ಗುರುವಾರ , ಜನವರಿ 23, 2020
28 °C

ಸಾವಿತ್ರಿಬಾಯಿ ಫುಲೆ ಅಕ್ಷರ ಬೀಜ ಬಿತ್ತಿದ ಸಮಾಜ ಸುಧಾರಕಿ: ಯೋಗೀಶ್ ಚಕ್ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಸಾವಿತ್ರಿಬಾಯಿ ಫುಲೆ ಅವರು ಭಾರತೀಯ ಸಮಾಜದ ಸಾಂಪ್ರದಾಯಿಕ ಕಟ್ಟುಪಾಡು, ಮೌಢ್ಯ, ಅಂಧಶ್ರದ್ಧೆಗಳನ್ನು ಮೀರಿ ದಮನಿತರ ಎದೆಯಲ್ಲಿ ಅಕ್ಷರ ಬೀಜವನ್ನು ಬಿತ್ತಿದ ದಿಟ್ಟ ಸಮಾಜ ಸುಧಾರಕಿ ಎಂದು ಕನ್ನಡ ಶಿಕ್ಷಕ ಯೋಗೀಶ್ ಚಕ್ಕೆರೆ ತಿಳಿಸಿದರು.

ತಾಲ್ಲೂಕಿನ ಹೊನ್ನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹುಟ್ಟಿದ ಸಾವಿತ್ರಿ ಪುಲೆ 8ನೇ ವರ್ಷದಲ್ಲೇ ಜ್ಯೋತಿಬಾ ಪುಲೆ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಸದಾ ಶೋಷಿತರು, ದಮನಿತರ ಪರ ಕೆಲಸ ಮಾಡಿದ್ದರು. ಪತಿಯಿಂದಲೆ ಶಿಕ್ಷಣದ ಮಹತ್ವ ಅರಿತು ಅಕ್ಷರಾಭ್ಯಾಸ ಮಾಡಿದ ಸಾವಿತ್ರಿ, ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಈ ದಂಪತಿ 18 ಶಾಲೆಗಳನ್ನು ನಡೆಸುವ ಮೂಲಕ ಅಕ್ಷರ ವಂಚಿತ ಮಹಿಳೆಯರು, ಶೋಷಿತರಿಗೆ ವಿದ್ಯೆ ನೀಡುವ ಮಹತ್ವದ ಕಾರ್ಯ ಮಾಡಿದ್ದರು ಎಂದರು.

ಶಾಲೆಯ ಮುಖ್ಯಶಿಕ್ಷಕ ಡೇನಿಯಲ್ ಸುಜಯಕುಮಾರ್ ಮಾತನಾಡಿ, ಸಾವಿತ್ರಿ ಫುಲೆ ಅವರ ಜನ್ಮ ದಿನವನ್ನು ಆಚರಿಸುವ ಮೂಲಕ ಮಹಿಳೆಯರೂ ಸೇರಿದಂತೆ ಸಮಸ್ತರಿಗೂ ವಿದ್ಯೆ ಕೊಡಬೇಕು ಎಂಬ ಬದ್ಧತೆಯ ಸಿದ್ಧಾಂತ ಪ್ರತಿಪಾದಿಸಿದಂತಾಗಿದೆ. ಜ್ಯೋತಿ ಬಾಫುಲೆ ದಂಪತಿ ಎಲ್ಲರಿಗೂ ವಿದ್ಯೆ ಸಿಗಬೇಕು ಎಂಬ ಆಲೋಚನೆ ಮಾಡಿ ಪ್ರಯತ್ನಿಸಿದ್ದು ಮಹತ್ವದ ಸಂಗತಿಯಾಗಿದೆ. ಇದರ ಜೊತೆಗೆ ಸಾಮಾಜಿಕ ಪಿಡುಗುಗಳ ವಿರುದ್ಧವಾಗಿ ಹೋರಾಡಿದ ಸಾವಿತ್ರಿ ಬಾಯಿ ಫುಲೆ ಅವರ ತತ್ವ ಆದರ್ಶಗಳನ್ನು ಅರಿತು ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಶಾಲೆಯ ಶಿಕ್ಷಕರಾದ ಪುಟ್ಟರಾಜು, ಶೋಭಾ, ನೇತ್ರಾ, ಸುಜಾತಾ, ಸಂಗಪ್ಪ ಹಾದಿಮನಿ, ಮಾನಸ, ಯೋಗಿತಾ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು