ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸೌಕರ್ಯಗಳ ನಿರೀಕ್ಷೆಯಲ್ಲಿ ಜಿಲ್ಲಾ ಕ್ರೀಡಾಂಗಣ

ನನಸಾಗದ ಸಿಂಥೆಟಿಕ್ ಟ್ರ್ಯಾಕ್ ಕನಸು; ಒಳಾಂಗಣ ಕ್ರೀಡೆಗಳಿಗಿಲ್ಲ ಯಾವುದೇ ವ್ಯವಸ್ಥೆ
Published 29 ಏಪ್ರಿಲ್ 2024, 5:15 IST
Last Updated 29 ಏಪ್ರಿಲ್ 2024, 5:15 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣವು ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಹೆಸರಿಗಷ್ಟೇ ಕ್ರೀಡಾಂಗಣವಾಗಿದ್ದು, ಜಿಲ್ಲೆಯಾಗಿ ರೂಪುಗೊಂಡು ಹದಿನೇಳು ವರ್ಷಗಳಾದರೂ ಇಂದಿಗೂ ತಾಲ್ಲೂಕು ಕ್ರೀಡಾ ಮೈದಾನದ ಪೊರೆ ಕಳಚಿಕೊಂಡು ಹೊಸ ರೂಪ ಪಡೆದಿಲ್ಲ.

ಹೊರಾಂಗಣ ಕ್ರೀಡೆಗಳಾದ ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್, ಕ್ರಿಕೆಟ್ ಹೊರತುಪಡಿಸಿ ಉಳಿದ ಒಳಾಂಗಣ ಕ್ರೀಡೆಗಳಿಗೆ ಕ್ರೀಡಾಂಗಣದಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ. ಸ್ಥಳೀಯ ವಾಯುವಿಹಾರಿಗಳಿಗೂ ಇಲ್ಲಿ ಪ್ರತ್ಯೇಕ ಪಥ ನಿರ್ಮಾಣ ಮಾಡಿಲ್ಲ. ಸ್ಥಳೀಯ ಕ್ರೀಡಾಪಟುಗಳಷ್ಟೇ ಅಲ್ಲದೆ, ಜನರ ವಾಯುವಿಹಾರಕ್ಕೂ ಸರಿಯಾದ ಸೌಕರ್ಯಗಳಿಲ್ಲ.

ವ್ಯವಸ್ಥೆ ಇಲ್ಲ: ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಷಟಲ್‌ ಬ್ಯಾಡ್ಮಿಂಟನ್‌, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಯಾವುದೇ ವ್ಯವಸ್ಥೆ ಇಲ್ಲ. ಇಂತಹ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವವರು ಖಾಸಗಿ ಕ್ರೀಡಾ ಕ್ಲಬ್‌ಗಳನ್ನು ಅವಲಂಬಿಸಬೇಕು. ಇಲ್ಲವೇ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ.

‘ಸ್ಥಳೀಯವಾಗಿ ಒಳಾಂಗಣ ಕ್ರೀಡೆಗಳ ಅಭ್ಯಾಸಕ್ಕೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಎಷ್ಟೋ ಪ್ರತಿಭೆಗಳು ಅಭ್ಯಾಸಕ್ಕಾಗಿ ಬೆಂಗಳೂರಿಗೆ ಹೋಗುವುದು ಸಾಮಾನ್ಯವಾಗಿದೆ. ಕ್ರೀಡಾಂಗಣದಲ್ಲಿ ಅದಕ್ಕೆ ವ್ಯವಸ್ಥೆಯಾಗಬೇಕು ಎಂಬ ದನಿ ಜಿಲ್ಲೆಯಾಗಿ ರೂಪುಗೊಂಡಾಗಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇದುವರೆಗೆ ಸಾಕಾರವಾಗಿಲ್ಲ’ ಎಂದು ಸ್ಥಳೀಯ ಕ್ರೀಡಾಸಕ್ತರಾದ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನನಸಾಗದ ಸಿಂಥೆಟಿಕ್ ಟ್ರ್ಯಾಕ್‌: ಅಥ್ಲೀಟ್‌ಗಳ ಅಭ್ಯಾಸಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅತಿ ಮುಖ್ಯ. ಆದರೆ, ಕ್ರೀಡಾಂಗಣಕ್ಕೆ ಟ್ರ್ಯಾಕ್‌ ಬರಲಿದೆ ಎಂದು ಕಾಯುತ್ತಿರುವ ಅಥ್ಲೀಟ್‌ಗಳ ಕನಸು ಇಷ್ಟು ವರ್ಷಗಳಾದರೂ ನನಸಾಗಿಲ್ಲ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾದವರು ಅಭ್ಯಾಸಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಹೋಗುವುದು ಸಾಮಾನ್ಯವಾಗಿದೆ.

ರಾಮನಗರ ಜಿಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಇತ್ತೀಚೆಗೆ ಶೆಲ್ಟರ್ ಅಳವಡಿಸಲಾಗಿದೆ
ರಾಮನಗರ ಜಿಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಇತ್ತೀಚೆಗೆ ಶೆಲ್ಟರ್ ಅಳವಡಿಸಲಾಗಿದೆ

‘ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಸಿಂಥೆಟಿಕ್ ಟ್ರ್ಯಾಕ್ ಇಲ್ಲ. ಹಾಗಾಗಿ, ಬೆಂಗಳೂರಿಗೆ ಹೋಗಿ ಅಲ್ಲಿಯೇ ಉಳಿದುಕೊಂಡು ಅಭ್ಯಾಸ ಮಾಡುತ್ತಿದ್ದೇನೆ. ಇದರಿಂದಾಗಿ ಆರ್ಥಿಕವಾಗಿ ಹೊರೆಯಾಗಿದೆ. ನಮ್ಮೂರಲ್ಲೇ ಇದ್ದಿದ್ದರೆ ತುಂಬಾ ಅನುಕೂಲವಾಗುತ್ತಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ಕ್ರೀಡಾಪಟುವೊಬ್ಬರು ತಿಳಿಸಿದರು.

ಪ್ರೇಕ್ಷಕರ ಗ್ಯಾಲರಿಗೆ ಅಳವಡಿಸಿರುವ ಶೆಲ್ಟರ್
ಪ್ರೇಕ್ಷಕರ ಗ್ಯಾಲರಿಗೆ ಅಳವಡಿಸಿರುವ ಶೆಲ್ಟರ್

‘ತಾಲ್ಲೂಕು ಕೇಂದ್ರವಾದ ಕನಕಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ. ಆದರೆ, ಜಿಲ್ಲಾ ಕೇಂದ್ರದಲ್ಲೇ ಇಲ್ಲ. ರಾಜಧಾನಿಗೆ ಬೆಂಗಳೂರಿಗೆ ಹತ್ತಿರವಿರುವ ಜಿಲ್ಲಾ ಕ್ರೀಡಾಂಗಣಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿದರೆ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಸಹಾಯವಾಗುತ್ತದೆ’ ಎಂದು ಬ್ಯಾಸ್ಕೆಟ್‌ಬಾಲ್ ತರಬೇತುದಾರ ಪ್ರದೀಪ್ ಹೇಳಿದರು.

ಬ್ಯಾಸ್ಕೆಟ್‌ಬಾಲ್ ಅಂಕಣದ ಸ್ಥಿತಿ
ಬ್ಯಾಸ್ಕೆಟ್‌ಬಾಲ್ ಅಂಕಣದ ಸ್ಥಿತಿ
ಎಚ್‌.ಎ. ಇಕ್ಬಾಲ್ ಹುಸೇನ್ ರಾಮನಗರ ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್ ರಾಮನಗರ ಶಾಸಕ
ಒಳಾಂಗಣ ಕ್ರೀಡೆಗಳಿಗೆ ಪ್ರತ್ಯೇಕ ವ್ಯವಸ್ಥೆ ಸಿಂಥೆಟಿಕ್ ಟ್ರ್ಯಾಕ್ ನಡಿಗೆ ಪಥ ಫ್ಲಡ್‌ಲೈಟ್‌ ಅಳವಡಿಕೆ ಚೈನ್‌ ಲಿಂಕ್ ಬೇಲಿ ತೆರೆದ ಜಿಮ್‌ ಸೇರಿದಂತೆ ವಿವಿಧ ಸೌಲಭ್ಯಗಳು ಕ್ರೀಡಾಂಗಣದಲ್ಲಿ ತಲೆ ಎತ್ತಲಿವೆ
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ
ಗವಿಯಯ್ಯ ವಾಯುವಿಹಾರಿ
ಗವಿಯಯ್ಯ ವಾಯುವಿಹಾರಿ
ಒಳಾಂಗಣ ಕ್ರೀಡೆಗಳಿಗಾಗಿ ಪ್ರತ್ಯೇಕ ಕಟ್ಟಡವೊಂದು ಕ್ರೀಡಾಂಗಣದಲ್ಲಿ ತಲೆ ಎತ್ತಬೇಕಿದೆ. ಇದರಿಂದಾಗಿ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆ ಹೋಗುವುದು ತಪ್ಪಲಿದೆ
ಗೋವಿಂದ ಎಂ. ಟೇಕ್ವಾಂಡೊ ತರಬೇತುದಾರ ರಾಮನಗರ
ಗೋವಿಂದ ಎಂ. ಟೇಕ್ವಾಂಡೊ ತರಬೇತುದಾರ ರಾಮನಗರ
ಗೋವಿಂದ ಎಂ. ಟೇಕ್ವಾಂಡೊ ತರಬೇತುದಾರ ರಾಮನಗರ
ಕ್ರೀಡಾಂಗಣವನ್ನು ಕ್ರೀಡಾ ಚಟುವಟಿಕೆಗಳಿಗೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಕೊಡಬಾರದು. ಅಂತಹ ಕಾರ್ಯಕ್ರಮಗಳಿದ್ದ ಮೇಲ್ಭಾಗದಲ್ಲಿರುವ ಜೂನಿಯರ್ ಕಾಲೇಜು ಮೈದಾನವನ್ನು ಬಳಸಬೇಕು
ಎಸ್‌. ಗವಿಯಯ್ಯ ವಾಯುವಿಹಾರಿ
ವಾಯುವಿಹಾರಿಗಳ ಅನುಕೂಲಕ್ಕಾಗಿ ಕ್ರೀಡಾಂಗಣದಲ್ಲಿ ಪ್ರತ್ಯೇಕ ನಡಿಗೆ ಪಥ ನಿರ್ಮಿಸಬೇಕು. ತೆರೆದ ಜಿಮ್ ಉಪಕರಣ ಅಳವಡಿಸಬೇಕು. ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು
ಕೆ.ವಿ. ಉಮೇಶ್ ವಾಯುವಿಹಾರಿ
ಅಥ್ಲೀಟ್‌ಗಳ ಅನುಕೂಲಕ್ಕಾಗಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಬೇಕು. ಮಣ್ಣಿನ ನೆಲದಲ್ಲಿ ಅಥ್ಲೀಟ್‌ಗಳು ಅಭ್ಯಾಸ ಮಾಡಲು ತುಂಬಾ ತೊಂದರೆಯಾಗುತ್ತಿದೆ
ಮಹೇಶ್ ಕುಮಾರ್ ಆರ್. ಅಥ್ಲೆಟಿಕ್ ಕೋಚ್ ರಾಮನಗರ
ಕ್ರೀಡಾಂಗಣಕ್ಕೆ ಗ್ರಿಲ್ ಕಾಂಪೌಂಡ್ ನಿರ್ಮಾಣ ಕೆಲಸ ನಡೆಯುತ್ತಿದೆ
ಕ್ರೀಡಾಂಗಣಕ್ಕೆ ಗ್ರಿಲ್ ಕಾಂಪೌಂಡ್ ನಿರ್ಮಾಣ ಕೆಲಸ ನಡೆಯುತ್ತಿದೆ

ಗ್ಯಾಲರಿಗೆ ಶೆಲ್ಟರ್‌ ಗ್ರಿಲ್ ಕಾಂಪೌಂಡ್ ಭಾಗ್ಯ

ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಶಾಸಕರಾದ ಬಳಿಕ ಕ್ರೀಡಾಂಗಣದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. ಆರಂಭದಲ್ಲಿ ಕ್ರೀಡಾಂಗಣಕ್ಕೆ ಒಮ್ಮೆ ಬೆಳಿಗ್ಗೆಯೇ ಬಂದಿದ್ದ ಹುಸೇನ್ ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಕ್ರೀಡಾಂಗಣಕ್ಕೆ ಬೇಕಾದ ಸೌಲಭ್ಯಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದರು. ಅದಾದ ಬಳಿಕ ಬಳಕೆಗೆ ಬಾರದಂತಿದ್ದ ಶೌಚಾಲಯಕ್ಕೆ ಕಾಯಕಲ್ಪ ಸಿಕ್ಕಿದೆ. ಜನರು ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲಿನ ಕುರ್ಚಿಗಳ ವ್ಯವಸ್ಥೆಯಾಗಿದೆ. ಹೈಮಾಸ್ಟ್ ದ್ವೀಪ ಸೇರಿದಂತೆ ಸುತ್ತಲೂ ವಿದ್ಯುದ್ದೀಪಗಳನ್ನು ಅಳಡಿಸಲಾಗಿದೆ. ತುಕ್ಕು ಹಿಡಿದಿದ್ದ ಕ್ರೀಡಾಂಗಣದ ಮತ್ತು ಜೂನಿಯರ್ ಕಾಲೇಜು ಮೈದಾನದ ತಂತಿ ಬೇಲಿಯನ್ನು ಕಿತ್ತೊಗೆದು ಗ್ರಿಲ್‌ ಕಾಂಪೌಂಡ್ ನಿರ್ಮಿಸಲಾಗಿದೆ. ಮೂರು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳನ್ನು ವೀಕ್ಷಿಸಲು ಬರುವವರು ಕುಳಿತುಕೊಳ್ಳುವುದಕ್ಕಾಗಿ ನಿರ್ಮಿಸಿರುವ ಪ್ರೇಕ್ಷಕರ ಗ್ಯಾಲರಿಗೆ ಇದೀಗ ಛಾವಣಿ ನಿರ್ಮಿಸಲಾಗಿದೆ. ಇದರಿಂದಾಗಿ ಪ್ರೇಕ್ಷಕರು ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಸಿಗಲಿದೆ.

‘ಮಾದರಿ ಕ್ರೀಡಾಂಗಣವಾಗಿ ಅಭಿವೃದ್ಧಿ’

‘ಜಿಲ್ಲಾ ಕ್ರೀಡಾಂಗಣವನ್ನು ₹20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ. ಆರಂಭಿಕವಾಗಿ ಕ್ರೀಡಾಂಗಣದ ಸುತ್ತಲೂ ಈಗಾಗಲೇ ಗ್ರಿಲ್‌ ಕಾಂಪೌಂಡ್‌ ಮತ್ತು ಗೇಟ್ ನಿರ್ಮಾಣ ಮಾಡಲಾಗಿದೆ. ಜನ ಕುಳಿತುಕೊಳ್ಳಲು ಅಲ್ಲಲ್ಲಿ ಸೀಟಿನ ವ್ಯವಸ್ಥೆ ಮಾಡಲಾಗಿದೆ. ಪ್ರೇಕ್ಷಕರು ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ಪ್ರೇಕ್ಷಕರ ಗ್ಯಾಲರಿಗೆ ಶೆಲ್ಟರ್ ಹಾಕಲಾಗಿದೆ. ಹೈಮಾಸ್ಟ್ ದ್ವೀಪ ಅಳಡಿಸಲಾಗಿದೆ. ಹಂತಹಂತವಾಗಿ ಮಾದರಿ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ಎಲ್ಲಾ ಯೋಜನೆ ರೂಪಿಸಲಾಗಿದೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕ್ರೀಡಾಂಗಣಕ್ಕೆ ಮುಂದೆ ಬೆಳಿಗ್ಗೆ ಮತ್ತು ಸಂಜೆ ಪ್ರವೇಶದ ಅವಧಿಯನ್ನು ನಿಗದಿಪಡಿಸಲಾಗುವುದು. ಒಳಗಡೆ ಮದ್ಯಪಾನ ಧೂಮಪಾನ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಸುರಕ್ಷತೆಗೆ ಒತ್ತು ನೀಡಲಾಗುವುದು. ಅಭಿವೃದ್ಧಿ ಕಾರ್ಯಗಳು ಮುಗಿದ ಬಳಿಕ ಪ್ರತಿ ಭಾನುವಾರ ಕ್ರೀಡಾಂಗಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ’ ಎಂದು ತಮ್ಮ ಅಭಿವೃದ್ಧಿಯ ನೀಲನಕ್ಷೆಯನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT