ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಸಮಸ್ಯೆಗೆ ಶೀಘ್ರ ಪರಿಹಾರ: ಸಂಸದ ಡಿ.ಕೆ. ಸುರೇಶ್

ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಭರವಸೆ
Published 5 ಅಕ್ಟೋಬರ್ 2023, 13:40 IST
Last Updated 5 ಅಕ್ಟೋಬರ್ 2023, 13:40 IST
ಅಕ್ಷರ ಗಾತ್ರ

ಕನಕಪುರ: ಗ್ರಾಮದಲ್ಲಿ ಸ್ಮಶಾನ, ಕುಡಿಯುವ ನೀರು, ರಸ್ತೆ, ಇ-ಖಾತೆ, ಪೋಡಿ ದುರಸ್ತಿ ಸೇರಿದಂತೆ ಮೂಲಸೌಕರ್ಯಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳಿಗೂ ಶೀಘ್ರವೇ ಪರಿಹಾರ ದೊರಕಿಸಿಕೊಡಲಾಗವುದು ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಹೇರಿಂದ್ಯಾಪನಹಳ್ಳಿ ಮತ್ತು ಹೊಸದುರ್ಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಕುಂದು– ಕೊರತೆ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ತಾಲ್ಲೂಕು ಸುತ್ತಲೂ ಕಾಡಿನಿಂದ ಆವೃತ್ತವಾಗಿದ್ದು ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ, ಇದರ ಜೊತೆಗೆ ಅರಣ್ಯ ಇಲಾಖೆ ನಡುವೆ ಒತ್ತುವರಿ ತಿಕ್ಕಾಟ ನಡೆಯುತ್ತಿದೆ. ಇದಕ್ಕೆಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು.

ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟಿದ್ದು ನೀರಿನ ಬವಣೆಯನ್ನು ನೀಗಿಸಲು ಮತ್ತು ಅಂತರ್ಜಲ ಹೆಚ್ಚಿಸಲು ₹ 175 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಇನ್ನು 6 ತಿಂಗಳಲ್ಲಿ ಕಾಮಗಾರಿ ಆರಂಭ ಆಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗೆ ಅನುಕೂಲ ಆಗಲಿದೆ ಎಂದರು.

ಗ್ರಾಮೀಣ ಭಾಗದ ಮಕ್ಕಳಿಗೂ ಜಾಗತಿಕಮಟ್ಟದ ಶಿಕ್ಷಣ ಸಿಗಬೇಕಿದೆ. ಅದಕ್ಕಾಗಿ ಎರಡು ಪಂಚಾಯ್ತಿಗೆ ಒಂದರಂತೆ ತಾಲ್ಲೂಕಿನಲ್ಲಿ 20 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಗುಣಮಟ್ಟದಲ್ಲಿ ನಿರ್ಮಾಣ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಜಾಗ ಗುರುತಿಸಿದ ತಕ್ಷಣ ಕೆಲಸ ಪ್ರಾರಂಭ ಆಗಲಿದೆ ಎಂದು ಹೇಳಿದರು.

ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಆಧಾರದ ಮೇಲೆ ಮಂಜೂರಾಗಿರುವ ಜಮೀನುಗಳ ದುರಸ್ತಿ ಆಗಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಅಂತಹ ಭೂಮಿಯ ಖರೀದಿಗೆ ಮುಂದಾಗಿದ್ದು ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಇನ್ನು 1 ವರ್ಷದಲ್ಲಿ ಸರ್ಕಾರದಿಂದಲೇ ದುರಸ್ತಿ ಕೆಲಸ ಮಾಡಿಕೊಡುವ ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಸರ್ಕಾರದ ಮಹಾತ್ವಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಮಹಿಳೆಯರಿಗೆ 2 ಸಾವಿರ ಮತ್ತು ಪಡಿತರ ಬಂದಿಲ್ಲ. ಅಂತಹ ಕುಟುಂಬಗಳನ್ನು ಗುರುತಿಸಿ ಅವರ ಸಮಸ್ಯೆ ಸರಿಪಡಿಸಿ ಹಣ ಬರುವಂತೆ ನೋಡಿಕೊಳ್ಳಬೇಕು. ಈ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಮಾಡಬೇಕೆಂದು ಸೂಚನೆ ನೀಡಿದರು.

ಹೊಸದುರ್ಗ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ನಾಗುಬಾಯಿ. ಹೇರಿಂದ್ಯಾಪನಹಳ್ಳಿ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಜಯರತ್ನಮ್ಮ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ತಹಶೀಲ್ದಾರ್ ಡಾ.ಸ್ಮಿತಾರಾಮ್‌, ಇಒಒ ಭೈರಪ್ಪ, ಎಡಿಎಲ್ ಆರ್. ನಂದೀಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಸಪ್ಪ, ಮಾಜಿ ಸದಸ್ಯ ಮುನಿ ಹುಚ್ಚೇಗೌಡ, ಮುಖಂಡರಾದ ವೈರಮುಡಿ, ಮುನಿಮಾರಯ್ಯ, ಶಂಭುಲಿಂಗಶೆಟ್ಟಿ, ಪಿಡಿಒಗಳಾದ ಎನ್‌.ಎಸ್‌.ರಘು, ಬಸವರಾಜು,  ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT