ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಿಂತ ಪಾರ್ಕಿಂಗ್ ಶುಲ್ಕವೇ ದುಬಾರಿ!

Published 5 ಜನವರಿ 2024, 6:21 IST
Last Updated 5 ಜನವರಿ 2024, 6:21 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿ ಕೇವಲ ₹5 ಪಾವತಿಸಿ ಚೀಟಿ ಪಡೆದರೆ, ಯಾವುದೇ ರೀತಿಯ ರೋಗಕ್ಕೂ ವೈದ್ಯರು ಮತ್ತು ತಜ್ಞ ವೈದ್ಯರಿಂದ ಚಿಕಿತ್ಸೆ ಸಿಗುತ್ತದೆ. ಆದರೆ, ಅಪ್ಪಿತಪ್ಪಿಯೂ ಇಲ್ಲಿಗೇನಾದರೂ ವಾಹನದಲ್ಲಿ ಬಂದು ನಿಲ್ಲಿಸಿಕೊಂಡರೆ ಜೇಬಿಗೆ ಕತ್ತರಿ ಬೀಳುವುದು ಖಚಿತ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಜನ ಪಾವತಿಸಬೇಕಾದ ಶುಲ್ಕಕ್ಕಿಂತಲೂ ವಾಹನ ನಿಲುಗಡೆ ಶುಲ್ಕವೇ ದುಪ್ಪಟ್ಟು.

ನಗರದ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದ ಸ್ಥಿತಿ ಇದು. ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ಬರುವ ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್ ಹೆಸರಿನಲ್ಲಿ ಜನರನ್ನು ವ್ಯವಸ್ಥಿತವಾಗಿ ಸುಲಿಗೆ ಮಾಡಲಾಗುತ್ತಿದೆ.

ಆಸ್ಪತ್ರೆ ಹೊರಗಡೆ ನಿಲುಗಡೆ: ಪಾರ್ಕಿಂಗ್ ಶುಲ್ಕ ಹೆಚ್ಚಳದ ಬೆನ್ನಲ್ಲೇ, ಕೆಲ ಸವಾರರು ತಮ್ಮ ವಾಹನಗಳನ್ನು ಆಸ್ಪತ್ರೆ ಆವರಣಕ್ಕೆ ತೆಗೆದುಕೊಂಡು ಹೋಗದೆ ಹೊರಗಡೆಯೇ ನಿಲ್ಲಿಸಿ ಹೋಗುತ್ತಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಸ್ಪತ್ರೆಯ ಮುಖ್ಯ ಪ್ರವೇಶ ದ್ವಾರದ ಎದುರು ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

‘ಅನಾರೋಗ್ಯದಿಂದ ಬಳಲುತ್ತಿದ್ದ ಸ್ನೇಹಿತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆ. ಪ್ರವೇಶದ್ವಾರದ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆ ಅಡ್ಡಗಟ್ಟಿದ್ದ ಪಾರ್ಕಿಂಗ್‌ನವರು ₹10 ಕೊಡಿ ಎಂದರು. ಚಿಲ್ಲರೆ ಇಲ್ಲ, ಆಮೇಲೆ ಬಂದು ಕೊಡುತ್ತೇನೆ ಎಂದರೂ ಪಟ್ಟು ಬಿಡಲಿಲ್ಲ. ಕಡೆಗೆ ಅವರೊಂದಿಗೆ ಜಗಳವಾಡಿ, ಬೈಕ್ ಅನ್ನು ಆಸ್ಪತ್ರೆಯಾಚೆ ತಂದು ನಿಲ್ಲಿಸಿದೆ. ಹೆಸರಿಗಷ್ಟೇ ಇದು ಸರ್ಕಾರಿ ಆಸ್ಪತ್ರೆ. ಇಲ್ಲಿ ನಡೆಯುವ ಸುಲಿಗೆಯನ್ನು ಕೇಳುವವರೇ ಇಲ್ಲ’ ಎಂದು ಐಜೂರಿನ ಮನು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಬಡವರು. ಏನೇ ಆರೋಗ್ಯ ಸಮಸ್ಯೆಯಾದರೂ ಸರ್ಕಾರಿ ಆಸ್ಪತ್ರೆಗೆ ಬರಬೇಕು. ಅದು ಬಿಟ್ಟು ಖಾಸಗಿ ಆಸ್ಪತ್ರೆಗೆ ಹೋಗುವಷ್ಟು ನಾವು ಶಕ್ತರಿಲ್ಲ. ಪತ್ನಿಗೆ ಹುಷಾರಿಲ್ಲವೆಂದು ಆಟೊದಲ್ಲಿ ಕರೆದುಕೊಂಡು ಬಂದಿದ್ದೆ. ಸ್ವಲ್ಪ ಹೊತ್ತು ಆಟೊ ನಿಲ್ಲಿಸಿದ್ದಕ್ಕಾಗಿ ₹10 ಕೇಳಿದರು. ಆಟೊದವರು ನನ್ನಿಂದಲೇ ಕೊಡಿಸಿದರು. ದುಡ್ಡಿಲ್ಲದ ಸಮಯದಲ್ಲಿ ಇಂತಹ ಅನಗತ್ಯ ಹೊರೆಗಳನ್ನು ಎದುರಿಸಬೇಕಾಯಿತು’ ಎಂದು ಗ್ರಾಮೀಣ ಭಾಗದ ಚಿನ್ನಯ್ಯ ಎಂಬುವರು ಬೇಸರದಿಂದ ನುಡಿದರು.

ಷರತ್ತು ಉಲ್ಲಂಘನೆ: ‘ಜಿಲ್ಲಾಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆಯ ಟೆಂಡರ್ ಪಡೆದವರು, ಆಸ್ಪತ್ರೆಯವರು ವಿಧಿಸಿರುವ ಷರತ್ತು ಉಲ್ಲಂಘಿಸಿ ಹೆಚ್ಚುವರಿಯಾಗಿ ನಿಲುಗಡೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಮೂರು ವಾರದಿಂದ ಸದ್ದಿಲ್ಲದೆ ಶುಲ್ಕ ಹೆಚ್ಚಳ ಮಾಡಿದ್ದರೂ, ಈ ಬಗ್ಗೆ ಯಾರೂ ಕೇಳುವವರೇ ಇಲ್ಲವಾಗಿದೆ’ ಎಂದು ಸ್ಥಳೀಯರಾದ ರಾಜು ಎಸ್. ಬೇಸರ ವ್ಯಕ್ತಪಡಿಸಿದರು.

‘ಆಸ್ಪತ್ರೆಗೆ ಬರುವ ಕಾರುಗಳು ತೀರಾ ಕಡಿಮೆ. ಬರುವ ಕಾರುಗಳೆಲ್ಲವೂ ಇಲ್ಲಿನ ವೈದ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗ ವೈದ್ಯಕೀಯ ವಿದ್ಯಾರ್ಥಿಗಳದ್ದೇ ಆಗಿರುತ್ತವೆ. ಸಾರ್ವಜನಿಕರದ್ದು ನಿತ್ಯ ಏಳೆಂಟು ಕಾರು ಬಂದರೆ ಹೆಚ್ಚು. ಇನ್ನು ಆಟೊದವರು ಶುಲ್ಕ ಕಟ್ಟಲು ನಿರಾಕರಿಸಿ, ‘ಇದು ಸರ್ಕಾರಿ ಆಸ್ಪತ್ರೆ. ಇಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ನೀವ್ಯಾರು’ ನಮ್ಮ ಜೊತೆಯೇ ಜಗಳವಾಡುತ್ತಾರೆ’ ಎಂದು ಶುಲ್ಕ ವಸೂಲಿ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ಟೆಂಡರ್ ರದ್ದಿಗೆ ಅವಕಾಶ: ಜಿಲ್ಲಾಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆಗೆ ಟೆಂಡರ್ ಪಡೆದಿರುವವರು ತಮಗೆ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ, ಟೆಂಡರ್ ರದ್ದುಪಡಿಸಿ ಬೇರೆಯವರೆಗೆ ವಾಹನ ನಿಲುಗಡೆ ಮೇಲ್ವಿಚಾರಣೆ ಡಿಸುವ ಅಧಿಕಾರ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಇದೆ.

ರಾಮನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದು
ರಾಮನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದು
ಪಟ್ಟಿ... ಯಾವ ವಾಹನಕ್ಕೆ ಎಷ್ಟು ಶುಲ್ಕವಾಹನ; ನಿಗದಿಯಾಗಿದ್ದ ಶುಲ್ಕ;ಪರಿಷ್ಕೃತಸೈಕಲ್;₹2;–ದ್ವಿಚಕ್ರ ವಾಹನ;₹5;₹10ಆಟೊ;₹10;–ಕಾರು;₹15;₹20
ಟೆಂಡರ್ ಷರತ್ತುಗಳ ಪ್ರಕಾರವೇ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಿ ಮಾಡಬೇಕು. ಷರತ್ತು ಉಲ್ಲಂಘನೆ ಮಾಡುವಂತಿಲ್ಲ. ಈ ಕುರಿತು ಗುತ್ತಿಗೆದಾರರನ್ನು ವಿಚಾರಿಸಲಾಗುವುದು
–ಡಾ. ಪದ್ಮಾ ಜಿಲ್ಲಾ ಶಸ್ತ್ರಚಿಕಿತ್ಸಕಿ ರಾಮನಗರ ಜಿಲ್ಲಾಸ್ಪತ್ರೆ
‘ನಿಲುಗಡೆ ಶುಲ್ಕ ರದ್ದುಪಡಿಸಲಿ’
‘ಬಡವರು ಬರುವ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವುದೇ ತಪ್ಪು. ಬೇರಾವ ನಗರದಲ್ಲೂ ಇಲ್ಲದ ವ್ಯವಸ್ಥೆ ಇಲ್ಲಿ ಯಾಕೆ ಜಾರಿಗೆ ಬಂತು? ಇಷ್ಟಕ್ಕೂ ಬಡವರಿಂದ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಿ ಮಾಡುವಂತಹ ಪರಿಸ್ಥಿತಿ ರಾಮನಗರಕ್ಕೆ ಬಂದಿರುವುದು ದುರದೃಷ್ಟಕರ. ಕೂಡಲೇ ಪಾರ್ಕಿಂಗ್ ಟೆಂಡರ್ ರದ್ದುಪಡಿಸಿ ರೋಗಿಗಳು ಹಾಗೂ ಅವರ ಕಡೆಯವರ ವಾಹನಗಳ ನಿಲುಗಡೆಗೆ ಉಚಿತವಾಗಿ ಅವಕಾಶ ಕಲ್ಪಿಸಬೇಕು’ ಎಂದು ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ ಹೇಳಿದರು. ‘ನಿಲ್ಲಿಸದಿದ್ದರೆ ಆಸ್ಪತ್ರೆ ಎದುರು ಧರಣಿ’ ‘ರೋಗಿಗಳು ಮತ್ತು ಅವರ ಕಡೆಯವರಿಗೆ ಹೊರೆಯಾಗಿರುವ ಪಾರ್ಕಿಂಗ್ ಶುಲ್ಕವನ್ನು ಕೂಡಲೇ ನಿಲ್ಲಿಸಬೇಕು. ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡುವವರು ಪಾರ್ಕಿಂಗ್ ಹೆಸರಿನಲ್ಲಿ ಬಡಪಾಯಿಗಳಿಂದ ವಸೂಲಿ ಮಾಡುವುದು ಸರಿಯಲ್ಲ. ಶುಲ್ಕ ವಸೂಲಿಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಆಸ್ಪತ್ರೆ ಎದುರು ಆಟೊ ಚಾಲಕರ ಸಂಘದಿಂದ ಧರಣಿ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ಆಟೊ ರಿಕ್ಷಾ ಚಾಲಕರ ಫೆಡರೇಷನ್ (ಸಿಐಟಿಯು) ರಾಜ್ಯ ಅಧ್ಯಕ್ಷ ಬಿ.ವಿ. ರಾಘವೇಂದ್ರ ಎಚ್ಚರಿಕೆ ನೀಡಿದರು.
ಟೆಂಡರ್ ಷರತ್ತುಗಳೇನು?
* ಆಸ್ಪತ್ರೆ ಆವರಣದಲ್ಲಿ ನಿಲುಗಡೆಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವಂತಿಲ್ಲ. * ಆಸ್ಪತ್ರೆ ಅಧಿಕಾರಿಗಳು ಸಿಬ್ಬಂದಿ ವೈದ್ಯಕೀಯ ಸ್ನಾತಕೋತ್ತರ ಹಾಗೂ ಇತರ ವಿದ್ಯಾರ್ಥಿಗಳ ನಿಲುಗಡೆಗೆ ಉಚಿತವಾಗಿ ಅವಕಾಶ ಮಾಡಿಕೊಡಬೇಕು. * ಒಳ ಮತ್ತು ಹೊರ ರೋಗಿಗಳ ಕಡೆಯವರು ಹಾಗೂ ಸಂದರ್ಶಕರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶ. ಹೊರಗಿನವರ ವಾಹನಗಳಿಗೆ ಅವಕಾಶವಿಲ್ಲ. * ಆಸ್ಪತ್ರೆ ಅಧಿಕಾರಿಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. * ಆಸ್ಪತ್ರೆ ಆವರಣದಲ್ಲಿ ನಿಲ್ಲಿಸುವ ವಾಹನಗಳಿಗೆ ಗುತ್ತಿಗೆದಾರರೇ ಜವಾಬ್ದಾರರು. ಜಿಲ್ಲಾ ಶಸ್ತ್ರಚಿಕಿತ್ಸಕರ ಅನುಮತಿ ಇಲ್ಲದೆ ಆ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT