕ ಸಭೆ ನಡೆಸಿದರು.
ಸಿ.ಪಿ.ಯೋಗೇಶ್ವರ್ ಕುವೆಂಪುನಗರ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದರೆ, ಜಯಮುತ್ತು ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದರು.
ಮೈತ್ರಿ ಪಾದಯಾತ್ರೆ ಸೋಮವಾರ (ಆ.5ಕ್ಕೆ) ತಾಲ್ಲೂಕಿಗೆ ಆಗಮಿಸಲಿದ್ದು, ಚನ್ನಪಟ್ಟಣದಲ್ಲಿ ಹಾದು ಹೋಗಲಿದೆ. ಮೈತ್ರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆ ರೂಪುರೇಷೆ ಚರ್ಚಿಸಲು ಎರಡೂ ಪಕ್ಷದ ಪ್ರಮುಖರು ಕಾರ್ಯಕರ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಿಕೊಂಡಿದ್ದ ಎರಡೂ ಪಕ್ಷಗಳು ಇಲ್ಲಿಯವರೆಗೂ ಒಟ್ಟಿಗೆ ಸಭೆ ನಡೆಸಿದ್ದವು. ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ಮುನಿಸು ಶುರುವಾದ ನಂತರ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ. ಇದರಿಂದಾಗಿಯೇ ಮೈಸೂರು ಚಲೊ ಪಾದಯಾತ್ರೆಗೆ ಸಿದ್ಧತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಎರಡು ಪಕ್ಷಗಳ ಸ್ಥಳೀಯ ಪ್ರಮುಖರು ಪ್ರತ್ಯೇಕವಾಗಿ ಸಭೆ ನಡೆಸಿರುವುದು ಉಪ ಚುನಾವಣೆ ವಿಚಾರದಲ್ಲಿ ಗೊಂದಲ ಮೂಡಿಸಬಹುದು ಎಂಬ ವಾದ ಬಲವಾಗುತ್ತಿದೆ. ಇದು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾಗಲಿ ಎನ್ನುವುದು ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ. ಇದೂವರೆಗೂ ಮೈತ್ರಿ ಪಕ್ಷಗಳ ನಿರ್ಧಾರ ಪ್ರಕಟಿಸಿಲ್ಲ.
ಯೋಗೇಶ್ವರ್ ಅವರಿಗೆ ಮೈತ್ರಿ ಅಭ್ಯರ್ಥಿಯಾಗುವ ಅವಕಾಶ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.