ಕನಕಪುರ: ತಾಲ್ಲೂಕಿನ ನಲ್ಲಹಳ್ಳಿ ನುಸಿಪೀಡೆ ಬಾಧಿತ ತೆಂಗಿನ ತೋಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಲ್ಲಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ತೆಂಗಿನ ಮರಗಳಿಗೆ ನುಸಿಪೀಡೆ ರೋಗ ಕೆಲವು ವರ್ಷಗಳಿಂದ ಕಾಣಿಸಿಕೊಂಡಿದೆ. ಬಹುತೇಕ ತೆಂಗಿನ ಮರಗಳ ಸುಳಿ ಒಣಗಿ ನಾಶವಾಗುತ್ತಿದೆ. ರೋಗಕ್ಕೆ ಸಾವಿರಾರು ಎಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೆಂಗಿನ ಮರಗಳು ತುತ್ತಾಗಿವೆ. ಇದರಿಂದ ನೂರಾರು ರೈತರು ತೊಂದರೆಗೆ ಈಡಾಗಿದ್ದಾರೆ.
ಜಿಲ್ಲಾ ಸಚಿವರ ಎದುರು ರೈತರು ತಮ್ಮ ಅಳಲು ತೋಡಿಕೊಂಡರು. ಈ ಭಾಗದಲ್ಲಿ ತೆಂಗಿನ ಮರಗಳ ಜತೆಗೆ ಅಡಿಕೆ ಮರಗಳಿಗೂ ರೋಗ ಹರಡುತ್ತಿದೆ. ಹೀಗೆ ಮುಂದುವರಿದರೆ ತೆಂಗಿನ ತೋಟಗಳು ಸಂಪೂರ್ಣ ನಾಶವಾಗಲಿವೆ ಎಂದು ಸಚಿವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟರು.
ರೈತರ ಮನವಿ ಆಲಿಸಿದ ಸಚಿವರು, ಕೃಷಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಸಿಇಒ ದಿಗ್ವಿಜಯ ಬೋಡ್ಕೆ, ತಹಶೀಲ್ದಾರ್ ಸ್ಮಿತಾ ರಾಮ್, ಇಒ ಭೈರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.