ಗುರುವಾರ , ಜೂನ್ 24, 2021
29 °C

ಶಾಲಾ ಪೂರ್ವ ಮಕ್ಕಳ ಸಮೀಕ್ಷೆ ನಡೆಸಿ: ಇಕ್ರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಅಂಗನವಾಡಿ ವ್ಯವಸ್ಥೆಯಿಂದ ಹೊರಗುಳಿದಿರುವ ಮಕ್ಕಳನ್ನು ಪತ್ತೆ ಹಚ್ಚಿ ಅಂಗನವಾಡಿಗೆ ಕರೆತರಲು ಶಾಲಾ ಪೂರ್ವಮಕ್ಕಳ ಸಮೀಕ್ಷೆ ನಡೆಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.

ಅವರು ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹಾಗೂ ಬಾಲವಿಕಾಸ ಸದಸ್ಯರಿಗೆ ಯುಟ್ಯೂಬ್ ಲೈವ್ ಮೂಲಕ ತರಬೇತಿ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 6 ತಿಂಗಳಿನಿಂದ 6 ವರ್ಷದೊಳಗಿನ 72 ಸಾವಿರ ಮಕ್ಕಳಿದ್ದಾರೆ. 55 ಸಾವಿರ ಮಕ್ಕಳು ಅಂಗನವಾಡಿ ವ್ಯವಸ್ಥೆಯಡಿ ಇದ್ದಾರೆ. ಈ ಹಿಂದೆ ಸಹ ಸಮೀಕ್ಷೆ ನಡೆಸಿ ಅಂಗನವಾಡಿ ವ್ಯವಸ್ಥೆಯಡಿ 2 ಸಾವಿರ ಮಕ್ಕಳನ್ನು ತರಲಾಗಿತ್ತು. 10 ರಿಂದ 12 ಸಾವಿರ ಮಕ್ಕಳು ಖಾಸಗಿ ವ್ಯವಸ್ಥೆಯಡಿ ಇದ್ದಾರೆ ಎಂದು ಅಂದಾಜಿಸಿದರೂ ಇನ್ನೂ 2 ರಿಂದ 3 ಸಾವಿರ ಮಕ್ಕಳನ್ನು ಅಂಗನವಾಡಿ ವ್ಯವಸ್ಥೆಯಡಿ ತರಬೇಕಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಮೀಕ್ಷೆಗೆ ದಿನಾಂಕ ನಿಗಧಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಹಯೋಗದೊಂದಿಗೆ ಒಂದು ವಾರದ ಸಮೀಕ್ಷಾ ಅಭಿಯಾನ ನಡೆಸಿ ಎಂದು ಸೂಚಿಸಿದರು.

ಅಪೌಷ್ಠಿಕ ಮಕ್ಕಳನ್ನು ಗುರುತಿಸಿ: ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಎಲೆಕ್ಟ್ರಾನಿಕ್ ತೂಕದ ಯಂತ್ರ ನೀಡಲಾಗಿದೆ. ಆಗಸ್ಟ್‌ನಲ್ಲಿ ಒಂದು ದಿನ ನಿಗದಿಪಡಿಸಿ ಮಕ್ಕಳ ತೂಕ, ಉದ್ದ, ಸುತ್ತಳತೆಯನ್ನು ದಾಖಲು ಮಾಡಿ. ನಂತರದ ದಿನಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ವರದಿ ನೀಡಿ. ಇದರಿಂದ ಜಿಲ್ಲಾ ಮಟ್ಟದಲ್ಲಿ ತೀವ್ರ ಅಪೌಷ್ಟಿಕ ಮಕ್ಕಳು ಹಾಗೂ ಸಾಧಾರಣ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಿರುವ ಸೌಲಭ್ಯ ಒದಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಮಕ್ಕಳಿಗೆ ಆಹಾರ ತಲುಪಿಸಿ: ಕೋವಿಡ್ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಅಂಗನವಾಡಿಯಲ್ಲಿ ನೀಡಲಾಗುತ್ತಿದ್ದ ಆಹಾರವನ್ನು ಮನೆಗೆ ತಲುಪಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆಹಾರವನ್ನು ಪ್ರಾಮಾಣಿಕವಾಗಿ ಸಕಾಲದಲ್ಲಿ ತಲುಪಿಸಿ. ಜಿಲ್ಲಾ ಪಂಚಾಯಿತಿ ಸಹಾಯವಾಣಿಯ ಮೂಲಕ ಪೋಷಕರಿಗೆ ಕರೆ ಮಾಡಿ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಲೋಪ ಕಂಡುಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳಿಗೆ ಪುಷ್ಠಿ, ಸಕ್ಕರೆ, ಬೆಲ್ಲ ಹಾಗೂ ಹಾಲಿನಪುಡಿ ನೀಡಲಾಗುತ್ತಿದೆ. 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ ಅಕ್ಕಿ, ಹೆಸರುಕಾಳು, ಕಡಲೆಬೀಜ, ಕಪ್ಪು ಎಳ್ಳು, ತೊಗರಿಬೇಳೆ, ಸಾಂಬಾರು ಪುಡಿ, ಹೆಸರುಬೇಳೆ, ಜೀರಿಗೆ, ಮೆಣಸು, ಸಾಸಿವೆ, ಉಪ್ಪು, ಎಣ್ಣೆ, ಹುರಳಿಕಾಳು, ಬೆಲ್ಲ, ಮೊಟ್ಟೆ, ಹಾಲಿನಪುಡಿ ಹಾಗೂ ಸಕ್ಕರೆ ಒಟ್ಟು 17 ಆಹಾರ ಪದಾರ್ಥ ನೀಡಲಾಗುತ್ತಿದೆ. ನೀಡಲಾಗುವ ಆಹಾರ ಸಾಮಗ್ರಿ ಹಾಗೂ ತೂಕದ ವಿವರದ ಕರ ಪತ್ರಗಳನ್ನು ಬಾಲವಿಕಾಸ ಸದಸ್ಯರಿಗೆ ವಿತರಿಸುವಂತೆ ತಿಳಿಸಿದರು.

ಮಾತೃವಂದನ ಕಾರ್ಯಕ್ರಮದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿರುತ್ತದೆ. ಇದು ನಿರಂತರ ಕಾರ್ಯಕ್ರಮವಾಗಿದ್ದು ಎಲ್ಲರೂ ಉತ್ತಮ ಸಾಧನೆ ಮಾಡಲು ಶ್ರಮಿಸಬೇಕು ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಾಲವಿಕಾಸ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.