ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ‘ಶ್ರದ್ಧೆ, ಸತತ ಪ್ರಯತ್ನದಿಂದ ಸಾಧನೆ ಸುಲಭ’

ಗೌಸಿಯಾ ಕಾಲೇಜು: ಉನ್ನತ ದರ್ಜೆಯಲ್ಲಿ ಪಾಸಾದ ಜಿಲ್ಲೆಯ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸನ್ಮಾನ
Published 7 ಮೇ 2024, 6:49 IST
Last Updated 7 ಮೇ 2024, 6:49 IST
ಅಕ್ಷರ ಗಾತ್ರ

ರಾಮನಗರ: ‘ಸಾಧನೆ ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ. ಯಾರಲ್ಲಿ ಶ್ರದ್ಧೆ, ಸತತ ಪ್ರಯತ್ನ ಹಾಗೂ ಪ್ರಾಮಾಣಿಕತೆ ಇರುತ್ತದೋ ಅವರು ಶಿಕ್ಷಣ ಸೇರಿದಂತೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡಬಲ್ಲರು. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯತ್ತ ಗಮನ ಹರಿಸಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ನಾಗಮ್ಮ ಎಂ.ಪಿ ಸಲಹೆ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಸಾಧನೆಗೆ ತಂದೆ–ತಾಯಿಗಳ ಜೊತೆಗೆ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಅಧಿಕಾರಿಗಳ ಪಾತ್ರ ಮಹತ್ವದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆಗೆ ಅವಕಾಶವಿದ್ದು, ಆ ಬಗ್ಗೆಯೂ ವಿದ್ಯಾರ್ಥಿಗಳು ಗಮನ ಹರಿಸಬೇಕು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈಗಿನಿಂದಲೇ ತಯಾರಿ ನಡೆಸಿದರೆ ತಾವಂದುಕೊಂಡ ಹುದ್ದೆಗಳನ್ನು ಅಲಂಕರಿಸಬಹುದು’ ಎಂದು ಹೇಳಿದರು.

‘ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಈಗ ವಿಫುಲ ಅವಕಾಶಗಳಿವೆ. ಹಿಂದೆ ಶಿಕ್ಷಣಕ್ಕೆ ಹಲವು ಅಡೆತಡೆಗಳಿದ್ದವು. ಇದೀಗ ಎಲ್ಲಾ ತಡೆಗಳು ನಿವಾರಣೆಯಾಗಿವೆ. ಸರ್ಕಾರ ಸಹ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಇದರ ಪ್ರಯೋಜನ ಪಡೆದು ಉನ್ನತ ಸಾಧನೆ ಮಾಡಬೇಕು. ಮುಂದೇನಾಗಬೇಕು ಎಂಬುದರ ಕುರಿತು ಈಗಲೇ ಸ್ಪಷ್ಟ ನಿರ್ಧಾರ ಕೈಗೊಂಡು ಮುಂದುವರಿಯಬೇಕು’ ಎಂದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ. ಶಿವಣ್ಣ ಮಾತನಾಡಿ, ‘ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಕಲಿಯುತ್ತಲೇ ಇರುತ್ತಾನೆ. ಶಿಕ್ಷಣವು ಜಾತಿ ಮತ್ತು ಧರ್ಮ ಮೀರಿದ್ದು. ಅದರ ಕಾರಣದಿಂದಲೇ ನಾವು ಊಹೆ ಕೂಡ ಮಾಡಲಾಗದಷ್ಟು ಜಗತ್ತು ಮುಂದುವರಿದಿದೆ. ಶಿಕ್ಷಣವು ಮನುಷ್ಯನ ಬದುಕಿಗೆ ಸನ್ನಡತೆಯನ್ನು ತೋರಿ, ಆತನನ್ನು ಸಮಾಜದ ಆಸ್ತಿಯನ್ನಾಗಿ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣ ಸಂಸ್ಥೆಗಳು ಜಗತ್ತಿನ ದೇವಾಲಯಗಳಿದ್ದಂತೆ. ಮಕ್ಕಳನ್ನು ಕೈ ಹಿಡಿದು ಅವರಿಗೆ ಹೇಗೆ ಬದುಕಬೇಕೆಂಬ ಸಂಸ್ಕಾರ ಕೊಡುವ ಶಕ್ತಿ ಶಿಕ್ಷಣ. ರಾಮನಗರ ಜಿಲ್ಲೆಯು ಈ ಸಲ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 84ರಷ್ಟು ಫಲಿತಾಂಶ ಪಡೆದಿದೆ. ಜಿಲ್ಲೆಯ ಉದಯವಾದ 17 ವರ್ಷಗಳಲ್ಲೇ ಪಡೆದಿರುವ ಅತ್ಯುತ್ತಮ ಫಲಿತಾಂಶ ಇದಾಗಿದ್ದು, ಮುಂದೆ ಅಗ್ರ 5 ಸ್ಥಾನದಲ್ಲಿ ಜಿಲ್ಲೆ ಇರುವಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು’ ಎಂದರು.

ಗೌಸಿಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಪಿ. ನಜರುಲ್ಲಾಖಾನ್ ಮಾತನಾಡಿ, ‘ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ 30 ಕಾಲೇಜುಗಳ 64 ವಿದ್ಯಾರ್ಥಿಗಳಿಗೆ, ಕಾಲೇಜು ಮುಖ್ಯಸ್ಥರಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಕಾಲೇಜಿನಿಂದ ಸನ್ಮಾನಿಸಿರುವುದು ಸಂಸ್ಥೆಗೆ ಹೆಮ್ಮೆ ಎನಿಸುತ್ತದೆ. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಎತ್ತರದ ಸ್ಥಾನಕ್ಕೆ ಬೆಳೆಯಲಿ’ ಎಂದು ಶುಭ ಕೋರಿದರು.

ಗೌಸಿಯಾ ಸಂಸ್ಥೆ ಅಧ್ಯಕ್ಷ ಡಾ. ಅಹ್ಮದ್ ಶರೀಫ್ ಸಿರಾಜ್ ಮತ್ತು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಜಾಹಿರ್ ಹಸನ್ ಇದ್ದರು.

ಶಾಲಾ–ಕಾಲೇಜಿಗೆ ಕೀರ್ತಿ ತರಬೇಕು’ ‘ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿ ದೊಡ್ಡ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಓದಿದ ಶಾಲಾ–ಕಾಲೇಜಿಗೆ ಹಾಗೂ ತಂದೆ–ತಾಯಿಗೆ ಕೀರ್ತಿ ತರಬೇಕು. ವಿದ್ಯಾರ್ಥಿಗಳು ಸಾಧನೆಗೆ ಪೂರಕವಾಗಿ ನಮ್ಮ ಕಾಲೇಜಿನಲ್ಲಿ ಅತ್ಯತ್ತಮ ಸೌಕರ್ಯಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆಯಬೇಕು. ವಿದ್ಯೆ ಜೊತೆಗೆ ಶ್ರದ್ಧೆ ವಿನಯ ಭಯ–ಭಕ್ತಿ ಇದ್ದಾಗ ಸಾಧನೆ ಸುಲಭ. ನಾವೆಷ್ಟೇ ಶಿಕ್ಷಣ ಪಡೆದರೂ ಈ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ನಮ್ಮ ಪದವಿ ಮತ್ತು ಹುದ್ದೆಗಳಿಗೆ ಯಾವುದೇ ಬೆಲೆ ಇರುವುದಿಲ್ಲ’ ಎಂದು ಗೌಸಿಯಾ ಇಂಡಸ್ಟ್ರಿಯಲ್ ಆ್ಯಂಡ್ ಎಂಜಿನಿಯರಿಂಗ್ ಟ್ರಸ್ಟ್ ಕಾರ್ಯದರ್ಶಿ ಉಮ್ಮರ್ ಇಸ್ಮಾಯಿಲ್ ಖಾನ್ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT