ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಕನ್ನಡಿಗರಿಗೆ ಉದ್ಯೋಗ: ಕಾಯ್ದೆಗಾಗಿ ಪ್ರತಿಭಟನೆ

Published 2 ಜುಲೈ 2024, 5:23 IST
Last Updated 2 ಜುಲೈ 2024, 5:23 IST
ಅಕ್ಷರ ಗಾತ್ರ

ರಾಮನಗರ: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕಾಯಿದೆ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ 100ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು. ಇತರೆ ಹುದ್ದೆಗಳಲ್ಲಿ ಶೇ 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

15 ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆಯನ್ನು ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು. ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಮುಂದೆ ಕಾನೂನು ಸಮಸ್ಯೆಗಳು ಎದುರಾದರೆ ಅದನ್ನು ಎದುರಿಸಲು ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವಾಡೆದೊಡ್ಡಿ ಕಬ್ಬಾಳೇಗೌಡ ಮಾತನಾಡಿ, ಇತರೆ ರಾಜ್ಯಗಳಿಂದ ವಲಸೆ ಬರುವವರಿಂದ ಕನ್ನಡದ ಯುವ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕನ್ನಡಿಗರಿಗೆ ಉದ್ಯೋಗ ಇಲ್ಲದಂತಾಗಿದೆ. ಕನ್ನಡ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೆ ನೇಮಿಸಿಕೊಳ್ಳುತ್ತಿವೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡಿಗರು ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಆರ್.ದೇವರಾಜು, ಹಾರೋಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್. ಶ್ರೀನಿವಾಸ್, ಜಿಲ್ಲಾ ರೈತ ಘಟಕದ ಅಧ್ಯಕ್ಷ ಶಂಭೂಗೌಡ, ಮುಖಂಡರಾದ ಜಗದೀಶ್, ಕೆ.ಎಂ. ನಾಗರಾಜ್, ರಮೇಶ್, ಗೋವಿಂದರಾಜು, ಮಹೇಶ್ ಬಾಬು, ಭೀಮಲಿಂಗೇಗೌಡ, ಶಿವರಾಜ್ ಗೌಡ, ಹರೀಶ್, ಆನಂದ್, ಪಾಲಾಕ್ಷ, ಸುಂದರ ಕೃಷ್ಣ, ಜಿ.ಡಿ. ಮಹದೇವ್, ನಟರಾಜ್ ಗೌಡ, ನವೀನ್, ಬಸವರಾಜು, ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT