ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಕಾರ್ಯದರ್ಶಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಬಾನಂದೂರು ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ಆರೋಪ
Published 9 ಜನವರಿ 2024, 7:45 IST
Last Updated 9 ಜನವರಿ 2024, 7:45 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಂದು ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸ್ಥಳೀಯ ರೈತರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘದ ಕಾರ್ಯದರ್ಶಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತ ಹಾಗೂ ಸಮೀಪದ ಮಲ್ಲೇಶ್ವರ ಬಡಾವಣೆಯಲ್ಲಿರುವ ತಾಲ್ಲೂಕು ಸಹಕಾರ ಸಂಘಗಳ ನಿಬಂಧಕರ ಕಚೇರಿ ಮುಂಭಾಗ, ಜೆಡಿಎಸ್ ಮುಖಂಡ ಎ. ಮಂಜುನಾಥ್ ನೇತೃತ್ವದಲ್ಲಿ ಆಡಳಿತ ಮಂಡಳಿಯವರು ಮತ್ತು ರೈತರು ಜಮಾಯಿಸಿದರು. ಕಾರ್ಯದರ್ಶಿ ಕುಮಾರ್ ಮತ್ತು ಬಮೂಲ್ ನಿರ್ದೇಶಕ ಪಿ. ನಾಗರಾಜ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದಲ್ಲಿ ಕಾರ್ಯದರ್ಶಿಯಾಗಿರುವ ಕುಮಾರ್ ಅವರು ಸುಮಾರು ₹1.70 ಕೋಟಿಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ. ಬಮೂಲ್ ನಿರ್ದೇಶಕ ಪಿ. ನಾಗರಾಜ್ ಅವರು ಈ ಅವ್ಯವಹಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಅನಗತ್ಯವಾಗಿ ಮೂಗು ತೂರಿಸುತ್ತಿರುವ ನಾಗರಾಜ್ ಅವರು, ಸಂಘಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿ ವಿರುದ್ಧ ಆಕ್ರೋಶ: ಅಹವಾಲು ಆಲಿಸಲು ಸ್ಥಳಕ್ಕೆ ಬಂದ ಸಹಕಾರ ಸಂಘಗಳ ನಿಬಂಧಕ ಹರೀಶ್ ಅವರ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು, ‘ಕಾರ್ಯದರ್ಶಿ ವಿರುದ್ಧ ಹಣ ದುರುಪಯೋಗದ ಕುರಿತು ಸಂಘದಲ್ಲಿ ಕೈಗೊಂಡ ನಿರ್ಣಯಗಳನ್ನು ನಿಮ್ಮ ಗಮನಕ್ಕೆ ತಂದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ, ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕುಮಾರ್ ವಿರುದ್ಧ ಎರಡು ದಿನದೊಳಗೆ ಅಮಾನತು ಮಾಡಬೇಕು. ಜಿಲ್ಲಾ ನಿಬಂಧಕರು ಮತ್ತು ತಾಲ್ಲೂಕು ನಿಬಂಧಕರು ರೈತರ ದೂರು ಕಡೆಗಣಿಸಿ ಕಾರ್ಯದರ್ಶಿ ಪರವಾಗಿ ನಿಂತು ಭ್ರಷ್ಟಚಾರಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಿ, ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಕೃಷ್ಣಪ್ಪ, ರೈತ ಮುಖಂಡರಾದ ಜಗದೀಶ್, ಪಾಪಣ್ಣ, ನಿರ್ದೇಶಕರಾದ ಶ್ರೀಧರ್, ಗಿರಿಜಮ್ಮ, ಶಂಭಮ್ಮ, ಜೈಕುಮಾರ್, ಕುಮಾರ್, ಗಂಗಾಧರ್, ಬಸವರಾಜು ಮುಖಂಡರಾದ ರೈಡ್ ನಾಗರಾಜು, ಸುರೇಶ್, ಕೆಂಪರಾಜು, ಸದಾಶಿವ, ಶಶಿಶೇಖರ್, ರಾಜಶೇಖರ್ ಇದ್ದರು.

ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಬೀಗ: ಎಚ್ಚರಿಕೆ ‘ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ವಿವಿಧ ರೀತಿಯ ಸಹಕಾರ ಸಂಘಗಳಲ್ಲಿರುವ ಭ್ರಷ್ಟಾಚಾರಕ್ಕೆ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದಾರೆ. ಬಾನಂದೂರು ಸಂಘದಲ್ಲಿ ಅವ್ಯವಹಾರ ನಡೆಸಿರುವ ಕಾರ್ಯದರ್ಶಿಗೂ ರಕ್ಷಣೆ ಕೊಡುತ್ತಿದ್ದಾರೆ. ಇದೀಗ ಒಂದೊಂದೇ ಘಟನೆಗಳು ಬೆಳಕಿಗೆ ಬರುತ್ತಿವೆ. ವಾರದ ಹಿಂದೆ ಅಣ್ಣಹಳ್ಳಿ ಗ್ರಾಮದವರು ಹಾಲು ಸುರಿದು ಪ್ರತಿಭಟನೆ ನಡೆಸಿದ್ದರು. ಇದೆಲ್ಲದರ ಹಿಂದೆ ಬಮೂಲ್ ನಿರ್ದೇಶಕರು ಇದ್ದಾರೆ. ಕಾರ್ಯದರ್ಶಿಗಳನ್ನು ದತ್ತು ತೆಗೆದುಕೊಂಡಿರುವ ಅವರು ಸಂಘದಲ್ಲಿ ಅವ್ಯವಹಾರ ನಡೆಸಿ ದುಡ್ಡು ಹಂಚಿಕೊಳ್ಳುತ್ತಿದ್ದಾರೆ. ಬಾನಂದೂರು ಸಂಘದ ಕಾರ್ಯದರ್ಶಿಯನ್ನು ಒಂದೆರಡು ದಿನದಲ್ಲಿ ಅಮಾನತಗೊಳಿಸಬೇಕು. ಇಲ್ಲದಿದ್ದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಸಂಘಗಳ ಅವ್ಯವಹಾರ ಕುರಿತು ಸಂಬಂಧಪಟ್ಟ ಸಚಿವರಿಗೂ ಪತ್ರ ಬರೆಯುತ್ತೇನೆ’ ಎಂದು ಜೆಡಿಎಸ್ ಮುಖಂಡ ಎ. ಮಂಜುನಾಥ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT