ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥಸ್ವಾಮಿ ತೆಪ್ಪೋತ್ಸವಕ್ಕೆ ಮಳೆ ಅಡ್ಡಿ

ಸಂಭ್ರಮ ಸವಿಯಲು ಬಂದಿದ್ದ ಭಕ್ತರಿಗೆ ನಿರಾಸೆ
Last Updated 17 ಏಪ್ರಿಲ್ 2022, 6:44 IST
ಅಕ್ಷರ ಗಾತ್ರ

ಮಾಗಡಿ: ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಪಟ್ಟಣದ ಗೌರಮ್ಮನಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು.

ವಾಡಿಕೆಯಂತೆ ಸಂಜೆ 6 ಗಂಟೆಗೆ ತೆಪ್ಪೋತ್ಸವ ಆರಂಭವಾಗಬೇಕಿತ್ತು. ರಾತ್ರಿ 7ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಕೆರೆಯ ಬಳಿ ತರಲಾಯಿತು. ತೆಪ್ಪೋತ್ಸವದಲ್ಲಿ ಮೂರ್ತಿಯನ್ನಿಟ್ಟು ತರಾತುರಿಯಲ್ಲಿ ಪೂಜಿಸಿದರು. ಪೂಜೆ ಮುಗಿದು ತೆಪ್ಪೋತ್ಸವ ಮೂರು ಅಡಿ ಮುಂದೆ ಸಾಗಿದ ಕೂಡಲೇ ಮಳೆ ಆರಂಭವಾಯಿತು.

ಕೆರೆ ಕೋಡಿಯ ಕಡೆಗೆ 50 ಅಡಿ ಚಲಿಸಿದ ತೆಪ್ಪೋತ್ಸವವನ್ನು ಕೆರೆಯ ಉತ್ತರ ದಿಕ್ಕಿನೆಡೆಗೆ ತಿರುಗಿಸಲಾಯಿತು. ಮಳೆ ಜೋರಾಗಿ ಸುರಿಯಲಾರಂಭಿಸಿದ ಕಾರಣ ತೆಪ್ಪೋತ್ಸವವನ್ನು ಮೊಟಕುಗೊಳಿಸಲಾಯಿತು. ಕೆರೆ ಬಳಿ ಕಾದು ಕುಳಿತಿದ್ದ ಮಹಿಳೆಯರು ಮತ್ತು ಭಕ್ತರು ಮಳೆಯಿಂದ ಅರ್ಧಕ್ಕೆ ತೆಪ್ಪೋತ್ಸವ ಮೊಟಕುಗೊಳಿಸಿದ್ದನ್ನು ಕಂಡು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು.

ತೆಪ್ಪೋತ್ಸವ ನಿರ್ಮಿಸಿದ್ದ ತಗ್ಗಿಕುಪ್ಪೆ ರಾಮಣ್ಣ, ಮುಕುಂದ, ಪಾಂಡುರಂಗ ತಂಡದವರು ತೆಪ್ಪೋತ್ಸವವನ್ನು ದಡಕ್ಕೆ ತಂದು ದೇವರ ಉತ್ಸವ ಮೂರ್ತಿಯನ್ನು ತೆಪ್ಪದಿಂದ ಕೆಳಗೆ ಇಳಿಸಿದರು.

ಸಿಪಿಐ ರವಿ ಬೆಳವಂಗಲ ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ರಥೋತ್ಸವದಂದು ಸಹ ಮಳೆ ಸುರಿದ ಕಾರಣ ಉತ್ಸವ ಮೂರ್ತಿಗಳು ರಥದ ಮೇಲೆಯೇ ಮಳೆಯಲ್ಲಿ ಒಂದು ಗಂಟೆ ಕಾಲ ನೆನೆದಿದ್ದವು. ತೆಪ್ಪೋತ್ಸವದಲ್ಲೂ ಮಳೆಗೆ ಸಿಲುಕಿ ಉತ್ಸವ ಮೂರ್ತಿಗಳು ತೋಯ್ದಿದ್ದು ಭಕ್ತರಲ್ಲಿ ನಿರಾಸೆ ಮೂಡಿಸಿತು.

ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT