ಬುಧವಾರ, ಆಗಸ್ಟ್ 4, 2021
20 °C
ಶೇ 60.96ರಷ್ಟು ಫಲಿತಾಂಶ: ಕಲಾ ವಿಭಾಗದಲ್ಲಿ ಅತಿ ಹೆಚ್ಚು ಮಂದಿ ಅನುತ್ತೀರ್ಣ

25ನೇ ಸ್ಥಾನಕ್ಕೆ ಕುಸಿದ ರಾಮನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಯು ಶೇ. 60.96ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 25ನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದೆ.

ಕಳೆದ ಬಾರಿ ರಾಮನಗರವು ಶೇ.62.08ರಷ್ಟು ಫಲಿತಾಂಶದೊಂದಿಗೆ 24ನೇ ಸ್ಥಾನ ಗಳಿಸಿತ್ತು. ಈ ಬಾರಿ ಮೊದಲ ಹತ್ತರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಆದರೆ ಕಳೆದ ಬಾರಿಗಿಂತ ಶೇ 1.4ರಷ್ಟು ಫಲಿತಾಂಶ ಕಡಿಮೆ ಆಗಿದೆ.

ಹೊಸತಾಗಿ ಪರೀಕ್ಷೆಗೆ ತೆಗೆದುಕೊಂಡಿದ್ದ 7506 ಮಂದಿ ಪೈಕಿ 4576 ಮಂದಿ ಉತ್ತೀರ್ಣರಾಗಿದ್ದಾರೆ. 2930 ಮಂದಿ ಅನುತೀರ್ಣರಾಗಿದ್ದಾರೆ. ಈ ಮೂಲಕ ಶೇ.60.96 ಪಡೆದುಕೊಂಡಿದ್ದಾರೆ. ಖಾಸಗಿ ಅಭ್ಯರ್ಥಿಗಳಾಗಿ 287 ಮಂದಿ ಹಾಜರಾಗಿದ್ದು,ಇದರಲ್ಲಿ 65 ಮಂದಿ ಅಷ್ಟೇ ಪಾಸಾಗಿದ್ದಾರೆ. ಪುನಾರಾವರ್ತಿ ಅಭ್ಯರ್ಥಿಯಾಗಿ 1584 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, 434 ಮಂದಿಯಷ್ಟೇ ಪಾಸಾಗಿದ್ದಾರೆ.

ಬಾಲಕಿಯರೇ ಮೇಲುಗೈ: ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 5125 ಮಂದಿ ಬಾಲಕಿಯರು ಪರೀಕ್ಷೆ ಬರೆದಿದ್ದು, ಇವರಲ್ಲಿ 3150 ಮಂದಿ ಉತೀರ್ಣರಾಗಿದ್ದಾರೆ. ಆ ಮೂಲಕ ಶೇ.61.46 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. 4252 ಬಾಲಕರು ಪರೀಕ್ಷೆ ಬರೆದಿದ್ದು, ಇದರಲ್ಲಿ 1925 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆ ಮೂಲಕ ಶೇ.45.27 ಫಲಿತಾಂಶವನ್ನು ದಾಖಲಿಸಿದ್ದಾರೆ.

ನಗರದ ಮಂದಿ ಹೆಚ್ಚು ಉತ್ತೀರ್ಣ: ಜಿಲ್ಲೆಯಲ್ಲಿ 6778 ಮಂದಿ ನಗರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3841 ಪಾಸಾಗುವ ಮೂಲಕ ಶೇ.56.67ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ 2599 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರೇ, 1234 ಪಾಸಾಗಿದ್ದು ಆ ಮೂಲಕ 47.48ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ.

ವಿಜ್ಞಾನದಲ್ಲಿ ಹೆಚ್ಚು ಫಲಿತಾಂಶ: ದ್ವಿತೀಯ ಪಿಯುನ ಮೂರು ವಿಭಾಗಗಳ ಪೈಕಿ ಕಲಾ ವಿಭಾಗದಲ್ಲಿ ಕನಿಷ್ಠ ಫಲಿತಾಂಶ ದಾಖಲಾಗಿದೆ. 2849 ಮಂದಿ ಪರೀಕ್ಷೆ ಬರೆದಿದ್ದು, ಕೇವಲ 858 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ ಶೇ. 30.12ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 4329 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, 2708 ಮಂದಿ ಪಾಸಾಗಿ ಶೇ.62.55 ಫಲಿತಾಂಶ ದಾಖಲಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2199 ಮಂದಿ ಪೈಕಿ 1509 ಮಂದಿ ಉತ್ತೀರ್ಣರಾಗಿದ್ದು, ಶೇ 68.62 ಫಲಿತಾಂಶ ಗಳಿಸಿದ್ದಾರೆ.

ಕಬ್ಬಿಣದ ಕಡಲೆ ಆಯ್ತ ಇಂಗ್ಲಿಷ್‌?
ಕಲಾ ವಿಭಾಗದಲ್ಲಿ ಜಿಲ್ಲೆಯ ಶೇ 70ರಷ್ಟು ಅನುತ್ತೀರ್ಣರಾಗಿದ್ದಾರೆ. ಅದರಲ್ಲೂ ಇಂಗ್ಲಿಷ್‌ ವಿಷಯದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಎಡವಿರುವುದು ನಿರಾಸೆ ಮೂಡಿಸಿದೆ. ಕಳೆದ ಮಾರ್ಚ್‌‌ನಲ್ಲೇ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತಾದರೂ ಕೊರೊನಾ ಸೋಂಕಿನ ಕಾರಣಕ್ಕೆ ಇಂಗ್ಲಿಷ್ ಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿತ್ತು. ಕಳೆದ ಜೂನ್‌ನಲ್ಲಿ ಪರೀಕ್ಷೆ ಸಂಘಟಿಸಲಾಗಿತ್ತು. ಎರಡು ತಿಂಗಳ ಬಿಡುವು ಇದ್ದ ಕಾರಣ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಗಂಭೀರತೆಯೂ ಕಡಿಮೆ ಆಗಿತ್ತು. ಹೀಗಾಗಿ ಬಹುತೇಕರು ಇಂಗ್ಲಿಷ್‌ನಲ್ಲಿ ಎಡವಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.