ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಸಂಸದ ಪ್ರಜ್ವಲ್ ಬಂಧನಕ್ಕೆ ಆಗ್ರಹ

ಲೈಂಗಿಕ ದೌರ್ಜನ್ಯದ ಆರೋಪಿ ವಿಷಯದಲ್ಲಿ ಬಿಜೆಪಿ ಪಕ್ಷಪಾತ: ಎಸ್‌ಡಿಪಿಐ ಆಕ್ರೋಶ
Published 9 ಮೇ 2024, 7:49 IST
Last Updated 9 ಮೇ 2024, 7:49 IST
ಅಕ್ಷರ ಗಾತ್ರ

ಚನ್ನಪಟ್ಟಣ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನದ ಜೆಡಿಎಸ್ ಸಂಸದ ಹಾಗೂ ಎನ್‍ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬಂಧಿಸಬೇಕು ಎಂದು ಒತ್ತಾಯಿಸಿ, ನಗರದ ಶೇರೂ ಹೋಟೆಲ್ ವೃತ್ತದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿರುವ ವೃತ್ತದಲ್ಲಿ ಬಳಿ ಬೆಳಿಗ್ಗೆ ಜಮಾಯಿಸಿದ ಕಾರ್ಯಕರ್ತರು ಪ್ರಜ್ವಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಸಂತ್ರಸ್ತರ ಬದಲು ಹೀನ ಕೃತ್ಯ ಎಸಗಿದ ಆರೋಪಿ ಪರ ವಕಾಲತ್ತು ಮಾಡುತ್ತಿವೆ ಎಂದು ಆಕ್ರೋಶ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಸ್‍ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಬ್ರಾರ್ ಅಹಮದ್, ‘ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ತನ್ನ ನೀಚ ಕೃತ್ಯವನ್ನು ಚಿತ್ರೀಕರಿಸಿಕೊಂಡು ವಿಕೃತಿ ಮೆರೆದಿದ್ದಾನೆ. ತಪ್ಪು ಮಾಡಿ ತಲೆ ಮರೆಸಿಕೊಂಡಿರುವ ಆತನನ್ನು ತಕ್ಷಣ ಬಂಧಿಸಬೇಕು. ಆತ ದೇಶ ತೊರೆಯಲು ಸಹಕರಿಸಿದವರ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಪಾರದರ್ಶಕವಾಗಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರಾದ ಪ್ರಜ್ವಲ್ ಮತ್ತು ಆತನ ತಂದೆ ಎಚ್‌.ಡಿ. ರೇವಣ್ಣಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ, ಇಬ್ಬರಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಮಹಮದ್ ಫಾಜಿಲ್ ಮಾತನಾಡಿ, ‘ಪ್ರಜ್ವಲ್ ರಕ್ಷಣೆಗೆ ನಿಂತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲು ಸಿಬಿಐಗೆ ವಹಿಸಬೇಕು ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಸಿಬಿಐಗೆ ತನಿಖೆ ನಡೆಸಿದರೆ, ಪ್ರಜ್ವಲ್ ಕೃತ್ಯವನ್ನು ಮುಚ್ಚಿ ಹಾಕಬಹುದು ಎಂಬ ಲೆಕ್ಕಾಚಾರ ಎರಡೂ ಪಕ್ಷಗಳದ್ದಾಗಿದೆ’ ಎಂದರು.

‘ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣ ಚರ್ಚೆಯಾಗುತ್ತಿರುವುದರಿಂದ ಜೆಡಿಎಸ್–ಬಿಜೆಪಿ ಮೈತ್ರಿಗೆ ಧಕ್ಕೆ ಬಂದಿದೆ. ಹೋಗಿರುವ ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಮೈತ್ರಿ ನಾಯಕರು, ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ವಿಷಯದಲ್ಲಿ ಪಕ್ಷವು ಸಂತ್ರಸ್ತ ಮಹಿಳೆಯರ ಪರವಾಗಿ ನಿಲ್ಲುತ್ತದೆ. ಅವರ ಪರವಾಗಿ ಹೋರಾಟ ಮಾಡಲಿದೆ’ ಎಂದು ಹೇಳಿದರು.

ಪಕ್ಷದ ಪ್ರಮುಖರಾದ ಸೈಯದ್ ಶಹಬಾಜ್ ಆಲಿ, ಅಹಮದ್ ಷರೀಫ್ ಹಾಗೂ ಇತರರು ಇದ್ದರು.

ಈಗಾಗಲೇ ಬಂಧನಕ್ಕೊಳಕ್ಕಾಗಿರುವ ಪ್ರಜ್ವಲ್ ತಂದೆ ಎಚ್‌.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ಪ್ರಕರಣದ ದಿಕ್ಕು ತಪ್ಪಿಸುತ್ತಾರೆ.

–ಅಬ್ರಾರ್ ಅಹಮದ್, ಎಸ್‍ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ

‘ಪ್ರಕರಣದ ದಿಕ್ಕು ತಪ್ಪಿಸುವ ಯತ್ನ’

‘ಪ್ರಜ್ವಲ್ ಎಸಗಿರುವ ನೀಚ ಕೃತ್ಯದ ಬಗ್ಗೆ ಚರ್ಚೆ ಆಗುವ ಬದಲು ಇದೀಗ ಪೆನ್‌ ಡ್ರೈವ್ ಹಂಚಿದವರು ಯಾರೆಂಬ ವಿಷಯದ ಕುರಿತು ರಾಜಕೀಯ ಕೆಸರೆರಚಾಟ ನಡೆದಿರುವುದು ತಲೆ ತಗ್ಗಿಸಬೇಕಾದ ವಿಚಾರ. ತಮ್ಮ ಪಕ್ಷದ ಸಂಸದ ಎಸಗಿರುವ ಕೃತ್ಯವನ್ನು ಖಂಡಿಸಬೇಕಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಕರಣದ ಚರ್ಚೆಯ ದಿಕ್ಕನ್ನು ಬೇರೆಡೆಗೆ ತಿರುಗಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಎರಡೂ ಪಕ್ಷಗಳ ನಾಯಕರು ಪ್ರತಿಭಟನೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಸಂತ್ರಸ್ತರ ಕುರಿತು ಅವರಿಗೆ ಯಾವುದೇ ಕಾಳಜಿ ಇಲ್ಲವೆಂಬುದು ಇದರಲ್ಲೇ ಗೊತ್ತಾಗುತ್ತದೆ’ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಮಹಮದ್ ಫಾಜಿಲ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT