ಬುಧವಾರ, ಡಿಸೆಂಬರ್ 1, 2021
21 °C
ಲಾಕ್‌ಡೌನ್‌ನಲ್ಲಿ ನಿರುದ್ಯೋಗ ಸಮಸ್ಯೆಗೆ ವರವಾದ ನರೇಗಾ: ಗುರಿಗಿಂತ ಹೆಚ್ಚು ಕಾಮಗಾರಿ

ಬದಲಾಯ್ತು ಜಲಮೂಲಗಳ ಚಿತ್ರಣ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಲಾಕ್‌ಡೌನ್‌ ಸಂದರ್ಭವನ್ನು ಜಿಲ್ಲಾ ಪಂಚಾಯಿತಿ ಸದುಪಯೋಗಪಡಿಸಿಕೊಂಡಿದ್ದು, ನರೇಗಾ ಯೋಜನೆ ಅಡಿ ಜಿಲ್ಲೆಯಲ್ಲಿನ ಜಲಮೂಲಗಳನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಈ ಮಳೆಗಾಲದಲ್ಲಿ ಕೆರೆ ಕುಂಟೆಗಳು ಮೈದುಂಬಿ ನಿಂತಿವೆ.

ಜಲಮೂಲಗಳ ಸಂರಕ್ಷಣೆ ಸದುದ್ದೇಶ ಹೊತ್ತು ಜಿ.ಪಂ ಅಧಿಕಾರಿಗಳು ಮೂರು ತಿಂಗಳ ಕಾಲ ನಾಲ್ಕೂ ತಾಲ್ಲೂಕುಗಳಲ್ಲಿನ ಕೆರೆ–ಕುಂಟೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದರು. ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಸಣ್ಣ–ಪುಟ್ಟ ಕುಂಟೆಗಳು, ಬತ್ತಿ ಬರಡಾಗಿದ್ದ ಕೆರೆಗಳು, ನೀರಿನ ಹರಿವನ್ನೇ ಕಾಣದ ಕಾಲುವೆಗಳು...

ಹೀಗೆ ನಾನಾ ಬಗೆ ಜಲಮೂಲಗಳನ್ನು ಹುಡುಕಿ ಅವುಗಳಿಗೆ ಜೀವ ನೀಡಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ಹಿಡಿದಿಡುವ ಜತೆಗೆ ಅಂತರ್ಜಲ ಮಟ್ಟದ ಸುಧಾರಣೆಯೂ ಆಗುತ್ತಿದೆ. ಪ್ರಾಣಿ ಪಕ್ಷಿಗಳ ಬಾಯಾರಿಕೆಯೂ ತಣಿಯುತ್ತಿದೆ.

ಬೆಂಗಳೂರಿಗೆ ವಲಸೆ ಹೋಗಿದ್ದ ಜಿಲ್ಲೆಯ ಗ್ರಾಮೀಣ ಜನರು ಕೋವಿಡ್‌ನಿಂದಾಗಿ ಹಳ್ಳಿಗಳಿಗೆ ಮರಳಿದ್ದಾರೆ. ಹೀಗಾಗಿ ನರೇಗಾ ಕೆಲಸಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಯುವ ಸಮುದಾಯವೂ ಈ ಕೆಲಸದತ್ತ ಆಸಕ್ತಿ ತೋರುತ್ತಿದೆ. ಪರಿಣಾಮವಾಗಿ ನರೇಗಾ ಕೆಲಸ ಹಿಂದೆಂದಿಗಿಂತ ಹೆಚ್ಚು ಉತ್ಸಾಹದಿಂದ ಸಾಗಿದೆ. ಪ್ರತಿ ದಿನಕ್ಕೆ 275 ಕೂಲಿ ನಿಗದಿಯಾಗಿದ್ದು, ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅವರ ಶ್ರಮದ ಹಣ ನೇರ ಸಂದಾಯ ಆಗುತ್ತಿದೆ.

ನರೇಗಾ ದಾಖಲೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ರಾಮನಗರ ಜಿಲ್ಲೆ ಗಣನೀಯ ಸಾಧನೆ ಮಾಡುತ್ತಲೇ ಬಂದಿದೆ. ಅದರಲ್ಲೂ ಕನಕಪುರ ತಾಲ್ಲೂಕು ದೇಶದಲ್ಲೇ ಅಗ್ರ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿತ್ತು. ಇದೀಗ ನಿಗದಿತ ಗುರಿಗಿಂತ ಹೆಚ್ಚು ಮಾನವ ದಿನಗಳನ್ನು ಸೃಜಿಸುವ ಮೂಲಕವೂ ಜಿಲ್ಲೆ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ 127 ಗ್ರಾಮ ಪಂಚಾಯಿತಿಗಳು ಇದ್ದು, ಲಾಕ್‌ಡೌನ್‌ ಬಳಿಕ ಈವರೆಗೆ ಬರೋಬ್ಬರಿ 35 ಲಕ್ಷಕ್ಕೂ ಹೆಚ್ಚು ಮಾನವ ದಿನಗಳಷ್ಟು ಕೆಲಸ ಮಾಡಿವೆ. ಅದರಲ್ಲೂ ಜೂನ್‌ ತಿಂಗಳು ಒಂದರಲ್ಲಿಯೇ 20ಲಕ್ಷ ಮಾನವ ದಿನಗಳು ಸೃಜನೆಯಾಗಿವೆ. ಕಳೆದ ವರ್ಷ ಇದೇ ತಿಂಗಳು 14 ಲಕ್ಷ ಮಾನವ ದಿನಗಳಷ್ಟು ಕೆಲಸವಾಗಿತ್ತು. ಈ ಬಾರಿ ತಿಂಗಳ ಅವಧಿಯಲ್ಲೇ 6 ಲಕ್ಷ ದಿನಗಳಷ್ಟು ಹೆಚ್ಚುವರಿ ಕೆಲಸ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.