ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಮದುವೆ ನಿಶ್ಚಯಿಸಿದ್ದವರಿಗೆ ‘ಮುಂಗಡ’ದ್ದೇ ಚಿಂತೆ

ಹಣ ವಾಪಸ್ ನೀಡಲು ಕಲ್ಯಾಣ ಮಂಟಪ ಮಾಲೀಕರ ಹಿಂದೇಟು: ಸಾಲ ಮಾಡಿ ಹಣ ಕಟ್ಟಿದವರ ಪರಿತಾಪ
Last Updated 13 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ರಾಮನಗರ: ಲಾಕ್‌ಡೌನ್‌ನಿಂದಾಗಿ ಅದೆಷ್ಟೋ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದ್ದು, ಮನೆಯಂಗಳದಲ್ಲೇ ಸರಳ ವಿವಾಹಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಈಗಾಗಲೇ ಮದುವೆಗೆಂದು ಕಲ್ಯಾಣ ಮಂಟಪಗಳಿಗೆ ಮುಂಗಡ ಹಣ ಪಾವತಿಸಿದವರು ಕೊಟ್ಟ ಹಣ ವಾಪಸ್ ಸಿಗದೇ ಪರಿತಪಿಸುವಂತೆ ಆಗಿದೆ.

ರಾಮನಗರದಲ್ಲಿ ನೂರಾರು ಎಕರೆ ವಿಸ್ತೀರ್ಣದಲ್ಲಿ, ಅದ್ದೂರಿಯಾಗಿ ನಡೆಯಬೇಕಿದ್ದ ನಿಖಿಲ್‌ ಕುಮಾರಸ್ವಾಮಿ-ರೇವತಿ ವಿವಾಹ ಸಹ ಇದೇ 17ರಂದು ಅವರ ಮನೆಯೊಳಗೆಯೇ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಮಗನ ಮದುವೆಯೇ ಹೀಗಾದ ಮೇಲೆ ಉಳಿದವರ ಕಥೆ ಕೇಳುವಂತೆಯೇ ಇಲ್ಲ. ಕೆಲವೆಡೆ ಗುಟ್ಟು ಗುಟ್ಟಾಗಿಯೇ ಶುಭ ಕಾರ್ಯಗಳು ಮುಗಿಯುತ್ತಿವೆ. ಆದರೆ, ಮದುವೆ ಮುಗಿದರೂ ಮಂಟಪಕ್ಕೆ ಕೊಟ್ಟ ಹಣ ಮಾತ್ರ ವಾಪಸ್ ಕೊಡುತ್ತಿಲ್ಲ ಎನ್ನುವುದು ಹೆಣ್ಣು ಹೆತ್ತವರ ದೂರು.

ಮದುವೆ ಮಾಡುವವರು ಮೂರ್ನಾಲ್ಕು ತಿಂಗಳ ಹಿಂದೆಯೇ ಕಲ್ಯಾಣ ಮಂಟಪಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಹೀಗೆ ಕಾಯ್ದಿರಿಸುವ ಸಂದರ್ಭ ಕೆಲವರು ಮಂಟಪದ ಬಾಡಿಗೆಯ ಶೇ50ರಷ್ಟು ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಇನ್ನೂ ಕೆಲವರು ಲಕ್ಷಗಳ ಲೆಕ್ಕದಲ್ಲಿ ಪೂರ್ತಿ ಬಾಡಿಗೆಯನ್ನೂ ಪಾವತಿಸಿದ್ದಾರೆ. ಆದರೆ ಈಗ ಈ ಮುಂಗಡ ವಾಪಸ್‌ ನೀಡುವಂತೆ ಪೋಷಕರು ದುಂಬಾಲು ಬಿದ್ದಿದ್ದು, ಅದಕ್ಕೆ ಮಂಟಪಗಳ ಮಾಲೀಕರು ಸ್ಪಂದಿಸುತ್ತಿಲ್ಲ. ಕೆಲವರು ಮುಂದಿನ ದಿನಾಂಕಕ್ಕೆ ಅದೇ ಹಣಕ್ಕೆ ಕಲ್ಯಾಣ ಮಂಟಪ ಬಿಟ್ಟುಕೊಡುವ ಷರತ್ತು ಹಾಕಿದ್ದಾರೆ. ಹತ್ತಿರದಲ್ಲಿ ಒಳ್ಳೆಯ ಲಗ್ನ ಸಿಗದು ಎಂಬ ಕಾರಣಕ್ಕೆ ಅನೇಕರು ಈಗಾಗಲೇ ನಿಗದಿಯಾದ ದಿನದಂದೇ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಮಾಡುತ್ತಿದ್ದಾರೆ. ಅಂತಹವರು ಕಲ್ಯಾಣ ಮಂಟಪಕ್ಕೆ ಕೊಟ್ಟ ಹಣ ವಾಪಸ್‌ ಬರುವುದೇ ಅನುಮಾನ ಎಂಬ ಚಿಂತೆಯಲ್ಲಿ ಇದ್ದಾರೆ.

‘ಮಗಳ ಮದುವೆ ಅದ್ದೂರಿಯಾಗಿ ಮಾಡುವ ಸಲುವಾಗಿ ಕೈಸಾಲ ಮಾಡಿ ಕಲ್ಯಾಣ ಮಂಟಪದವರಿಗೆ ಹಣ ಕಟ್ಟಿದ್ದೆ. ಆದರೆ, ಈಗ ವರನ ಕಡೆಯವರು ಮನೆಯಲ್ಲೇ ಧಾರೆ ಎರೆದುಕೊಡಿ ಎನ್ನುತ್ತಿದ್ದಾರೆ. ಮಂಟಪದವರನ್ನು ಕೇಳಿದರೆ, ಲಾಕ್‌ಡೌನ್ ಕಳೆದ ಬಳಿಕಮದುವೆಗೆ ಜಾಗ ಕೊಡುತ್ತೇವೆ. ಆದರೆ, ಹಣ ವಾಪಸ್‌ ಕೇಳಬೇಡಿ ಎನ್ನುತ್ತಿದ್ದಾರೆ’ ಎಂದು ರಾಮನಗರ ನಿವಾಸಿ ಗುರುಪ್ರಸಾದ್‌ ಅಸಹಾಯಕತೆ ವ್ಯಕ್ತಪಡಿಸಿದರು. ‘ಬಡವರು ಪಾವತಿಸಿದ ಮುಂಗಡ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸುವಂತೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ಸರ್ಕಾರವೇ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.

ಐದು ಮಂದಿಗಷ್ಟೇ ಅವಕಾಶ: ಲಾಕ್‌ಡೌನ್ ಮುಗಿಯುವವರೆಗೂ ಬಹಿರಂಗವಾಗಿ ಶುಭ ಸಮಾರಂಭ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿ಼ಷೇಧ ಹೇರಿದೆ. ಕಲ್ಯಾಣ ಮಂಟಪಗಳು, ದೇವಸ್ಥಾನಗಳು ಈಗಾಗಲೇ ಬಾಗಿಲು ಮುಚ್ಚಿವೆ. ದೇವಸ್ಥಾನಗಳ ಹೊರಗೂ ಮದುವೆ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಮನೆಯ ಅಂಗಳಗಳಲ್ಲಿ ನಡೆದಿರುವ ವಿವಾಹಗಳಿಗೆ ಸದ್ಯ ಅಧಿಕಾರಿಗಳು ಅಡ್ಡಪಡಿಸುತ್ತಿಲ್ಲ.

’ನಿಷೇಧಾಜ್ಞೆ ಜಾರಿಯಲ್ಲಿ ಇರುವ ಕಾರಣ ಸಮಾರಂಭಗಳ ಹೆಸರಿನಲ್ಲಿ ಗುಂಪಾಗಿ ಸೇರಲು ಅವಕಾಶ ಇಲ್ಲ. ಐದಕ್ಕಿಂತ ಹೆಚ್ಚು ಮಂದಿ ಸೇರುವ ಹಾಗಿಲ್ಲ. ಕುಟುಂಬದವರನ್ನು ಹೊರತುಪಡಿಸಿ ಉಳಿದವರು ಬರುವಂತಿಲ್ಲ. ಮದುವೆಗಳಿಗೂ ಈ ನಿಯಮ ಅನ್ವಯಿಸುತ್ತದೆ’ ಎನ್ನುತ್ತಾರೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನೂಪ್‌ ಶೆಟ್ಟಿ.

ಕೆಲವು ಕಡೆ ಮದುವೆಗಳಿಗೆ ಜಿಲ್ಲಾಡಳಿತ, ಪೊಲೀಸರೇ ಅನುಮತಿ ನೀಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಇದನ್ನು ನಿರಾಕರಿಸುತ್ತಾರೆ. ’ಸರ್ಕಾರವೇ ನಿಷೇಧ ಹೇರಿರುವ ಕಾರಣ ನಾವು ಅನುಮತಿ ನೀಡುವ ಪ್ರಮೇಯವೇ ಇಲ್ಲ. ಮದುವೆಗಳನ್ನು ಆದಷ್ಟು ಮುಂದೂಡುವುದು ಒಳಿತು. ಮನೆಗಳ ಬಳಿಯೇ ಶುಭ ಕಾರ್ಯ ಮಾಡುವುದು ಅವರ ವಿವೇಚನೆಗೆ ಬಿಟ್ಟದ್ದು. ಆದರೆ,ಸಾರ್ವಜನಿಕರಿಂದ ಆಕ್ಷೇಪಣೆ ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎನ್ನುತ್ತಾರೆ ಅವರು.

***
ಮದುವೆ ಮೊದಲಾದ ಶುಭ ಕಾರ್ಯಗಳಿಗೆ ರಾಜ್ಯದಾದ್ಯಂತ ನಿರ್ಬಂಧವಿದೆ. ಕಾರ್ಯಕ್ರಮ ಆಯೋಜನೆ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು

- ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ, ರಾಮನಗರ

ಗ್ರಾಹಕರು ನೀಡಿದ ಮುಂಗಡ ಹಣ ವಾಪಸ್ ಮಾಡುವುದಿಲ್ಲ. ಬದಲಾಗಿ ಡಿಸೆಂಬರ್‌ವರೆಗೆ ಬೇರೆ ದಿನದಂದು ಮದುವೆ ನೆರವೇರಿಸಲು ಸ್ಥಳಾವಕಾಶ ನೀಡುತ್ತೇವೆ

- ಶಿವಣ್ಣ, ವ್ಯವಸ್ಥಾಪಕ, ಹೊನ್ನಮ್ಮ ಕಲ್ಯಾಣ ಮಂಟಪ, ರಾಮನಗರ

ಮದುವೆ ಆರ್ಡರ್‌ ನಂಬಿಕೊಂಡು ನಾವೂ ಪರಿಕರಗಳ ಬಾಡಿಗೆಗೆ, ಸಿಬ್ಬಂದಿಗೆ ಮುಂಗಡ ಕೊಟ್ಟಿದ್ದೇವೆ. ಹೀಗಾಗಿ ಸಂಪೂರ್ಣ ಹಣ ಹಿಂತಿರುಗಿಸಲು ಆಗದು

- ರಾಜೇಶ್‌, ಅಧ್ಯಕ್ಷ, ರಾಮನಗರ ತಾಲ್ಲೂಕು ಫೋಟೊಗ್ರಾಫರ್ಸ್‌ ಮತ್ತು ವಿಡಿಯೊಗ್ರಾಫರ್ಸ್‌ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT