ಚನ್ನಪಟ್ಟಣ: ‘ಪ್ಲಾಸ್ಟಿಕ್ ಮನುಕುಲಕ್ಕೆ ಮಾತ್ರವಲ್ಲ; ಇಡೀ ಭೂಮಂಡಲದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುವ ಕೆಟ್ಟ ವಸ್ತುವಾಗಿದೆ. ಇದನ್ನು ನಿಲ್ಲಿಸದಿದ್ದರೆ ಎಲ್ಲವೂ ನಾಶವಾಗಲಿದೆ’ ಎಂದು ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಹಾಗೂ ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸುತ್ತಿರುವ ಮಧ್ಯಪ್ರದೇಶದ ಬ್ರಿಜೇಶ್ ಶರ್ಮ ತಿಳಿಸಿದರು.
ಸೈಕಲ್‌ನಲ್ಲಿ ಜಾಗೃತಿ ಮೂಡಿಸುತ್ತಾ ಈಚೆಗೆ ಪಟ್ಟಣಕ್ಕೆ ಬಂದ ಅವರನ್ನು ರೋಟರಿ ಟಾಯ್ಸ್ ಸಿಟಿ ಶಾಖೆಯಿಂದ ಸ್ವಾಗತಿಸಲಾಯಿತು.
ನಂತರ ನಗರದ ಸೇಂಟ್ ಆನ್ಸ್, ಸೇಂಟ್ ಜೋಸೆಫ್, ಸೆಂಟ್ ಮೈಕಲ್ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಹಿಂದೆ ಹಿರಿಯರು ಮಣ್ಣು, ಲೋಹದಿಂದ ಮಾಡಿದ ಮಡಕೆ, ಪಾತ್ರೆ ಬಳಸುತ್ತಿದ್ದರು. ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ಆರಂಭಗೊಂಡ ನಂತರ ರೋಗಗಳ ಸಂಖ್ಯೆ ಹೆಚ್ಚಾಗಿದೆ. ಇದು ಕೇವಲ ಮನುಷ್ಯರನ್ನಷ್ಟೇ ಬಾಧಿಸದೆ ಪ್ರಾಣಿ, ಪಕ್ಷಿಗಳಿಗೂ ಮಾರಕವಾಗಿ ಪರಿಣಮಿಸಿದೆ. ಸರ್ಕಾರಗಳು ಪ್ಲಾಸ್ಟಿಕ್ ಅನ್ನು ನಿಷೇಧಿಸುವುದರ ಜೊತೆಗೆ ಸಾರ್ವಜನಿಕರು ಸಹ ಪ್ಲಾಸ್ಟಿಕ್ ಅನ್ನು ತ್ಯಜಿಸಬೇಕು’ ಎಂದರು.
ರೋಟರಿ ಟಾಯ್ಸ್ ಸಿಟಿ ಶಾಖೆಯ ಅಧ್ಯಕ್ಷ ಶೇಖರ್ ಲಾಡ್ ಮಾತನಾಡಿ ‘ನಿಸರ್ಗ ನಮಗೆ ನೀಡಿರುವ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ಜತನದಿಂದ ತಲುಪಿಸಬೇಕು. ಈ ನಿಟ್ಟಿನಲ್ಲಿ ಸೈಕಲ್ ಜಾಗೃತಿ ಮೂಡಿಸುತ್ತಿರುವ ಬ್ರಿಜೇಶ್ ಶರ್ಮ ಎಲ್ಲರಿಗೂ ಮಾದರಿ’ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಯೋಗೇಶ್, ಕ್ಲಬ್ ಅಡ್ವೈಸರ್ ಬಿ.ಎಂ.ನಾಗೇಶ್, ನಿಕಟಪೂರ್ವ ಅಧ್ಯಕ್ಷ ಬೈ ಶ್ರೀನಿವಾಸ್, ಪದಾಧಿಕಾರಿಗಳಾದ ಮೋಹನ್, ಅರ್ಜುನ್, ಶ್ರೀನಿವಾಸ್, ಕೆ.ರಾಜೇಶ್, ರಘು, ನಿತಿನ್, ರೇವಣ್ಣ, ಸುಕೃತ್, ರಮೇಶ್, ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.