ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸ್ವಾವಲಂಬನೆಗೆ ಸಂಸ್ಥೆಗಳ ರಚನೆ

ಹೋಬಳಿಗೊಂದು ಉತ್ಪಾದಕರ ತಂಡ: ಕೃಷಿ ಇಲಾಖೆಯಿಂದ ಅಗತ್ಯ ಸಲಹೆ-ನೆರವು
Last Updated 29 ಜೂನ್ 2020, 14:21 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢವಾಗಿಸುವ ಪ್ರಯತ್ನ ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ನಡೆದಿದೆ.

ಕೃಷಿ ಉತ್ಪಾದನೆಯಲ್ಲಿ ತೊಡಗಿರುವ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರನ್ನು ಗುರುತಿಸಿ ಸಂಘಟನೆ ಮೂಲಕ ಅವರಿಗೆ ಅಗತ್ಯವಾದ ಸೌಲಭ್ಯ, ಮಾರುಕಟ್ಟೆ ಒದಗಿಸುವುದು. ಬೆಳೆಗಳ ಮೌಲ್ಯವರ್ಧನೆ ಉಪ ಉತ್ಪನ್ನಗಳ ತಯಾರಿಕೆ ಮೂಲಕ ಅವರಿಗೆ ಇನ್ನಷ್ಟು ಲಾಭ ತಂದುಕೊಡುವುದು ಈ ಸಂಸ್ಥೆಗಳ ಉದ್ದೇಶವಾಗಿದೆ. ಸರ್ಕಾರ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನದ ಕೆಲಸವನ್ನು ಐಆರ್‌ಐಡಿಎಸ್‌ ಸ್ವಯಂ ಸೇವಾ ಸಂಸ್ಥೆಗೆ ವಹಿಸಿದೆ.

ಏನಿದು ಸಂಸ್ಥೆ: ರೈತರು ಸೇರಿ ರಚಿಸಿಕೊಳ್ಳುವ ಈ ಸಂಸ್ಥೆಗೆ ಅವರೇ ಮಾಲೀಕರು. ಷೇರು ಬಂಡವಾಳದ ಮೂಲಕ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಇರಲಿದೆ. ಮೊದಲಿಗೆ ಈ ಸಂಸ್ಥೆಗಳನ್ನು ಕಂಪನಿ ಕಾಯ್ದೆ 2013 ಕೋ-ಆಪರೇಟಿವ್‌ ಸೊಸೈಟಿ ಅಡಿ ನೋಂದಣಿ ಮಾಡಿಸಲಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಹೋಬಳಿಗೆ ಒಂದರಂತೆ ಸಂಘಗಳನ್ನು ರಚನೆ ಮಾಡಲಾಗುತ್ತಿದೆ. ಮಾಗಡಿ ತಾಲ್ಲೂಕಿನಲ್ಲಿ ಮೂರು ಹಾಗೂ ರಾಮನಗರ ತಾಲ್ಲೂಕಿನಲ್ಲಿ ಎರಡು ಸಂಘಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ.

50 ಸಂಘ: ಪ್ರತಿ ರೈತ ಉತ್ಪಾದಕರ ಸಂಸ್ಥೆಗೆ ಗರಿಷ್ಠ 1 ಸಾವಿರ ಸದಸ್ಯರನ್ನು ನೋಂದಣಿ ಮಾಡಲು ಅವಕಾಶವಿದೆ. ಪ್ರತಿ ಸಂಸ್ಥೆಯ ಅಡಿ ಗ್ರಾಮ ಮಟ್ಟದಲ್ಲಿ 50 ರೈತ ಆಸಕ್ತ ಗುಂಪುಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಗುಂಪಿನಲ್ಲಿ ತಲಾ 20 ಸದಸ್ಯರಿಗೆ ಅವಕಾಶ ಇದೆ. ಇವರಲ್ಲೇ 12-15 ಮಂದಿಯನ್ನು ಸಂಸ್ಥೆಯ ನಿರ್ದೇಶಕರನ್ನಾಗಿ ಚುನಾಯಿಸಿಕೊಂಡು ಸ್ವತಂತ್ರ ಆಡಳಿತ ಮಂಡಳಿಯನ್ನು ರಚಿಸಲಾಗುತ್ತದೆ. ಈ ಮಂಡಳಿಯೇ ಸಂಸ್ಥೆಯ ನಿರ್ವಹಣೆ ಮಾಡಲಿದೆ.

50 ಸಂಘಗಳನ್ನು ಸೇರಿ ಪ್ರತಿ ಸಂಸ್ಥೆಗೆ 1 ಸಾವಿರ ರೈತರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ಪ್ರತಿ ಸದಸ್ಯರಿಂದ ತಲಾ ₹1 ಸಾವಿರದಂತೆ ಒಟ್ಟು ₹10 ಲಕ್ಷ ಸಂಗ್ರಹವಾದರೆ, ಕೃಷಿ ಇಲಾಖೆ ₹10 ಲಕ್ಷ ಸಹಾಯಧನ ಭರಿಸಲಿದೆ. ಒಟ್ಟಾರೆ ₹20 ಲಕ್ಷ ಹಣವು ಷೇರು ಬಂಡವಾಳವಾಗಿ ಇರಲಿದೆ.

ಮೂರು ಹಂತದ ಕಾರ್ಯ: ಸದ್ಯ ಯೋಜನೆ ಕುರಿತು ಐಆರ್‌ಐಡಿಎಸ್‌ ಸಿಬ್ಬಂದಿ ಗ್ರಾಮಸಭೆಗಳ ಮೂಲಕ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಇವರಲ್ಲಿ ಆಸಕ್ತ ರೈತರ ಸಂಘಗಳನ್ನು ರಚಿಸಿ ಅವುಗಳನ್ನು ರೈತ ಉತ್ಪಾದಕರ ಸಂಸ್ಥೆಯ ಜೊತೆಗೆ ಜೋಡಿಸಲಾಗುತ್ತದೆ. ನಂತರದಲ್ಲಿ ಸದಸ್ಯರಿಗೆ ಯೋಜನೆ ಕುರಿತು ತರಬೇತಿ ಇರಲಿದೆ ಎನ್ನುತ್ತಾರೆ ಐಆರ್‌ಐಡಿಎಸ್‌ನ ಯೋಜನಾ ಸಂಯೋಜಕ ಚೇತನ್‌ ಗೌಡ.

ಪ್ರಯೋಜನಗಳೇನು?: ಮೊದಲ ಹಂತದಲ್ಲಿ ಸಣ್ಣ ಹಿಡುವಳಿದಾರರಿಗೆ ಬೇಕಾದ ಕೃಷಿ ತಂತ್ರಜ್ಞಾನ, ಸಾಮಗ್ರಿಗಳನ್ನು ಪೂರೈಸುವ ಕೆಲಸ ಎನ್‌ಜಿಒ ಮಾಡಲಿದೆ. ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸದಸ್ಯರಿಗೆ ನೀಡಲಿದೆ. ನಂತರದಲ್ಲಿ ರೈತರು ಬೆಳೆದಂತಹ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕೆಲಸ ಮಾಡಲಿದೆ. ಮೂರನೇ ಹಂತದಲ್ಲಿ ಕೃಷಿ ಉತ್ಪನ್ನದ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಉಪ ಉತ್ಪನ್ನ ತಯಾರಿಕೆಗೆ ಪ್ರೋತ್ಸಾಹಿಸುವ ಮೂಲಕ ಕೃಷಿ ಲಾಭದಾಯಕವಾಗಿಸುವ ಉದ್ದೇಶ ಈ ಯೋಜನೆಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT