ರಾಮನಗರ: ಕಾವೇರಿ ಕೊಳ್ಳದ ಜಿಲ್ಲೆಗಳಲ್ಲೊಂದಾದ ರಾಮನಗರದಲ್ಲಿ ಶುಕ್ರವಾರ ಭಾಗಶಃ ಬಂದ್ ಆಗಿತ್ತು. ಚನ್ನಪಟ್ಟಣ, ಕನಕಪುರ ಹಾಗೂ ಹಾರೋಹಳ್ಳಿ ತಾಲ್ಲೂಕು ಬಹುತೇಕ ಸ್ತಬ್ಧವಾಗಿದ್ದವು. ಮಾಗಡಿ ತಾಲ್ಲೂಕಿನಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಗಡಿ ಮತ್ತು ಕುದೂರಿನಲ್ಲಿ ಪ್ರತಿಭಟನೆಗಷ್ಟೇ ಬಂದ್ ಸೀಮಿತವಾಗಿತ್ತು.
ನಾಲ್ಕು ತಾಲ್ಲೂಕುಗಳಲ್ಲಿ ಬೆಳಿಗ್ಗೆಯಿಂದಲೇ ಅಂಗಡಿಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಸಂಜೆವರೆಗೆ ಬಂದ್ ಆಗಿತ್ತು. ಸರ್ಕಾರಿ ಬಸ್ ಓಡಾಟವಿದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ವಾಹನಗಳ ಸಂಚಾರವೂ ಎಂದಿನಂತಿರಲಿಲ್ಲ.
ಬಂದ್ ಅಂಗವಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕನ್ನಡಪರ, ರೈತ ಸಂಘಟನೆ, ವಿವಿಧ ಸಂಘ–ಸಂಸ್ಥೆಗಳು ಹಾಗೂ ಬಿಜೆಪಿ–ಜೆಡಿಎಸ್ ಕಾರ್ಯಕರ್ತರು ಮೆರವಣಿಗೆ ಮಾಡಿದರು. ಪ್ರಮುಖ ರಸ್ತೆಯನ್ನು ಕೆಲ ಹೊತ್ತು ತಡೆದು ಪ್ರತಿಭಟಿಸಿದರು. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಬೆಂಗಳೂರು–ಮೈಸೂರು ರಸ್ತೆ ಮತ್ತು ಕನಕಪುರದಲ್ಲಿ ಬೆಂಗಳೂರು–ಕನಕಪುರ ರಸ್ತೆ ತಡೆಯಲಾಗಿತ್ತು.
ಕನಕಪುರದಲ್ಲಿ ಯುವಶಕ್ತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಮುಕ್ಕಾಲು ಕಿಲೋ ಮೀಟರ್ ಉರುಳುಸೇವೆ ಮಾಡಿ, ತಲೆ ಬೋಳಿಸಿಕೊಂಡು ಪ್ರತಿಭಟಿಸುವ ಮೂಲಕ ಗಮನ ಸೆಳೆದರು. ರಾಮನಗರದಲ್ಲಿ ಸಂಘಟನೆಗಳ ಮುಖಂಡರು ಸಂಸದರ ಭಾವಚಿತ್ರಗಳೊಂದಿಗೆ, ಖಾಲಿ ಮಡಿಕೆ ಹಿಡಿದು, ಎಮ್ಮೆ ಮೆರವಣಿಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ತುರ್ತು ಸೇವೆಗಳು ಅಬಾಧಿತವಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.