ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ವಿಜೃಂಭಣೆಯ ರೇವಣಸಿದ್ದೇಶ್ವರ ರಥೋತ್ಸವ: ವಿವಿಧ ಭಾಗಗಳ ಭಕ್ತರು ಭಾಗಿ

Published 24 ಮೇ 2024, 5:22 IST
Last Updated 24 ಮೇ 2024, 5:22 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣ ಸಿದ್ದೇಶ್ವರ ಮಹಾರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ರೇವಣಸಿದ್ಧೇಶ್ವರರ ರಥವನ್ನು ಎಳೆದು ಪುನೀತರಾದರು.

ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಜೊತೆಗೆ, ಭೀಮೇಶ್ವರ ದೇವಾಲಯ ಮತ್ತು ರೇಣುಕಾಂಬಾ ಅಮ್ಮನವರ ದೇವಾಲಯದಲ್ಲಿಯೂ ವಿಶೇಷ ಪೂಜೆ, ವಿಶೇಷ ಅಲಂಕಾರ ಹಾಗೂ ರುದ್ರಾಭಿಷೇಕ ನಡೆದವು.

ಧಾರ್ಮಿಕ ವಿಧಿ–ವಿಧಾನಗಳು ನೆರವೇರಿದ ಬಳಿಕ, ಬೆಳಿಗ್ಗೆ 6 ಗಂಟೆಗೆ ದೇಗುಲದ ಆವರಣದಲ್ಲಿರುವ ಬಸವೇಶ್ವರ ಸ್ವಾಮಿ ಅಗ್ನಿಕೊಂಡವನ್ನು ಅರ್ಚಕ ರುದ್ರೇಶ್ ಅವರು ಭಕ್ತಿಯಿಂದ ಹಾಯ್ದುರು. ಮಧ್ಯಾಹ್ನ 12 ಗಂಟೆಗೆ ರೇವಣಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು ವಿಶೇಷವಾಗಿ ಅಲಂಕಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಅಲಂಕೃತ ರಥಕ್ಕೆ ಅರ್ಚಕರು ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತರು ‘ಜೈ ರೇವಣ ಸಿದ್ದೇಶ್ವರ’, ‘ಜೈ ಜೈ ರೇವಣ ಸಿದ್ದೇಶ್ವರ’ ಎಂದು ದೇವರಿಗೆ ಜೈಕಾರ ಹಾಕುತ್ತಾ ರಥವನ್ನು ಭಕ್ತಿಯಿಂದ ಎಳೆದು ಪುನೀತಾದರು. ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಹೂ ಎಸೆದು ತಮ್ಮ ಭಕ್ತಿ ಸರ್ಮಪಿಸಿದರು. ವೀರಗಾಸೆ, ಡೋಲು, ಹಗಲು ವೇಷ, ನಂದಿ ಧ್ವಜ ತಂಡಗಳು ಸೇರಿದಂತೆ ವಿವಿಧ ಜಾನಪದ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.

ದಾಸೋಹ ಮಠದ ಮಠದ ಬಸವಲಿಂಗರಾಜ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಕೆ. ರಾಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಉಪ ತಹಶೀಲ್ದಾರ್ ರುದ್ರಮ್ಮ, ಧಾರ್ಮಿಕ ದತ್ತಿ ಇಲಾಖೆಯ ಸುಮಿತ್ರ, ಅಧಿಕಾರಿ ಯೇಸುರಾಜ್, ಮುಖಂಡ ಎಂ. ರುದ್ರೇಶ್ ಸೇರಿದಂತೆ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡರು.

ಜಾತ್ರೆ ಅಂಗವಾಗಿ ರೇವಣ ಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿತ್ತು. ದೇಗುಲದ ಆವರಣದಲ್ಲಿ ಮಹಿಳೆಯರು ಬಿಡಿಸಿದ್ದ ಬಗೆ ಬಗೆಯ ರಂಗೋಲಿಗಳು ನೋಡುಗರ ಗಮನ ಸೆಳೆದವು. ಅತ್ಯುತ್ತಮ ಎನಿಸಿದ ರಂಗೋಲಿಗಳಿಗೆ ಟ್ರಸ್ಟ್‌ ವತಿಯಿಂದ ಬಹುಮಾನ ವಿತರಿಸಲಾಯಿತು.

ರಥೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಮೇಶ್ ಮತ್ತು ನಗರ ವೃತ್ತ ನಿರೀಕ್ಷಕ ಲಕ್ಷ್ಮಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನವನ್ನು ಸನ್ನದ್ಧ ಸ್ಥಿತಿಯಲ್ಲಿದ್ದರು. ವೈದ್ಯಕೀಯ ತಂಡವನ್ನು ಸಹ ನಿಯೋಜನೆ ಮಾಡಲಾಗಿತ್ತು.

ಭಕ್ತರಿಗೆ ಪ್ರಸಾದ ವ್ಯವಸ್ಥೆ
ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಬಂದಿದ್ದ ಭಕ್ತರಿಗೆ ರೇವಣಸಿದ್ದೇಶ್ವರ ಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ಮತ್ತು ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅವರೆಕಾಳು ಸಾರು ಮುದ್ದೆ ಅನ್ನ ಪಲ್ಯ ಒಳಗೊಂಡ ಪ್ರಸಾದವನ್ನು ನೀಡಲಾಯಿತು. ಜೊತೆಗೆ ಸ್ಥಳೀಯರು ಬಿಸಿಲಿನಿಂದ ಬಾಯಾರಿದವರಿಗೆ ಮಜ್ಜಿಗೆ ಪಾನಕ ಹಾಗೂ ಕೋಸಂಬರಿ ವಿತರಿಸಿದರು. ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT