ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳ ಆರೋಗ್ಯ ನಿಗಾಕ್ಕೆ ಸಲಹೆ

ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ವೈದ್ಯಕೀಯ ಶಿಬಿರ
Published 8 ಮೇ 2024, 4:53 IST
Last Updated 8 ಮೇ 2024, 4:53 IST
ಅಕ್ಷರ ಗಾತ್ರ

ರಾಮನಗರ: ‘ಜೈಲಿನಲ್ಲಿರುವ ಕೈದಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಯಾವುದೋ ಕೆಟ್ಟ ಗಳಿಗೆಯಲ್ಲಿ ತಪ್ಪೆಸಗಿ ಬಂದಿರುವ ನೀವು, ಇಲ್ಲಿಂದ ಹೊರ ಹೋಗುವಾಗ ಉತ್ತಮ ಆರೋಗ್ಯದೊಂದಿಗೆ ಹೊಸ ಮನುಷ್ಯರಾಗಿ ಹೋಗಬೇಕು’ ಎಂದು ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರೋಷನ್ ಕುಮಾರ್ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚನ್ನಪಟ್ಟಣದ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಕೈದಿಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಕೈದಿಗಳು ಒಂದೇ ಕಡೆ ಇರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ. ಹಾಗಾಗಿ, ಕಾರಾಗೃಹದಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯದ ಜೊತೆಗೆ ಹೊರಗಿನವರು ಆಯೋಜಿಸುವ ವಿಶೇಷ ತಪಾಸಣಾ ಶಿಬಿರದ ಪ್ರಯೋಜನ ಪಡೆಯಬೇಕು. ಆರೋಗ್ಯದ ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಹಂಚಿಕೊಂಡು ಗುಣಮುಖರಾಗಬೇಕು’ ಎಂದು ಹೇಳಿದರು.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಶೀತಲ್ ಮಾತನಾಡಿ, ‘ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸರಿಯಾದ ನಿದ್ರೆ ಹಾಗೂ ದೈಹಿಕ ಚಟುವಟಿಕೆ ಉತ್ತಮ ಆರೋಗ್ಯದ ಲಕ್ಷಣಗಳು. ಜೈಲಿನಲ್ಲಿರುವವರಿಗೆ ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿರುವುದುಂಟು. ಕೈದಿಗಳು ತಮ್ಮಲ್ಲೇ ಕೊರಗದೆ ತಮ್ಮ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಂಡು ಪರಿಹರಿಸಿಕೊಳ್ಳಬೇಕು’ ಎಂದರು.

ಕಾರಾಗೃಹದ ಜೈಲರ್ ಇಮಾಮ್ ಖಾಸಿಂ, ‘ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಇಲಾಖೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಅದಕ್ಕಾಗಿ ಪ್ರತಿ ವಾರ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ದೊಡ್ಡ ಆಸ್ಪತ್ರೆಯವರ ಸಹಯೋಗದಲ್ಲಿ ವಿಶೇಷ ಶಿಬಿರ ನಡೆಸಿ ಬೇರೆ ಆರೋಗ್ಯದ ಸಮಸ್ಯೆಗಳಿದ್ದರೆ ಕಂಡುಕೊಂಡು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಶಿಬಿರದಲ್ಲಿ ನೇತ್ರ, ಕಿವಿ, ಮೂಗಿನ ಸಮಸ್ಯೆ, ಚರ್ಮ ರೋಗ, ಜನರಲ್ ಸರ್ಜರಿ, ಮೆಡಿಸಿನ್ ಸೇರಿದಂತೆ ವಿವಿಧ ತಪಾಸಣೆಗಳನ್ನು ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT