ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ ಯೋಜನೆ: ಖಾಸಗಿ ಆಸ್ಪತ್ರೆಗಳ ಹಿಂದೇಟು

ಸರ್ಕಾರ ನಿಗದಿಪಡಿಸಿದ ಶುಲ್ಕ ಕಡಿಮೆ ಎಂಬ ಕಾರಣಕ್ಕೆ ನೋಂದಣಿಗೆ ನಿರಾಸಕ್ತಿ
Last Updated 13 ಮೇ 2019, 12:03 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರ ನಿಗದಿಪಡಿಸಿದ ಶುಲ್ಕ ಕಡಿಮೆ ಎಂಬ ಕಾರಣಕ್ಕೆ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಕ್ಕೆ ನೋಂದಣಿ ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಇದರ ಆಶಯ ಸಾಕಾರಗೊಳ್ಳದಂತೆ ಆಗಿದೆ.

ಜಿಲ್ಲೆಯಲ್ಲಿ ಈವರೆಗೆ ಬೆಳಕು ಕಣ್ಣಿನ ಆಸ್ಪತ್ರೆ ಹೊರತುಪಡಿಸಿ ಯಾವೊಂದು ಖಾಸಗಿ ಆಸ್ಪತ್ರೆಯು ಈ ಯೋಜನೆ ಅಡಿ ನೋಂದಣಿ ಮಾಡಿಕೊಂಡಿಲ್ಲ. ಇದರಿಂದ ರೋಗಿಗಳು ಆರೋಗ್ಯ ಕಾರ್ಡ್‌ ಹೊಂದಿದ್ದಾಗ್ಯೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದಂತೆ ಆಗಿದೆ. ದುಡ್ಡು ಕೊಟ್ಟರಷ್ಟೇ ಚಿಕಿತ್ಸೆ ಎಂಬಂತಹ ಪರಿಸ್ಥಿತಿ ಇದೆ.

ಈ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ₨5 ಲಕ್ಷವರೆಗೆ ಹಾಗೂ ಎಪಿಎಲ್ ಕಾರ್ಡುದಾರರಿಗೆ ₨1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಚಿಕಿತ್ಸೆಗೆ ತಗುಲುವ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ವೆಚ್ಚವನ್ನು ಭರಿಸಲಿದೆ.

ರಾಜ್ಯದ 405 ಸರ್ಕಾರಿ ಆಸ್ಪತ್ರೆಗಳು ಈ ಯೋಜನೆಯಡಿ ನೋಂದಣಿಯಾಗಿವೆ. ಇವುಗಳಲ್ಲಿ ಲಭ್ಯವಿಲ್ಲದ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳು ರೋಗಿಗಳಿಗೆ ಅಗತ್ಯವಿದ್ದಲ್ಲಿ ವೈದ್ಯರ ಶಿಫಾರಸಿನ ಮೇರೆಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಬಹುದಾಗಿದೆ. ಆದರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಈ ಸೇವೆ ನೀಡಲು ಮುಂದೆ ಬಂದಿಲ್ಲ. ಹೀಗಾಗಿ ತುರ್ತು ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯ ಇದ್ದವರು ಬೆಂಗಳೂರಿನತ್ತ ಮುಖ ಮಾಡುವುದು ಅನಿವಾರ್ಯವಾಗಿದೆ.

ಹಿಂದೇಟು ಏಕೆ?: ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರಕ್ಕೆ ಖಾಸಗಿ ಆಸ್ಪತ್ರೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಸದ್ಯ ಈ ಆಸ್ಪತ್ರೆಗಳಲ್ಲಿನ ದರಕ್ಕೂ ಸರ್ಕಾರಿ ದರಕ್ಕೂ ಶೇ 50ರಷ್ಟು ವ್ಯತ್ಯಾಸ ಇದೆ.

ವೈದ್ಯರು, ಸಿಬ್ಬಂದಿ ಸಂಬಳ, ಮತ್ತಿತರ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೀಗಿದ್ದೂ ಸರ್ಕಾರವು ತನ್ನ ಮಾರ್ಗಸೂಚಿ ದರವನ್ನು ಕಳೆದ ಕೆಲವು ವರ್ಷಗಳಿಂದ ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ. ಕೆಲವೊಂದು ಶಸ್ತ್ರಚಿಕಿತ್ಸೆಗಳಿಗೆ ಕಾಟಾಚಾರಕ್ಕೆ ಎಂಬಂತೆ ಅಲ್ಪ ದರ ಏರಿಕೆ ಮಾಡಿದೆ ಎನ್ನುವುದು ಖಾಸಗಿ ವೈದ್ಯರ ಆರೋಪವಾಗಿದೆ.

ಪರಿಶೀಲನೆಯೂ ವಿಳಂಬ: ಯೋಜನೆಯ ಅಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮುನ್ನ ರೋಗಿಯು ಸರ್ಕಾರಿ ವೈದ್ಯರಿಂದ ಶಿಫಾರಸು ಪತ್ರ ಪಡೆಯಬೇಕಾಗುತ್ತದೆ. ಜಿಲ್ಲಾಸ್ಪತ್ರೆಯಿಂದ ಈ ಅನುಮೋದನೆಗೆ ಸಮಯ ಹಿಡಿಯುತ್ತಿದೆ ಎನ್ನುವುದು ರೋಗಿಗಳ ದೂರು.

ಅನುಮೋದನೆಗೆ ಕೆಲವೊಮ್ಮೆ ಎರಡು ಮೂರು ದಿನ ಹಿಡಿಯತ್ತದೆ. ಗಂಭೀರ ಆರೋಗ್ಯ ಸಮಸ್ಯೆ ಇರುವ, ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಇರುವವರು ಇದರಿಂದ ತುರ್ತು ಸಮಯದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವೂ ಇದೆ. ಇತರೆ ಖಾಸಗಿ ವಿಮೆಗಳಂತೆಯೇ ಈ ಯೋಜನೆಗೂ ಕೆಲವೇ ಗಂಟೆಗಳ ಒಳಗೆ ಅನುಮತಿ ಸಿಕ್ಕರೆ ಅನುಕೂಲ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕಾರ್ಡ್ ಪಡೆಯುವುದು ಹೇಗೆ?

ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯಕ್ಕೆ 22,499 ಮಂದಿ ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದಾರೆ. ಚುನಾವಣಾ ಕಾರ್ಯಗಳ ಹಿನ್ನೆಲೆಯಲ್ಲಿ ಕಾರ್ಡ್‌ ವಿತರಣೆಗೆ ಹಿನ್ನಡೆ ಆಗಿತ್ತು. ಇದೀಗ ಮತ್ತೆ ಚುರುಕು ಪಡೆದಿದೆ. ಸಾರ್ವಜನಿಕರು ತಮ್ಮ ರೇಷನ್‌ ಕಾರ್ಡ್‌, ಆಧಾರ್‌ ದಾಖಲೆ ನೀಡಿ ಜಿಲ್ಲಾಸ್ಪತ್ರೆ ಇಲ್ಲವೇ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡು ಕಾರ್ಡ್ ಪಡೆಯಬಹುದಾಗಿದೆ.

‘ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ದಿನವೊಂದಕ್ಕೆ 80–100 ಕಾರ್ಡ್‌ ವಿತರಣೆ ಆಗುತ್ತಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ 20–30 ಕಾರ್ಡ್‌ ನೀಡಲಾಗುತ್ತಿದೆ. ಸಾರ್ವಜನಿಕರು ಅಗತ್ಯ ದಾಖಲೆ ಹಾಜರುಪಡಿಸಿ ನೋಂದಾಯಿಸಿಕೊಳ್ಳಬಹುದಾಗಿದೆ’ ಎಂದು ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಡ್‌ ವಿತರಣೆ ವಿವರ (ಏಪ್ರಿಲ್ ಅಂತ್ಯಕ್ಕೆ)
ಆಸ್ಪತ್ರೆ ವಿತಣೆಯಾದ ಕಾರ್ಡ್

ಜಿಲ್ಲಾಸ್ಪತ್ರೆ 3684
ಚನ್ನಪಟ್ಟಣ 492
ಕನಕಪುರ 1318
ಮಾಗಡಿ 1806
ಸೋಲೂರು 2577
ಬಿಡದಿ 2611
ಹಾರೋಹಳ್ಳಿ 1368
ಸಾತನೂರು 2663
ಒಟ್ಟು 22,490

ಕಾರ್ಡ್ ಸೇವೆ ಪಡೆದವರು (ಏಪ್ರಿಲ್ ಅಂತ್ಯಕ್ಕೆ)

ಆಸ್ಪತ್ರೆ ರೋಗಿಗಳು
ಜಿಲ್ಲಾಸ್ಪತ್ರೆ 1172
ಚನ್ನಪಟ್ಟಣ 283
ರಾಮನಗರ 284
ಕನಕಪುರ 365
ಮಾಗಡಿ 240

*ವಿವಿಧ ಚಿಕಿತ್ಸೆಗಳಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕವು ಕಡಿಮೆ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಮುಂದೆ ಬರುತ್ತಿಲ್ಲ. ಈವರೆಗೆ ಒಂದು ಆಸ್ಪತ್ರೆಯಷ್ಟೇ ನೋಂದಣಿ ಮಾಡಿಕೊಂಡಿದೆ
-ಡಾ. ಅಮರ್‌ನಾಥ್‌,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT