ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಸಂಚಾರಕ್ಕೆ ಸಂಚಕಾರ: ಬಿಳಗುಂಬ ಬಳಿ ರಸ್ತೆಗೆ ವೈರ್ ಕಟ್ಟಿ ದರೋಡೆಗೆ ಯತ್ನ

Last Updated 10 ಅಕ್ಟೋಬರ್ 2021, 5:41 IST
ಅಕ್ಷರ ಗಾತ್ರ

ರಾಮನಗರ: ಗ್ರಾಮೀಣ ಭಾಗಗಳಲ್ಲಿ ರಾತ್ರಿ ಹೊತ್ತು ಅಪರಾಧ ಕೃತ್ಯಗಳು ಹೆಚ್ಚತೊಡಗಿವೆ. ಅದರಲ್ಲೂ ಕಳ್ಳರು ವಾಹನ ಸವಾರರನ್ನು ಗುರಿಯಾಗಿಸಿಕೊಂಡು ದರೋಡೆಗೆ ಹೊಂಚು ಹಾಕುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.

ರಾಮನಗರ ಹೊರವಲಯದಲ್ಲಿರುವ ಬಿಳಗುಂಬ ರಸ್ತೆಯಲ್ಲಿ ಗುರುವಾರ ರಾತ್ರಿ ಇಂತಹದ್ದೊಂದು ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ರಾಮನಗರದಿಂದ ಬಿಳಗುಂಬಕ್ಕೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ನಾಗಪ್ಪನ ಬಾರೆಯಲ್ಲಿ ರಸ್ತೆಗೆ ಅಡ್ಡಲಾಗಿ ತಂತಿ ಕಟ್ಟಿ, ದರೋಡೆ ಮಾಡಲು ಕಳ್ಳರು ಯತ್ನಿಸಿದ್ದಾರೆ. ಆದರೆ, ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ. ಬಿಳಗುಂಬ ಗ್ರಾಮದ ನಂಜುಂಡ ಎಂಬುವವರು ರಾಮನಗರದ ಸಂತೋಷ್‌ ಬಾರ್‌ನಲ್ಲಿ ವ್ಯಾಪಾರ ಮುಗಿಸಿ ಹಣ ತೆಗೆದುಕೊಂಡು ರಾತ್ರಿ 11ರ ವೇಳೆಗೆ ಬಿಳಗುಂಬಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ವಿದ್ಯುತ್‌ ಕಂಬದಿಂದ ಮರಕ್ಕೆ ತಂತಿಯನ್ನು ಬಿಗಿದು ಕೆಳಗೆ ಬೀಳಿಸಿ ದರೋಡೆಗೆ ಪ್ರಯತ್ನಿಸಲಾಗಿದೆ.

ತಂತಿ ಕಟ್ಟಿರುವುದನ್ನು ದೂರದಲ್ಲಿ ಗಮನಿಸಿದ ಸಂತೋಷ್‌ ಅಲ್ಲಿಂದ ಬಚಾವಾಗಿ ಬಂದು ಗ್ರಾಮದ ಯುವಕರಿಗೆ ಕರೆ ಮಾಡಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಂಬದಿಂದ ಮರಕ್ಕೆ ತಂತಿ ಬಿಗಿದು ದರೋಡೆಗೆ ಯತ್ನಿಸಿರುವುದು ದೃಢಪಟ್ಟಿದೆ. ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಹೆದ್ದಾರಿಯಲ್ಲೂ ತೊಂದರೆ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ವೇಳೆ ಕೆಲವು ಕಡೆಗಳಲ್ಲಿ ಹಿಂದೆ ಈ ರೀತಿಯ ಘಟನೆಗಳು ನಡೆಯತ್ತಿದ್ದವು. ಲಾರಿ ಚಾಲಕರನ್ನು ದೋಚುವ ಪ್ರಕರಣಗಳು ಆಗಾಗ್ಗೆ ವರದಿ ಆಗುತ್ತಿದ್ದವು. ಆದರೆ ಈಗ ಕಳ್ಳರು ತಮ್ಮ ಮಾರ್ಗ ಬದಲಿಸಿದ್ದಾರೆ.

ರಾಮನಗರದಲ್ಲಿ ಈಗ ಬೈಪಾಸ್ ರಸ್ತೆ ನಿರ್ಮಾಣ ಆಗಿದ್ದು, ವಾಹನಗಳ ಓಡಾಟವೂ ಆರಂಭ ಆಗಿದೆ. ಇಲ್ಲಿ ಸಹ ಜನರು ಓಡಾಡಲು ಹೆದರುತ್ತಿದ್ದಾರೆ. ನಾನಾ ತಂತ್ರಗಳ ಮೂಲಕ ವಾಹನಗಳನ್ನು ಅಡ್ಡಗಟ್ಟಿ ಅವರನ್ನು ಸುಲಿಗೆ ಮಾಡುವ ಪ್ರಕರಣಗಳು ವರದಿಯಾಗತೊಡಗಿವೆ.

ಇಂತಹ ಕಡೆಗಳಲ್ಲಿ ಪೊಲೀಸರು ಗಸ್ತು ಹಚ್ಚಿಸಬೇಕು. ಬೈಪಾಸ್‌ ರಸ್ತೆಯಲ್ಲೂ ಹೈವೆ ಪೆಟ್ರೋಲಿಂಗ್ ವಾಹನಗಳು ಓಡಾಡಿ ಪರಿಶೀಲಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT