ಮಂಗಳವಾರ, ಮಾರ್ಚ್ 9, 2021
28 °C
ಬಿಡದಿ ಬಿಜಿಎಸ್ ವೃತ್ತದಿಂದ ಟೊಯೊಟಾ ಕಾರ್ಖಾನೆವರೆಗೆ ಪಾದಯಾತ್ರೆ; ಮುಖಂಡರ ನೇತೃತ್ವ

ಕಾರ್ಮಿಕರ ಪರ ಪ್ರತಿಭಟನೆ 28ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಕಾರ್ಮಿಕರ ಬಿಕ್ಕಟ್ಟು ಪರಿಹರಿಸುವಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ಇದೇ 28ರಂದು ಬಿಡದಿಯಲ್ಲಿ ಪಕ್ಷಾತೀತವಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.

‘ಬೆಳಿಗ್ಗೆ 10.30ಕ್ಕೆ ಬಿಡದಿಯ ಬಿಜಿಎಸ್ ವೃತ್ತದಲ್ಲಿ ಬಾಲಗಂಗಾಥರನಾಥ ಶ್ರೀಗಳ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆ ಆರಂಭಗೊಳ್ಳಲಿದೆ. ಅಲ್ಲಿಂದ ಟೊಯೊಟಾ ಕಾರ್ಖಾನೆಯವರೆಗೆ ಕಾಲ್ನಡಿಗೆಯಲ್ಲಿ ತೆರಳಿ ನಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸಂಸದ ಡಿ.ಕೆ. ಸುರೇಶ್‌, ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಕಾರ್ಮಿಕರು ಮತ್ತವರ ಕುಟುಂಬದವರು ಸೇರಿದಂತೆ ನೂರಾರು ಮಂದಿ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರೈತ ಸಂಘ, ವಕೀಲರ ಸಂಘ, ಕನ್ನಡಪರ, ಕಾರ್ಮಿಕರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಬೆಂಬಲ ನೀಡಿವೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಂಸದ ಡಿ.ಕೆ. ಸುರೇಶ್‌ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕಾರ್ಮಿಕರ ಜೊತೆಗೆ ಮಾತುಕತೆಗೆ ಆಡಳಿತ ಮಂಡಳಿ ಒಪ್ಪಲಿಲ್ಲ. ಕಾರ್ಮಿಕರು ತಪ್ಪು ಮಾಡಿದ್ದರೆ ಅದಕ್ಕೆ ನಿಯಮಾನುಸಾರ ಶಿಕ್ಷೆ ಕೊಡಲು ಅವಕಾಶ ಇದೆ. ಆದರೆ ಮಾತುಕತೆಯೇ ಆಡುವುದಿಲ್ಲ ಎನ್ನುವ ಹಠಮಾರಿ ಧೋರಣೆ ಸರಿಯಲ್ಲ. ಈ ಕಾರಣಕ್ಕೆ 80 ದಿನವಾದರೂ ಮುಷ್ಕರ ನಿಂತಿಲ್ಲ. ಇದು ನೂರು ದಿನ ತಲುಪುವುದರೊಳಗೆ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಜನರ ಜೊತೆಗೂಡಿ ಕಾರ್ಖಾನೆಗೆ ಬೀಗ ಜಡಿಯಲಾಗುವುದು’ ಎಂದು ಎಚ್ಚರಿಸಿದರು.

‘ಕಾರ್ಮಿಕರನ್ನು ಅಮಾನತು ಮಾಡಿರುವ ಅಧಿಕಾರಿಗಳು ಇನ್ನೂ ಅವರ ವಿಚಾರಣೆಯನ್ನೇ ಮಾಡಿಲ್ಲ. ಈಗ ಇರುವ ಕಾಯಂ ನೌಕರರನ್ನು ಹೊರದಬ್ಬಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದರು. ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಮುಖಂಡರಾದ ಬ್ಯಾಟಪ್ಪ, ಗಾಣಗಲ್‌ ನಟರಾಜು, ಉಮೇಶ್, ಪಾರ್ವತಮ್ಮ, ಜಯಮ್ಮ, ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ಇದ್ದರು.

ಡಿಸಿಎಂ ವಿರುದ್ಧ ಅಸಮಾಧಾನ
‘ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಕಾಳಜಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ಅವರಿಗೆ ಇಚ್ಛಾಶಕ್ತಿ ಇದ್ದಂತಿಲ್ಲ. ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎನ್ನುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ಇಂತಹ ವಿಷಯಗಳ ಇತ್ಯರ್ಥಕ್ಕೆ ಎಷ್ಟು ಕಾಲ ಬೇಕೆಂಬುದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಗೆ ನಮ್ಮವರೇ ಉಸ್ತುವಾರಿ ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಅನ್ಯ ಜಿಲ್ಲೆಗಳ ಸಚಿವರು ಪ್ರವಾಸಿಗರಂತೆ ಬಂದು ಹೋಗುತ್ತಾರೆ’ ಎಂದು ಬಾಲಕೃಷ್ಣ ಟೀಕಿಸಿದರು.

ಎಚ್‌ಡಿಕೆ ನೇತೃತ್ವ ವಹಿಸಲಿ
‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಟ್ವಿಟರ್, ಫೇಸ್‌ಬುಕ್‌ ಖಾತೆ ಮೂಲಕ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದ್ದಾರೆ. ಆದರೆ ಅಷ್ಟೇ ಸಾಲದು. ಅವರು ಈ ಹೋರಾಟದ ನೇತೃತ್ವ ವಹಿಸುವುದಾದರೆ ನಾವೆಲ್ಲ ಅವರ ಹಿಂದೆ ನಿಲ್ಲುತ್ತೇವೆ’ ಎಂದು ಬಾಲಕೃಷ್ಣ ಹೇಳಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು