ಸೋಮವಾರ, ಆಗಸ್ಟ್ 15, 2022
26 °C
ಕೇಂದ್ರ ಸರ್ಕಾರದಿಂದ ಸಿಗದ ನೆರವು: ‘ರಿಂಗ್‌ ವ್ಯಾಕ್ಸಿನ್‌’ಗೆ ಸೀಮಿತವಾದ ಕಾರ್ಯಕ್ರಮ

ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಹರಸಾಹಸ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೋವಿಡ್ ನಡುವೆ ಜಿಲ್ಲೆಯ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಉಲ್ಬಣಗೊಳ್ಳುತ್ತಿದೆ. ಕೇಂದ್ರದಿಂದ ನೆರವು ಸಿಗದ ಹಿನ್ನೆಲೆಯಲ್ಲಿ ಈ ಬಾರಿಯ ಲಸಿಕಾ ಕಾರ್ಯಕ್ರಮವು ಕೇವಲ ‘ರಿಂಗ್‌ ವ್ಯಾಕ್ಸಿನ್‌’ಗೆ ಸೀಮಿತಗೊಂಡಿದೆ.

ಜಿಲ್ಲೆಯಲ್ಲಿ ಮಿಶ್ರ ತಳಿಯ ಹಸುಗಳೇ ಹೆಚ್ಚಿದ್ದು, ಇವುಗಳು ಬೇಗ ಸೋಂಕಿಗೆ ತುತ್ತಾಗುತ್ತಿವೆ. ಸದ್ಯ ಚನ್ನಪಟ್ಟಣ ತಾಲ್ಲೂಕಿನ ಶೇ 50ರಷ್ಟು ಹಳ್ಳಿಗಳಲ್ಲಿ ಈ ರೋಗ ವ್ಯಾಪಿಸಿದೆ. ರಾಮನಗರ ತಾಲ್ಲೂಕಿನ ಬಿಡದಿ, ಬೈರಮಂಗಲ, ಗೋಪಳ್ಳಿ, ಉರಗಳ್ಳಿ, ಕೋಡಿಯಾಲ ಕರೇನಹಳ್ಳಿ, ಕ್ಯಾಸಾಪುರ, ಕೂಟಗಲ್, ಚೌಡೇಶ್ವರಿ ಹಳ್ಳಿ, ಎಂ.ಜಿ. ಪಾಳ್ಯ, ಮಾಗಡಿಯ ವಿವಿಧ ಹಳ್ಳಿಗಳು, ಕನಕಪುರದ ಚಿಕ್ಕಕಲ್ಬಾಳು, ಚಿಕ್ಕಮುದವಾಡಿ ಭಾಗದಲ್ಲಿ ಈ ಸೋಂಕು ಹೆಚ್ಚಾಗಿ ಹರಡಿದೆ.

ಈ ವರ್ಷ ಏಪ್ರಿಲ್‌ನಲ್ಲಿ ಲಸಿಕೆ ಅಭಿಯಾನ ಆರಂಭ ಆಗಬೇಕಿತ್ತು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಅಭಿಯಾನ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಕೇಂದ್ರದಿಂದ ಇನ್ನೂ ಅನುದಾನ ಬಂದಿಲ್ಲ. ಹೀಗಾಗಿ ಸದ್ಯ ಸ್ಥಳೀಯ ಅನುದಾನವನ್ನೇ ಬಳಸಿಕೊಂಡು ಅಗತ್ಯ ಇರುವ ಕಡೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರವು ಪಶುಪಾಲನಾ ಇಲಾಖೆಗೆ ಸೂಚನೆ ನೀಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಸೋಂಕು ಬಾಧಿತ ಗ್ರಾಮಗಳ ಸುತ್ತಮುತ್ತ ಮಾತ್ರ ಲಸಿಕೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಸದ್ಯ ರೋಗ ಕಾಣಿಸಿಕೊಂಡಿರುವ ಗ್ರಾಮಗಳ 5 ಕಿ.ಮೀ ಸುತ್ತ ಲಸಿಕೆ ಅಭಿಯಾನ ನಡೆದಿದೆ. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸೋಂಕು ಹರಡದಂತೆ ನಿಯಂತ್ರಿಸಲಾಗುತ್ತಿದೆ. ಇದರ ಜೊತೆಗೆ ಸೋಂಕು ತಡೆಯಲು ಗ್ರಾಮಕ್ಕೆ ಸೋಂಕು ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.

ತಂಡಗಳ ರಚನೆ: ರಿಂಗ್‌ ವ್ಯಾಕ್ಸಿನ್ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ರಾಮನಗರ ತಾಲ್ಲೂಕಿನ 14 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ಇದಕ್ಕೆ ಹೊಂದಿಕೊಂಡಂತೆ 5 ಕಿ.ಮೀ ವ್ಯಾಪ್ತಿಯಲ್ಲಿ 49 ಗ್ರಾಮಗಳಲ್ಲಿ ಲಸಿಕೆ ಹಾಕಲು 10 ತಂಡಗಳನ್ನು ರಚನೆ ಮಾಡಲಾಗಿದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ 13 ಗ್ರಾಮಗಳಲ್ಲಿ ರೋಗ ಉಲ್ಬಣಿಸಿದ್ದು, 43 ಗ್ರಾಮಗಳಲ್ಲಿ ರಿಂಗ್ ವ್ಯಾಕ್ಸಿನ್ ನಡೆಸಲು 7 ತಂಡಗಳನನ್ನು ರಚನೆ ಮಾಡಲಾಗಿದೆ. ಮಾಗಡಿಯಲ್ಲಿ 2 ಗ್ರಾಮ ಹಾಗೂ ಕನಕಪುರದ ಒಂದು ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕಾಗಿ ತಲಾ ಒಂದು ತಂಡ ರಚನೆ ಮಾಡಲಾಗಿದೆ. ಒಟ್ಟಾರೆ ನಾಲ್ಕೂ ತಾಲ್ಲೂಕುಗಳಿಂದ 33,893 ರಾಸುಗಳಿಗೆ ಸದ್ಯ ಲಸಿಕೆ ಹಾಕಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಮತ್ತೆ ಮತ್ತೆ ಲಸಿಕೆ: ಸಾಮೂಹಿಕ ಲಸಿಕಾ ಕಾರ್ಯಕ್ರಮಗಳ ನಡುವೆಯೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕು ಹರಡಿಸುವ ವೈರಾಣುಗಳು ಪ್ರತಿ ಎರಡು ಮೂರು ವರ್ಷಗಳಿಗೆ ಒಮ್ಮೆ ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿವೆ. ಹೀಗಾಗಿ, ಔಷಧೋಪಚಾರ ಪರಿಣಾಮಕಾರಿ ಆಗುತ್ತಿಲ್ಲ. ಮತ್ತೆ ಮತ್ತೆ ಜಾನುವಾರುಗಳಿಗೆ ಲಸಿಕೆ ನೀಡುವುದು ಅನಿವಾರ್ಯ ಆಗುತ್ತಿದೆ ಎಂದು ಪಶು ವೈದ್ಯರು ಹೇಳುತ್ತಾರೆ. ಹಾಲಿನ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವ ತಪ್ಪುಕಲ್ಪನೆಯಿಂದ ರೈತರು ಲಸಿಕೆ ಹಾಕಿಸದೇ ಇರುವುದು, ಕೊಟ್ಟಿಗೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಇರುವುದು ರೋಗ ಹರಡಲು ಪ್ರಮುಖ ಕಾರಣವಾಗಿದೆ ಎಂದು ಅವರು ವಿವರಿಸುತ್ತಾರೆ.

ಲಸಿಕೆ ಯಾಕೆ?: 2013-14ನೇ ಸಾಲಿನಲ್ಲಿ ರಾಮನಗರ ಜಿಲ್ಲೆ ಒಂದರಲ್ಲಿಯೇ 1,300ಕ್ಕೂ ಹೆಚ್ಚು ರಾಸುಗಳು ಕಾಲುಬಾಯಿ ಜ್ವರಕ್ಕೆ ಬಲಿಯಾಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರವು ರಾಸುಗಳಿಗೆ ಕಾಲುಬಾಯಿ ಜ್ವರ ವಿರುದ್ಧದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಚಾಲನೆ ನೀಡಿತ್ತು. ಅಂದಿನಿಂದ ವರ್ಷಕ್ಕೆರಡು ಬಾರಿಯಂತೆ (ಮಾರ್ಚ್ ಮತ್ತು ಆಗಸ್ಟ್) 16 ಸುತ್ತುಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆದಿದೆ. ಇದರ ಜೊತೆಗೆ ವಾಶಿಂಗ್ ಸೋಡಾ ಮೊದಲಾದ ದ್ರಾವಣಗಳ ಸಂಪಡನೆ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ.

ಬಮೂಲ್ ಸಾಥ್‌: ಪಶುಪಾಲನಾ ಇಲಾಖೆಯ ಜೊತೆಗೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ಸಹ ಈ ಅಭಿಯಾನಕ್ಕೆ ಕೈಜೋಡಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ಲಸಿಕಾ ಕಾರ್ಯಕ್ರಮದ ಬಗ್ಗೆ ಹಳ್ಳಿಗಳಲ್ಲಿ ಈಗಾಗಲೇ ಪ್ರಚಾರವೂ ನಡೆದಿತ್ತು. ಬ್ಯಾನರ್, ಪೋಸ್ಟರ್, ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಹಳ್ಳಿಗಳಲ್ಲಿ ಲಸಿಕೆಯ ಹಿಂದಿನ ದಿನವೇ ಮೈಕ್ ಮೂಲಕ ಪ್ರಚಾರ ಮಾಡಲಾಗಿತ್ತು. ಇದರಿಂದಾಗಿ ಕಳೆದ ಸುತ್ತಿನ ಅಭಿಯಾನಲ್ಲಿ ಜಿಲ್ಲೆಯಲ್ಲಿನ ಶೇ 98ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ಪ್ರತಿ ರಾಸುವಿಗೆ 2 ಮಿ.ಲೀ ಲಸಿಕೆಯನ್ನು ಹಾಕಲಾಗುತ್ತದೆ. ಕಳೆದ ವರ್ಷ ಸರ್ಕಾರವು ಜಿಲ್ಲೆಗೆ 2.92 ಲಕ್ಷ ಡೋಸ್ ಲಸಿಕೆಯನ್ನು ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.