ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಶೇ 62.08 ಫಲಿತಾಂಶ, ನಾಲ್ಕು ಸ್ಥಾನ ಕುಸಿತ

ದ್ವಿತೀಯ ಪಿ.ಯು. ಪರೀಕ್ಷೆ: ಜಿಲ್ಲೆಯಲ್ಲಿನ 4600 ವಿದ್ಯಾರ್ಥಿಗಳು ಉತ್ತೀರ್ಣ
Last Updated 15 ಏಪ್ರಿಲ್ 2019, 12:09 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಯ ಶೇ 62.08 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲೆಯು ರಾಜ್ಯದಲ್ಲಿ 24ನೇ ಸ್ಥಾನ ಪಡೆದಿದೆ.

ಕಳೆದ ವರ್ಷ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಯು 20ನೇ ಸ್ಥಾನದಲ್ಲಿ ಇತ್ತು. ಈ ಬಾರಿ ನಾಲ್ಕು ಸ್ಥಾನ ಕೆಳಕ್ಕೆ ಇಳಿದಿದೆ. ಫಲಿತಾಂಶವು ಶೇ 2.56ರಷ್ಟು ಕಡಿಮೆ ಆಗಿದೆ. 2017ರಲ್ಲಿ ಜಿಲ್ಲೆಯು 24 ಸ್ಥಾನ ಪಡೆದಿದ್ದು, ಶೇ 51ರಷ್ಟು ಫಲಿತಾಂಶ ಬಂದಿತ್ತು.

ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ 9020 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 5002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 55.45 ಫಲಿತಾಂಶ ಸಿಕ್ಕಿದೆ. 296 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 64 ಮಂದಿ ಮಾತ್ರ ಪಾಸಾಗಿ ಶೇ 21.62 ಫಲಿತಾಂಶ ಬಂದಿದೆ. 1314 ಪುನಾವರ್ತಿತ ವಿದ್ಯಾರ್ಥಿಗಳ ಪೈಕಿ 338 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ 25.72 ಫಲಿತಾಂಶ ಬಂದಿದೆ.

ಬಾಲಕಿಯರ ಮೇಲುಗೈ: ಈ ಬಾರಿಯೂ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳೂ ಸೇರಿದಂತೆ 4982 ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 3154 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ 63.31 ಫಲಿತಾಂಶ ದಾಖಲಿಸಿದ್ದಾರೆ. 4038 ಬಾಲಕರು ಪರೀಕ್ಷೆ ಬರೆದಿದ್ದು, 3154 ಮಂದಿ 1848 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 45.77 ಫಲಿತಾಂಶ ಪಡೆದಿದ್ದಾರೆ.

ಇಂಗ್ಲಿಷ್‌ ಮಾಧ್ಯಮಕ್ಕೆ ಗರಿಷ್ಠ ಫಲಿತಾಂಶ: ಈ ವರ್ಷ 4376 ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು, ಇವರಲ್ಲಿ 2458 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 58.14 ಫಲಿತಾಂಶ ಸಿಕ್ಕಿದೆ. ಕನ್ನಡ ಮಾಧ್ಯಮದಲ್ಲಿ 4644 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 2458 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ 52.93 ಫಲಿತಾಂಶ ಪಡೆದಿದ್ದಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲಾವಾರು ಫಲಿತಾಂಶದಲ್ಲಿ ನಾಲ್ಕು ಸ್ಥಾನ ಕುಸಿತ ಕಂಡಿದ್ದೇವೆ. ಆದರೆ ರಾಜ್ಯಮಟ್ಟದ ಸರಾಸರಿ ಫಲಿತಾಂಶಕ್ಕಿಂತ (ಶೇ 61) ನಮ್ಮ ಶೇಕಡವಾರು ಪ್ರಮಾಣ ಉತ್ತಮವಾಗಿರುವುದು ಸಮಾಧಾನ ತಂದಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶ ಸಿಕ್ಕಿದೆ. ಆದರೆ ಕಲಾ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುರ್ತೀರ್ಣರಾಗಿರುವುದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ’ ಎಂದು ಅವರು ವಿಶ್ಲೇಷಿಸಿದರು.

‘ ಮಂಗಳವಾರ ಬೆಳಗ್ಗೆ ಜಿಲ್ಲೆಯಲ್ಲಿನ 78 ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ 7ರಿಂದ 18ರವರೆಗೆ ಪೂರಕ ಪರೀಕ್ಷೆ ಬರೆಯಲು ಇಲಾಖೆಯು ಅವಕಾಶ ಕಲ್ಪಿಸಿದೆ. ಮರು ಮೌಲ್ಯಮಾಪನ ಸೇರಿದಂತೆ ವಿದ್ಯಾರ್ಥಿಗಳು ಯಾವುದೇ ಆಕ್ಷೇಪಗಳ ಸಂಬಂಧ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ನಗರ ವಿದ್ಯಾರ್ಥಿಗಳ ಮೇಲುಗೈ
ಹೊಸತಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಗ್ರಾಮೀಣರಿಗಿಂತ ನಗರದಲ್ಲಿರುವ ವಿದ್ಯಾರ್ಥಿಗಳು ತುಸು ಉತ್ತಮ ಫಲಿತಾಂಶ ಪಡೆದಿದ್ದಾರೆ.

ನಗರ/ಪಟ್ಟಣದ ವ್ಯಾಪ್ತಿಯಲ್ಲಿ 5284 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 3285 ಮಂದಿ ಉತ್ತೀರ್ಣರಾಗುವ ಮೂಲಕ ಶೇ 62.17ರಷ್ಟು ಫಲಿತಾಂಶ ಬಂದಿದೆ. 2126 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 1315 ಮಂದಿ ಉತ್ತೀರ್ಣರಾಗಿ ಶೇ 61.85 ಫಲಿತಾಂಶ ಸಿಕ್ಕಿದೆ.

ವಿಭಾಗವಾರು ಫಲಿತಾಂಶ (ಹೊಸತಾಗಿ ಪರೀಕ್ಷೆ ಬರೆದವರು)

ವಿಭಾಗ ಪರೀಕ್ಷೆ ಬರೆದವರು ಉತ್ತೀರ್ಣ ಶೇಕಡವಾರು ಫಲಿತಾಂಶ
ಕಲೆ 2218 1149 51.8
ವಾಣಿಜ್ಯ 3433 2442 71.13
ವಿಜ್ಞಾನ 1759 1009 57.36
ಒಟ್ಟು 7410 4600 62.08

*ಕಲಾ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾದ ಕಾರಣ ಜಿಲ್ಲೆಯ ಫಲಿತಾಂಶ ಪ್ರಮಾಣ ಕುಸಿದಿದೆ. ಆದರೆ ರಾಜ್ಯ ಸರಾಸರಿಗಿಂತ ಉತ್ತಮವಾಗಿದೆ
–ಸವಿತಾ
ಡಿಡಿಪಿಯು, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT