ರಾಮನಗರ: ‘ರೇಷ್ಮೆ ಕೃಷಿಯೇ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 13,490 ಎಕರೆ ರೇಷ್ಮೆ ಕೃಷಿ ಪ್ರದೇಶವನ್ನು ವಿಸ್ತರಣೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ದಿಗ್ವಿಜಯ್ ಬೋಡ್ಕೆ ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೇಷ್ಮೆ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೇಷ್ಮೆ ಬೆಳೆಗಾರರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರಾಮನಗರ, ಹಾರೋಹಳ್ಳಿ, ಚನ್ನಪಟ್ಟಣ, ಮಾಗಡಿ, ಕನಕಪುರ ಒಳಗೊಂಡಂತೆ ಐದು ತಾಲ್ಲೂಕುಗಳಲ್ಲಿ 28,494 ರೈತರು ರೇಷ್ಮೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಾದ್ಯಂತ 21,544 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ವಿಸ್ತರಣೆಯಾಗಿದೆ. ಲಾಭದಾಯಕವಾಗಿರುವ ರೇಷ್ಮೆ ಕೃಷಿ ರೈತರ ಬದುಕನ್ನು ಹಸನು ಮಾಡುತ್ತಿದೆ’ ಎಂದರು.
‘ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ರೇಷ್ಮೆ ಬೆಳೆಗಾರರ ವೆಚ್ಚ, ಕೂಲಿ ಕಾರ್ಮಿಕರ ವೆಚ್ಚ ಹಾಗೂ ಸಾಮಾಗ್ರಿ ವೆಚ್ಚವೇ ₹111.53 ಕೋಟಿ ಆಗಿದೆ. ಜಿಲ್ಲೆಯ ರೇಷ್ಮೆ ಇಲಾಖೆಯೊಂದೇ 34.76 ಲಕ್ಷ ಮಾನವ ದಿನಗಳನ್ನು ಸೃಜಿಸಿದೆ. ರೈತರು ಇಲಾಖೆಯಿಂದ ನರೇಗಾ ಪ್ರಯೋಜವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದು ಹೇಳಿದರು.
‘ಇಲಾಖೆಯಿಂದ ನರೇಗಾ ಯೋಜನೆಯಡಿ ಮೂರು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಅದರಲ್ಲಿ ಹಿಪ್ಪುನೇರಳೆ ನರ್ಸರಿ ಸ್ಥಾಪನೆಗೆ ₹1,39,970 ಮೊತ್ತ, ಹೊಸ ಹಿಪ್ಪುನೇರಳೆ ನಾಟಿ ಸ್ಥಾಪನೆಗೆ ₹1,43,680 ಮೊತ್ತ ಹಾಗೂ ಹಿಪ್ಪುನೇರಳೆ ಮರಗಡ್ಡಿ ಸ್ಥಾಪನೆಗೆ ₹66,454 ಮೊತ್ತವನ್ನು ಕೂಲಿ ಮತ್ತು ಸಾಮಾಗ್ರಿ ವೆಚ್ಚದ ಮೂಲಕ ನಿಯಮಾನುಸಾರವಾಗಿ ಪಾವತಿಸಲಾಗುತ್ತದೆ’ ಎಂದು ತಿಳಿಸಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಸಿ.ಡಿ. ಬಸವರಾಜು, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಪಿ. ಉಮೇಶ್, ನರೇಗಾ ಯೋಜನಾ ನಿರ್ದೇಶಕ ಮಂಜುನಾಥ್, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್, ಕಾರ್ಯದರ್ಶಿ ರವಿ ಕೆ. ಹಾಗೂ ಇತರರು ಇದ್ದರು.
ಅಂಕಿ ಅಂಶ...
28,494 ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅವಲಂಬಿಸಿರುವ ರೈತರು
21,544 ಹೆಕ್ಟೇರ್ರೇಷ್ಮೆ ಕೃಷಿ ವಿಸ್ತರಣೆಯಾಗಿರುವ ಪ್ರದೇಶ
13,490 ಎಕರೆನರೇಗಾದಡಿ ವಿಸ್ತರಣೆಯಾಗಿರುವ ರೇಷ್ಮೆ ಕೃಷಿ ಪ್ರದೇಶ
₹111.53 ಕೋಟಿಕಳೆದ 10 ವರ್ಷಗಳಲ್ಲಿ ರೇಷ್ಮೆ ಕೃಷಿಗೆ ನರೇಗಾದಡಿ ಪಾವತಿಸಿರುವ ಮೊತ್ತ
34.76 ಲಕ್ಷರೇಷ್ಮೆ ಇಲಾಖೆ ಸೃಜಿಸಿರುವ ಮಾನವ ದಿನಗಳು
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ರೇಷ್ಮೆ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರಿಗೆ ಆಯಾ ಗ್ರಾಮಗಳಲ್ಲೇ ಉದ್ಯೋಗ ದೊರೆಯುವಂತಾಗಿದೆ. ಹೆಚ್ಚಿನ ರೈತರು ಈ ಸೌಲಭ್ಯದ ಪ್ರಯೋಜನ ಪಡೆದು ರೇಷ್ಮೆ ಕೃಷಿ ವಿಸ್ತರಣೆಗೆ ಕೈ ಜೋಡಿಸಬೇಕು– ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.