ಭಾನುವಾರ, ಫೆಬ್ರವರಿ 28, 2021
31 °C
ಮೊದಲ ಹಂತದ ಮತದಾನ ಇಂದು; 56 ಗ್ರಾ.ಪಂ.ಗಳಿಂದ 1987 ಅಭ್ಯರ್ಥಿಗಳು ಕಣದಲ್ಲಿ

ಪಂಚಾಯಿತಿ ಪ್ರತಿನಿಧಿ ಆಯ್ಕೆಗೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಮತದಾರರು ಒಟ್ಟು 1987 ಅಭ್ಯರ್ಥಿಗಳ ಭವಿಷ್ಯದ ಭಾಷ್ಯ ಬರೆಯಲಿದ್ದಾರೆ.

ಮೊದಲ ಹಂತದಲ್ಲಿ ಕನಕಪುರ ತಾಲ್ಲೂಕಿನ 36 ಹಾಗೂ ರಾಮನಗರ ತಾಲ್ಲೂಕಿನ 20 ಸೇರಿದಂತೆ ಒಟ್ಟು 56 ಗ್ರಾ.ಪಂ. ಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಪೂರ್ಣಗೊಳಿಸಿದ್ದು, ಮತಗಟ್ಟೆಗಳು ಮತದಾರರ ಸ್ವಾಗತಕ್ಕೆ ಅಣಿಯಾಗಿವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್ ಬಳಕೆ ಮಂದುವರಿದಿದ್ದು, ಮತದಾರರು ತಾವು ಆಯ್ಕೆ ಮಾಡಲು ಬಯಸುವವರಿಗೆ ಮುದ್ರೆ ಒತ್ತಬೇಕಿದೆ. ಮತದಾನ ಮಾಡುವವರ ಎಡಗೈ ಹೆಬ್ಬೆರಳಿಗೆ ಶಾಹಿಯ ಗುರುತು ಬೀಳಲಿದೆ.

ಎರಡು ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 971 ಸ್ಥಾನಗಳು ಇವೆ. ಇದರಲ್ಲಿ ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಆಗಿಲ್ಲ. ಕನಕಪುರದ 121 ಹಾಗು ರಾಮನಗರದ 26 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ 821 ಸ್ಥಾನಗಳಿಗೆ ಸದ್ಯ ಚುನಾವಣೆಯು ನಡೆದಿದೆ. ರಾಮನಗರ ತಾಲ್ಲೂಕಿನ 331 ಸ್ಥಾನಗಳಿಗೆ 830 ಹಾಗೂ ಕನಕಪುರ ತಾಲ್ಲೂಕಿನ 460 ಸ್ಥಾನಗಳಿಗೆ 1157 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಮತಗಟ್ಟೆಗಳು

ರಾಮನಗರದಲ್ಲಿ ಒಟ್ಟು 193 ಹಾಗು ಕನಕಪುರದಲ್ಲಿ 310 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ರಾಮನಗರದ 23 ಕನಕಪುದ 35 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಹಾಗು ರಾಮನಗರದ 17, ಕನಕಪುರದ 35 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಜಿಲ್ಲಾಡಳಿತ ಗುರುತಿಸಿದೆ. ಪ್ರತಿ ಮತಗಟ್ಟೆಯಲ್ಲಿ ಒಟ್ಟು ನಾಲ್ಕು ಮಂದಿ ಮತಗಟ್ಟೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಒಟ್ಟಾರೆ 2481 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಶೇ 10ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಮೀಸಲಿಡಲಾಗಿದೆ.

ಕೋವಿಡ್‌ ಸೋಂಕಿತರಿಗೂ ಅವಕಾಶ: ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ. ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಪಿಪಿಇ ಕಿಟ್‌ ಧರಿಸಿ ಸಂಜೆ 4ರಿಂದ 5ರ ಒಳಗೆ ಮತದಾನ ಮಾಡಬಹುದಾಗಿದೆ. ಅಂತಹ ಮತದಾರರು ಇದ್ದಲ್ಲಿ ತಮ್ಮ ಸಮೀಪದ ವೈದ್ಯರು, ತಹಶೀಲ್ದಾರ್ ಇಲ್ಲವೇ ಚುನಾವಣಾ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕಿದೆ.

ಮಸ್ಟರಿಂಗ್ ಕಾರ್ಯ: ರಾಮನಗರದ ಸರ್ಕಾರಿ ಪ್ರಧಮ ದರ್ಜೆ ಕಾಲೇಜು ಹಾಗು ಕನಕಪುರದ ರೂರಲ್ ಕಾಲೇಜು ಮೈದಾನದಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ನಡೆಯಿತು. ಚುನಾವಣಾ ಸಿಬ್ಬಂದಿ ತಮಗಾಗಿ ನೀಡಿದ ಮತಪೆಟ್ಟಿಗೆ ಹಾಗೂ ಪೇಪರ್‌ಗಳನ್ನು ಹೊತ್ತು ಮತಗಟ್ಟೆಗಳತ್ತ ಹೆಜ್ಜೆ ಇಟ್ಟರು. ಮಂಗಳವಾರ ಮತದಾನದ ಮುಕ್ತಾಯದ ಬಳಿಕ ಮತಪೆಟ್ಟಿಗೆಗಳು ಇಲ್ಲಿಗೆ ವಾಪಸ್‌ ಆಗಲಿವೆ.

ಮಹಿಳಾ ಮತದಾರರೇ ಅಧಿಕ; ಎರಡೂ ತಾಲ್ಲೂಕಿನಲ್ಲಿ ಮತದಾನದ ಹಕ್ಕು ಹೊಂದಿರುವವರ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ರಾಮನಗರದ 25 ಹಾಗೂ ಕನಕಪುರದ 34 ಮಂದಿ ಸೇರಿ ಒಟ್ಟಾರೆ 59 ಸೇವಾ ಮತದಾರರು ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಇದ್ದಾರೆ.

7 ಗ್ರಾ.ಪಂ.ಗಳಿಗಿಲ್ಲ ಚುನಾವಣೆ

ಹಾರೋಹಳ್ಳಿ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದೆರ್ಜೆಗೇರಿಸಿರುವ ಹಿನ್ನೆಯಲ್ಲಿ ಅದರ ವ್ಯಾಪ್ತಿಗೆ ಬರುವ ದ್ಯಾವಸಂದ್ರ, ಹಾರೋಹಳ್ಳಿ, ಕೊಳ್ಳಿಗಾನಹಳ್ಳಿ, ಟಿ. ಹೊಸಹಳ್ಳಿ ಹಾಗೂ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಗಳನ್ನು ತಾತ್ಕಾಲಿಕವಾಗಿ ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಇದಲ್ಲದೆ ಅವಧಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಕನಕಪುರ ತಾಲ್ಲೂಕಿನ ನಲ್ಲಹಳ್ಳಿ ಹಾಗೂ ಉಯ್ಯಂಬಳ್ಳಿ ಗ್ರಾ.ಪಂ.ಗಳೂ ಚುನಾವಣೆಯಿಂದ ದೂರ ಉಳಿದಿವೆ.

1200 ಪೊಲೀಸರ ನಿಯೋಜನೆ

‘ಹೋಂ ಗಾರ್ಡ್‌ಗಳು ಸೇರಿ 1200 ಪೊಲೀಸರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ.

ಅತೀ ಸೂಕ್ಷ್ಮ ಕೇಂದ್ರಗಳಿಗೆ 3 ಸಿಬ್ಬಂದಿ ಹಾಗೂ ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಗಿರೀಶ್ ತಿಳಿಸಿದರು.

ಅಂಕಿ–ಅಂಶ

56– ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಗ್ರಾ.ಪಂ.ಗಳು
821– ಚುನಾವಣೆ ನಡೆಯಲಿರುವ ಸ್ಥಾನಗಳು
503; ಒಟ್ಟು ಮತಗಟ್ಟೆಗಳು
2481– ಚುನವಣಾ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿ
ಬೆಳಿಗ್ಗೆ 7ರಿಂದ ಸಂಜೆ 5: ಮತದಾನ ನಡೆಯಲಿರುವ ಸಮಯ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು