ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆಗೆ ಒತ್ತಾಯ: ಸಂಗಮದಲ್ಲಿ ಪಾದಯಾತ್ರೆಗೆ ಚಾಲನೆ

ಬೆಂಗಳೂರುವರೆಗೆ ಮೆರವಣಿಗೆ
Last Updated 24 ಸೆಪ್ಟೆಂಬರ್ 2021, 6:50 IST
ಅಕ್ಷರ ಗಾತ್ರ

ಕನಕಪುರ: ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್‌ ಉತ್ಪಾದನೆಯ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟೆ ಜಲಾಶಯ ನಿರ್ಮಾಣ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಬೃಹತ್‌ ಪಾದಯಾತ್ರೆಗೆ ಗುರುವಾರ ಬೆಳಿಗ್ಗೆ ಸಂಗಮದ ಕಾವೇರಿ ನದಿಯಲ್ಲಿ ಗಂಗಾ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ‘ಮೇಕುದಾಟಿನಿಂದ- ವಿಧಾನಸೌಧವರೆಗೆ ಬೃಹತ್‌ ಪಾದಯಾತ್ರೆ’ ಗೆ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ), ಜಯ ಕರ್ನಾಟಕ ಜನಪರ ವೇದಿಕೆ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಯುವಶಕ್ತಿ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥಸ್ವಾಮಿ, ಮರಳವಾಡಿ ಮಠದ ಮೃತ್ಯಂಜಯಸ್ವಾಮಿ, ಪ್ರಭು ಕಿರೀಟಸ್ವಾಮಿ, ಸಾತನೂರು ನಿಜಗುಣ ಸ್ವಾಮಿ ಸಂಗಮದಲ್ಲಿ ಪಾದಯಾತ್ರೆಗೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಕಾವೇರಿ ನದಿಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿದ ಮಹಿಳೆಯರು ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಚಾಲನೆ ನೀಡಿದ ಅನ್ನದಾನೇಶ್ವರನಾಥ ಸ್ವಾಮಿ ಮಾತನಾಡಿ, ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಬೇಕೆನ್ನುವುದು ನೆನ್ನೆ ಮೊನ್ನೆಯ ಹೋರಾಟವಲ್ಲ. ಹಲವು ಜಿಲ್ಲೆಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಅಣೆಕಟ್ಟೆ ನಿರ್ಮಾಣ ನೆನೆಗುದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಣೆಕಟ್ಟೆ ನಿರ್ಮಾಣಕ್ಕೆ ಇದು ಸಕಾಲ, ಇಂದು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಒಕ್ಕೋರಲಿನಿಂದ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಹೋರಾಟ ನಡೆಸಿ ಅದರಲ್ಲಿ ಸಫಲವಾಗಬೇಕಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿರುವುದರಿಂದ ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು. ಅಣೆಕಟ್ಟೆ ನಿರ್ಮಾಣಕ್ಕೆ ಯಾವುದೆ ತೊಡಗಿದ್ದರೂ ಅದನ್ನು ಪರಿಹರಿಸಿ ಜಲಾಶಯ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಸಿಂ.ಲಿಂ. ನಾಗರಾಜು ಮಾತನಾಡಿ ಕಾವೇರಿ ನದಿಯಲ್ಲಿ ಪ್ರತಿವರ್ಷ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆ ನೀರನ್ನು ಸಂಗ್ರಹಿಸಿ ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುವುದು. ಇದರಿಂದ ಅಂತರ್ಜಲ ಹೆಚ್ಚಳವಾಗುವುದರ ಜತೆಗೆ 6 ಜಿಲ್ಲೆಗೆ ಶಾಶ್ವತ ನೀರು ಪೂರೈಕೆ ಆಗುತ್ತದೆ. ಇದರಿಂದ ಕರ್ನಾಟಕದ ಜತೆಗೆ ತಮಿಳುನಾಡಿಗೂ ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿಬಣ) ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ ಕಾವೇರಿ ನದಿಯಲ್ಲಿ ಮೇಕೆದಾಟು ಜಲಾಶಯ ನಿರ್ಮಾಣವು ಕೇವಲ ರೈತರ ಹೋರಾಟವಲ್ಲ, ಸರ್ಕಾರದ ವಿರುದ್ದದ ಹೋರಾಟವು ಅಲ್ಲ, ಸರ್ಕಾರವನ್ನು ಸಜ್ಜಗೊಳಿಸುವ ಹೋರಾಟವಾಗಿದೆ. ಇದು ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳಿಗೂ ಸೇರಿದ ಹೋರಾಟವಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳ ಜತೆಗೆ ಸರ್ಕಾರ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಅಣೆಕಟ್ಟೆ ನಿರ್ಮಾಣಕ್ಕೆ ಬದ್ದರಾಗಿ ತ್ವರಿತವಾಗಿ ಮಾಡಬೇಕೆಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಜತೆಗೆ ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ಮಹಿಳಾ ಹೋರಾಟಗಾರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಸಂಗಮದಿಂದ ಮರಳೆಗವಿ ಮಠದ ವರೆಗೆ ಮೊದಲ ದಿನದ ಪಾದಯಾತ್ರೆ ನಡೆಸಿ ಮರಳೇಗವ ಮಠದಲ್ಲಿ ಉಳಿದು ವಿಶ್ವಾಂತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT