ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಗೊಂದಲ: ಡಿಕೆಶಿ ಸಮ್ಮುಖದಲ್ಲಿ ಸಭೆ

Last Updated 3 ಸೆಪ್ಟೆಂಬರ್ 2021, 5:56 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾಂಗ್ರೆಸ್‌ ಮುಖಂಡರ ಮುನಿಸು ಶಮನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ಸಂಜೆ ಬೆಂಗಳೂರಿನಲ್ಲಿ ಸಭೆ ನಡೆಯಿತು.

ಕ್ಷೇತ್ರದಲ್ಲಿ ತಾವು ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಕಾಂಗ್ರೆಸ್ ಮುಖಂಡ ಇಕ್ಬಾಲ್‌ ಹುಸೇನ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ವಿಧಾನ ‍ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಸಯ್ಯದ್‌ ಜಿಯಾವುಲ್ಲಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದರು. ಇದು ಹಲವು ಗೊಂದಲಗಳಿಗೆ ಕಾರಣ ಆಗಿತ್ತು. ಈ ಗೊಂದಲ ಬಗೆಹರಿಸುವ ಸಲುವಾಗಿ ಶಿವಕುಮಾರ್‌ ಸಭೆ ಕರೆದಿದ್ದರು.

ಸಭೆಯಲ್ಲಿ ಸಿ.ಎಂ. ಲಿಂಗಪ್ಪ ಜೊತೆಗೆ ಪಕ್ಷದ ಮುಖಂಡ ಸಯ್ಯದ್‌ ಜಿಯಾವುಲ್ಲಾ ಸಹ ಪಾಲ್ಗೊಂಡಿದ್ದು, ಕ್ಷೇತ್ರದಲ್ಲಿ ತಮಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟರು. ಅವರ ಅನಿವಾರ್ಯತೆಯನ್ನು ಅವರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಮತ್ತೊಂದೆಡೆ ಇಕ್ಬಾಲ್‌ ಹುಸೇನ್‌ ಸಹ ಮಾತನಾಡಿ ನಾಯಕರ ಅಣತಿಯಂತೆ ತಾವು ಈಗಾಗಲೇ ಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕುರಿತು ವಿವರಿಸಿದರು.

ಕಡೆಯದಾಗಿ ಮಾತನಾಡಿದ ಶಿವಕುಮಾರ್ ‘ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಹೀಗಾಗಿ ಈಗಲೇ ಅಭ್ಯರ್ಥಿ ಕುರಿತು ಮಾತನಾಡುವುದು ಬೇಡ. ಇದು ಪಕ್ಷದ ಹೈಕಮಾಂಡ್‌ ಸೂಚನೆ ಸಹ ಆಗಿದೆ. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆಯತ್ತ ಮುನ್ನಡೆಯೋಣ. ಯಾರೇ ಅಭ್ಯರ್ಥಿ ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ ಎಂದು ವಿವಾದಕ್ಕೆ ಅಂತ್ಯ ಹಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸೇರಿದಂತೆ ಪಕ್ಷದ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT