ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವಕ್ಕೆ ಆತಂಕ ತಂದ ಬಿಜೆಪಿ

ಶೋಷಿತ ವರ್ಗಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಅಭಿಪ್ರಾಯ
Published 6 ಏಪ್ರಿಲ್ 2024, 6:02 IST
Last Updated 6 ಏಪ್ರಿಲ್ 2024, 6:02 IST
ಅಕ್ಷರ ಗಾತ್ರ

ರಾಮನಗರ: ‘ದೇಶದ ಸಂವಿಧಾನದ ಬಗ್ಗೆ ನಂಬಿಕೆ ಇಡದ ಬಿಜೆಪಿಯಿಂದಾಗಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ಬಿಜೆಪಿಯ ನಡೆ ಮತ್ತು ನೀತಿಗಳು ಸಂವಿಧಾನ ವಿರೋಧಿಯಾಗಿವೆ’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಅವರು ಆತಂಕ ವ್ಯಕ್ತಪಡಿಸಿದರು.

‘ಆರ್ಥಿಕವಾಗಿ ದುರ್ಬಲವಾದ ವರ್ಗದ (ಇಡಬ್ಲ್ಯೂ ಎಸ್) ಹೆಸರಿನಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ಜಾರಿಗೆ ತಂದ ಬಿಜೆಪಿಯು, ಸಾಮಾಜಿಕ ನ್ಯಾಯ ಸಾಕಾರದ ಮೀಸಲಾತಿಯ ಉದ್ದೇಶವನ್ನೇ ದುರ್ಬಲಗೊಳಿಸಿತು. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಜನರ ನಂಬಿಕೆ ಹಾಗೂ ವಿಶ್ವಾಸಕ್ಕೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಏಕರೂಪ ನಾಗರಿಕ ಸಂಹಿತೆ (ಎನ್‍ಸಿಆರ್) ಜಾರಿಗೆ ಮುಂದಾಗಿದೆ’ ಎಂದು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಮತ್ತೊಬ್ಬ ಸಂಚಾಲಕ ಹೈಕೋರ್ಟ್ ವಕೀಲ ಅನಂತ ನಾಯಕ್ ಮಾತನಾಡಿ, ‘ರಾಜ್ಯದ ಕಾಂಗ್ರೆಸ್ ಸರ್ಕಾರವು ಮಹಿಳೆಯರು, ಯುವಜನರು ಹಾಗೂ ಕುಟುಂಬವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದಕ್ಕಾಗಿ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಆರಂಭದಲ್ಲಿ ಯೋಜನೆ ಗೇಲಿ ಮಾಡಿದ್ದ ಪ್ರಧಾನಿ ಮೋದಿ ಅವರು, ಈಗ ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿರುವುದು ಆತ್ಮವಂಚನೆಯಾಗಿದೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶವು ವಿಕಸಿತವಾಗುವ ಬದಲು, ಎಲ್ಲಾ ಕ್ಷೇತ್ರಗಳಲ್ಲೂ ಕುಸಿತ ಕಾಣುತ್ತಿದೆ. ಮೂರನೇ ಬಾರಿಗೆ ಅಧಿಕಾರ ಕೊಡುವಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಅವಕಾಶ ಕೇಳುತ್ತಿದೆ. ಧರ್ಮದ ವಿಷಯಗಳನ್ನೇ ಪ್ರಧಾನ ಮಾಡಿಕೊಂಡು, ಅಭಿವೃದ್ಧಿ ವಿಷಯಗಳಿಗೆ ಬೆನ್ನು ತಿರುಗಿಸಿರುವ ಬಿಜೆಪಿಗೆ ಏಕೆ ಕೊಡಬೇಕೆಂದು ಜನ ಪ್ರಶ್ನಿಸುತ್ತಿದ್ದಾರೆ. ಮತ್ತೊಮ್ಮೆ ಇವರು ಅಧಿಕಾರಕ್ಕೆ ಬಂದರೆ, ದೇಶ ಮತ್ತಷ್ಟು ಅಧೋಗತಿಗೆ ತಲುಪಲಿದೆ’ ಎಂದು ಹೇಳಿದರು.

ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ‘ಸಂವಿಧಾನದ ಕಾರಣಕ್ಕೆ ಶೋಷಿತ ಸಮುದಾಯಗಳಿಗೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳು ಸಿಕ್ಕಿವೆ. ಇದನ್ನು ಸಹಿಸದ ಬಿಜೆಪಿ ಸಂಸದರು ಹಾಗೂ ಸಚಿವರೇ ಸಂವಿಧಾನ ಬದಲಾವಣೆ ಕುರಿತು ರಾಜರೋಷವಾಗಿ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂವಿಧಾನ ಬದಲಾಯಿಸಿ ಮನು ಸ್ಮೃತಿ ಜಾರಿಗೆ ತರುವುದು ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್‌ ಅಜೆಂಡಾ. ಅದರ ಆಣತಿಯಂತೆ ಬಿಜೆಪಿಯ ಜನಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಈ ಸಲ 400 ಸೀಟಿನ ಗುರಿಯೊಂದಿಗೆ ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ. ಒಂದು ವೇಳೆ ಅವರು ಅಂದುಕೊಂಡಂತೆ ಸೀಟು ಪಡೆದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗಂಡಾಂತರ ತಪ್ಪಿದ್ದಲ್ಲ’ ಎಂದು ಹೇಳಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಒಕ್ಕೂಟವು ಶೋಷಿತ ಸಮುದಾಯದ ದನಿಯಾಗಿ ಕೆಲಸ ಮಾಡುತ್ತಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ಶೋಷಿತರ ಅಸ್ಮಿತೆಗೆ ಧಕ್ಕೆಯಾದಾಗ ಹೋರಾಟ ಮಾಡಿ ಹಿತಾಸಕ್ತಿ ಕಾಪಾಡಿದೆ. ಜಾತಿ ಜನಗಣತಿ ವರದಿ ಸ್ವೀಕಾರ ವಿಷಯದಲ್ಲೂ ದೊಡ್ಡ ಮಟ್ಟದ ಹೋರಾಟ ರೂಪಿಸಿ ಯಶಸ್ವಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾ ಅಧ್ಯಕ್ಷ ರೈಡ್ ನಾಗರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಿರ್ದೇಶಕ ಪರ್ವೀಜ್ ಪಾಷ, ಹೈಕೋರ್ಟ್ ವಕೀಲ ಅನಂತ ನಾಯಕ್, ಒಕ್ಕೂಟದ ವೆಂಕಟೇಶ್, ನಾಯ್ಡು, ಮಂಜುನಾಥ ಸಿಳ್ಳೆಕ್ಯಾತ, ರಂಗಪ್ಪ ಅಲೆಮಾರಿ, ಆದರ್ಶ್, ಯಲ್ಲಪ್ಪ, ಸುಬ್ಬಣ್ಣ ಹಾಗೂ ಇತರರು ಇದ್ದರು.

‘ಬಿಜೆಪಿ ಹುನ್ನಾರ ಬಗ್ಗೆ ಜಾಗೃತಿ’

‘ಶೋಷಿತ ಸಮುದಾಯಗಳ ವಿರುದ್ಧ ಬಿಜೆಪಿ ನಡೆಸುತ್ತಿರುವ ಹುನ್ನಾರದ ಕುರಿತು ರಾಜ್ಯದಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಬಿಜೆಪಿ ಕನಿಷ್ಠ ಒಂದು ಕೋಟಿ ಉದ್ಯೋಗ ಕೊಡುವಲ್ಲೂ ವಿಫಲವಾಗಿದೆ. ಮೀಸಲಾತಿ ಕಾರಣಕ್ಕಾಗಿ ವರ್ಷಗಳಿಂದ ಖಾಲಿ ಇರುವ 60 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕ ಮಾಡಲು ಮೀನ ಮೇಷ ಎಣಿಸುತ್ತಿದೆ. ಶೋಷಿತರಿಗೆ ಅಧಿಕಾರ ಕೊಟ್ಟಿರುವ ಸಂವಿಧಾನವನ್ನು ಬುಡುಮೇಲು ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ. ಈ ಬಗ್ಗೆ ಶೋಷಿತರು ಎಚ್ಚೆತ್ತುಕೊಳ್ಳಬೇಕು’ ಎಂದು ಕೆ.ಎಂ. ರಾಮಚಂದ್ರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT