ಸೋಮವಾರ, ಜನವರಿ 25, 2021
21 °C
ಕೋವಿಡ್‌ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪೂರ್ವಸಿದ್ಧತೆ; 586 ಮಂದಿಗೆ ತರಬೇತಿ

ಮೊದಲ ಹಂತದಲ್ಲಿ 8405 ಮಂದಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಒಟ್ಟು 8405 ಮಂದಿ ಈ ಲಸಿಕೆ ಪಡೆಯಲಿದ್ದಾರೆ.

ಜಿಲ್ಲೆಯಲ್ಲಿ ಮೂರು ವಿಭಾಗಗಳಲ್ಲಿ ಆದ್ಯತೆ ಮೇರೆಗೆ ಲಸಿಕೆ ನೀಡಲು ಇಲಾಖೆಯು ಕಾರ್ಯಕ್ರಮ ರೂಪಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್‌ಗಳಿಗೆ ಈ ಲಸಿಕೆ ಸಿಗಲಿದೆ. ವೈದ್ಯಾಧಿಕಾರಿಯಿಂದ ಹಿಡಿದು, ಗ್ರೂಪ್ ಡಿ ನೌಕರರ ತನಕ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಹಾಗೂ ಸರ್ಕಾರಿ ನೌಕರರೆಂಬ ಬೇಧವಿಲ್ಲದೆ ಎಲ್ಲರಿಗೂ ಈ ಲಸಿಕೆ ನೀಡಲು ಯೋಜಿಸಲಾಗಿದೆ. ಎಲ್ಲ ಬಗೆಯ ಆರೋಗ್ಯ ಸೇವೆಗಳ ಕಾರ್ಯಕರ್ತರು ಈ ವಲಯದಲ್ಲಿ ಸೇರಿದ್ದಾರೆ.

ದ್ವಿತೀಯ ಆದ್ಯತೆ: ಎರಡನೇ ಆದ್ಯತೆಯ ಪಟ್ಟಿಯಲ್ಲಿ ಅಗತ್ಯ ಸೇವಾ ವಲಯಗಳ ಜನರು ಸೇರಿದ್ದಾರೆ. ಪೊಲೀಸರು, ಪೌರ ಕಾರ್ಮಿಕರು, ಪತ್ರಕರ್ತರು, ಸರ್ಕಾರಿ ಇಲಾಖೆ ನೌಕರರು ಈ ವರ್ಗದಲ್ಲಿ ಸೇರಿದ್ದಾರೆ. ಮೂರನೇ ವಲಯದಲ್ಲಿ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. 50 ವರ್ಷ ಮೇಲ್ಪಟ್ಟವರಿಗೆ ಲಸಿಕೆಯು ಉಚಿತವಾಗಿ ಸಿಗಲಿದೆ. ಇದರ ಜತೆಗೆ, 50 ವರ್ಷಕ್ಕಿಂತ ಕೆಳಗಿರುವ ಆದರೆ ರಕ್ತದೊತ್ತಡ, ಮಧುಮೇಹ. ಕ್ಯಾನ್ಸರ್‌ನಂತರ ಕಾಯಿಲೆಗಳಿಗೆ ತುತ್ತಾದವರಿಗೆ ಲಸಿಕೆ ನೀಡಲು ಯೋಜಿಸಲಾಗಿದೆ.

ತರಬೇತಿ: ಯಾರಿಗೆಲ್ಲ ಲಸಿಕೆ ನೀಡಬೇಕು ಎಂಬ ಪಟ್ಟಿಯನ್ನು ಈಗಾಗಲೇ ಜಿಲ್ಲಾ ಆರ್‌ಸಿಎಚ್‌ ಕಚೇರಿ ಮೂಲಕ ಕ್ರೂಢೀಕರಿಸಿ ಆನ್‌ಲೈನ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಲಸಿಕೆ ನೀಡಲು ಜಿಲ್ಲೆಯಲ್ಲಿ ಒಟ್ಟು 394 ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಲ್ಲಿ ಲಸಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ 586 ಮಂದಿಯನ್ನು ಗುರುತಿಸಲಾಗಿದ್ದು, ಇಂಜೆಕ್ಷನ್ ಮಾದರಿಯಲ್ಲಿ ಲಸಿಕೆ ಸಿಗಲಿದೆ.

ಕಾರ್ಯಪಡೆ ಸಭೆ: ಫಲಾನುಭವಿಗಳ ಆಯ್ಕೆ, ಅಗತ್ಯ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ತನಕ ಒಟ್ಟು ಎರಡು ಟಾಸ್ಕ್ ಫೋರ್ಸ್ ಸಭೆಗಳು ನಡೆದಿವೆ. ಲಸಿಕೆ ನೀಡುವ ತಜ್ಞ ಸಿಬ್ಬಂದಿಯನ್ನು ಗುರುತಿಸಿ, ಅವರಿಗೆ ತರಬೇತಿಯನ್ನು ಸಹ ನೀಡಿದೆ. ಇದರಲ್ಲಿ ಪ್ರಯೋಗಾಲಯದ ಸಿಬ್ಬಂದಿ, ಕಿರಿಯ ಹಾಗೂ ಹಿರಿಯ ದಾದಿಯರು, ಖಾಸಗಿ ಹಾಗೂ ಸರ್ಕಾರಿ ವೈದ್ಯರು ಒಳಗೊಂಡಿದ್ದಾರೆ.

ತಜ್ಞರ ಸಮಿತಿ ರಚನೆ

ಕಾರ್ಯಕ್ರಮ ನಿರ್ವಹಣೆಗೆಂದು ಎಇಎಫ್‍ಐ ತಜ್ಞರ ಸಮಿತಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚನೆ ಮಾಡಲಾಗಿದೆ. ಲಸಿಕೆ ಪಡೆದ ಮೇಲೆ, ಯಾವುದಾದರೂ ಅಡ್ಡಪರಿಣಾಮ ಅಥವಾ ತೊಂದರೆಯಾದರೇ, ಅವರ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ. ಲಸಿಕೆ ಪಡೆದ ನಂತರ ತೊಂದರೆ ಆದರೆ, ಸ್ಥಳೀಯ ಆಶಾ ಕಾರ್ಯಕರ್ತೆಯರು ಅಥವಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕಾಗುತ್ತದೆ.

***

ಸರ್ಕಾರದ ಸೂಚನೆಯಂತೆ ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ

- ಡಾ.ಪದ್ಮಾ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.