ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಸುಗ್ಗಿ ಖರೀದಿ ಸಂಭ್ರಮ

ಸಂಕ್ರಾಂತಿ: ಕಿಚ್ಚು ಹಾಯಿಸಲು ಸಿದ್ಧತೆ
Last Updated 13 ಜನವರಿ 2021, 14:46 IST
ಅಕ್ಷರ ಗಾತ್ರ

ರಾಮನಗರ: ಮಕರ ಸಂಕ್ರಾಂತಿ ಹಬ್ಬದ ಮುನ್ನ ದಿನವಾದ ಬುಧವಾರ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದ್ದು, ಖರೀದಿ ಸಂಭ್ರಮ ಕಂಡುಬಂದಿತು.

ಮುಂಜಾನೆಯಿಂದಲೇ ಗ್ರಾಹಕರು ಎಪಿಎಂಸಿ ಮಾರುಕಟ್ಟೆ, ಹಳೆ ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಕಬ್ಬಿನ ಜಲ್ಲೆ, ಕಡಲೆಕಾಯಿ, ಅವರೆಕಾಯಿ, ಗೆಣಸು, ಹೂ ವ್ಯಾಪಾರದಲ್ಲಿ
ತೊಡಗಿಸಿಕೊಂಡಿದ್ದರು. ಎಳ್ಳು, ಬೆಲ್ಲದ ವ್ಯಾಪಾರವೂ ಜೋರಾಗಿ ನಡೆದಿತ್ತು.

ಪ್ರತಿ ಹಬ್ಬದ ಸಂದರ್ಭವೂ ಬೆಲೆ ಏರಿಕೆ ಬಿಸಿ ಇದ್ದದ್ದೇ. ಈ ಬಾರಿಯ ಸುಗ್ಗಿ ಖರೀದಿಯಲ್ಲೂ ಅದು ಗ್ರಾಹಕರಿಗೆ ತಟ್ಟಿತು. ಕಬ್ಬಿನ ಜಲ್ಲೆ ಜೋಡಿಯೊಂದಕ್ಕೆ ₨80–100ರವರೆಗೂ ಬೆಲೆ ಏರಿಸಿಕೊಂಡಿತ್ತು. ನೆಲಗಡಲೆ ಪ್ರತಿ
ಸೇರಿಗೆ ₨40, ಸಿಹಿಗೆಣಸು ಪ್ರತಿ ಕೆ.ಜಿ.ಗೆ ₨40ರ ದರದಲ್ಲಿ ಮಾರಾಟ ನಡೆಯಿತು. ಹಬ್ಬದ ದಿನ ಹಸಿ ಅವರೆಕಾಯಿ ಬೆರೆಸಿದ ಗೊಜ್ಜು ಸೇವನೆ ಸಂಪ್ರದಾಯ. ಅದರಲ್ಲೂ ಮಾಗಡಿ ಭಾಗದಿಂದ ಬರುವ ಸೊನೆ ಅವರೆಯ ಸ್ವಾದವೇ ಬೇರೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಅವರೆ ಆವಕವೂ ಕಡಿಮೆ ಇದ್ದು, ಬೇಡಿಕೆಯೂ ಹೆಚ್ಚಿಲ್ಲ ಎಂದು ವರ್ತಕರು ಹೇಳಿದರು.

ಎಳ್ಳು ಖರೀದಿ: ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಸೇರಿದಂತೆ ವಿವಿಧ ಪದಾರ್ಥಗಳ ಬೆಲೆ ಹೆಚ್ಚಾಗಿರುವುದಕ್ಕೆ ಗ್ರಾಹಕರು ಅಸಮಾಧಾನದಿಂದಲೇ ವ್ಯಾಪಾರ ಮುಂದುವರಿಸಿದ್ದರು. ರೈತರು ತಮ್ಮ ರಾಸುಗಳನ್ನು ಸಿಂಗರಿಸಲು ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ‘ಮೊದಲಾದರೆ ಎಳ್ಳು, ಬೆಲ್ಲ ಎಲ್ಲವನ್ನೂ ಬೆರೆಸಿ ನಾವೇ ಸಿದ್ಧಪಡಿಸಿಕೊಳ್ಳುತ್ತಿದ್ದೆವು, ಆದರೆ ಇಂದು ಇವೆಲ್ಲಾ ರೆಡಿಮೆಡ್‌ ಪ್ಯಾಕೆಟ್‌ಗಳಲ್ಲಿ ದೊರೆಯುತ್ತಿವೆ. ಯಾರಿಗೂ ಸಮಯ ಇದ್ದಂತೆ ಇಲ್ಲ’ ಎಂದು ಖರೀದಿಗೆ ಬಂದಿದ್ದ ಐಜೂರು ನಿವಾಸಿ ವಿಮಲಾ ಹೇಳಿದರು.

ಸುಗ್ಗಿಯ ಹಬ್ಬ: ‘ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬವೆಂದೇ ಪ್ರತೀತಿ. ಗ್ರಾಮೀಣ ಭಾಗಗಳಲ್ಲಿ ಬೆಳೆಗಳು ಕಟಾವು ಆದ ನಂತರ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದ ನಂತರ
ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ನಾಳೆಗೆ ಧನುರ್ಮಾಸ ಕೊನೆಯಾಗಲಿದೆ. ಈ ಹಬ್ಬದಂದು ಹೆಣ್ಣು ಮಕ್ಕಳು ಸ್ನಾನ ಮಡಿಗಳಿಂದ ದೇವರನ್ನು ಪೂಜಿಸಿ ನಂತರ ಮನೆಮನೆಗಳಿಗೆ ತೆರಳಿ ಎಳ್ಳು-ಬೆಲ್ಲ,
ಕಬ್ಬಿನ ಜಲ್ಲೆ ಹಂಚುವ ಪದ್ಧತಿ ಇಂದಿಗೂ ಇದೆ’ ಎಂದು ಹಿರಿಯರು ಹೇಳಿದರು.

ರಾಸುಗಳಿಗೆ ಸಿಂಗಾರ

ಹಬ್ಬದ ದಿನ ಮನೆಯಲ್ಲಿನ ರಾಸುಗಳನ್ನು ಚೆಂದವಾಗಿ ಸಿಂಗರಿಸಿ ಅದನ್ನು ಕಿಚ್ಚು ಹಾಯಿಸುವುದು ಸಂಪ್ರದಾಯ. ಹೀಗಾಗಿ ಅವುಗಳ ಸಿಂಗಾರಕ್ಕೆ ಬೇಕಾದ ಮೂಗಿನ ದಾರ, ಹಗ್ಗ, ಪೀಪಿ, ಕರಿಹುರಿ, ಕತ್ತಿನ ಹುರಿ,
ಪ್ಲಾಸ್ಟಿಕ್ ಹಾರಗಳು, ಕತ್ತಿನ ಗಂಟೆ, ಕುಚ್ಚು, ಕಳಸ, ನೀಲಿ, ಹಸಿವಿನ ಹಗ್ಗ, ಕತ್ತಿನ ಹುರಿ... ಮೊದಲಾದವುಗಳು ಮಾರುಕಟ್ಟೆಯಲ್ಲಿ ಇದ್ದವು. ಆದರೆ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಇತ್ತು.

***

ಈ ಬಾರಿ ಎಲ್ಲ ದಿನಸಿ, ರಾಸು ಸಿಂಗಾರದ ವಸ್ತುಗಳ ಬೆಲೆಯೂ ಹೆಚ್ಚಿದೆ. ಕಬ್ಬಿನ ಜಲ್ಲೆಯ ಬೆಲೆಯೇ ದುಪ್ಪಟ್ಟಾಗಿದೆ

-ಹರ್ಷ,ಗ್ರಾಹಕ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT