ಸೋಮವಾರ, ಸೆಪ್ಟೆಂಬರ್ 20, 2021
23 °C
ಕೆಂಪೇಗೌಡರ ಕಾಲದ 64 ಶಿವಶರಣ ಮಠಗಳನ್ನು ರಕ್ಷಿಸಲು ಇತಿಹಾಸಕಾರರು, ನಾಗರಿಕರ ಒತ್ತಾಯ

ಸರ್ವಶೀಲೆ ಸೋಮಕ್ಕನ ಮಠ, ಗದ್ದುಗೆಗೆ ಕಂಟಕ

ದೊಡ್ಡಬಾಣಗೆರೆ ಮಾರಣ್ಣ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಕಾಲನಲೀಲೆಗೆ ಸಿಲುಕಿ ವಿನಾಶದತ್ತ ಸಾಗಿರುವ ಶರಣೆ ಸರ್ವಶೀಲೆ ಸೋಮಕ್ಕನ ಮಠ ಮತ್ತು ಸಮಾಧಿ (ಗುದ್ದುಗೆ) ದುಃಸ್ಥಿತಿ ತಲುಪಿದಿದ್ದು, ಅದರ ರಕ್ಷಣೆ ಮುಂದಾಗದಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.

ನೇತೇನಹಳ್ಳಿ ಸರ್ವೆ ನಂಬರ್ 1 ರಲ್ಲಿನ ಸರ್ವಶೀಲೆ ಸೋಮಕ್ಕನ ಮಠ ಮತ್ತು ಶರಣೆಯ ಸಮಾದಿ(ಗದ್ದುಗೆ)ರಕ್ಷಣೆ ಇಲ್ಲದೆ ಶಿಥಿಲವಾಗಿದೆ. ಸರ್ವಶೀಲೆ ಸೋಮಕ್ಕನ ಮಠ, ಸಮಾಧಿ(ಗದ್ದುಗೆ) ಮತ್ತು ಕೆಂಪೇಗೌಡರ ಕಾಲದ 64 ಶಿವಶರಣ ಮಠಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಒತ್ತಾಸೆ.

ಹಿನ್ನೆಲೆ: ಕಲ್ಯಾಣ ಕ್ರಾಂತಿಯ ನಂತರ ದಕ್ಷಿಣದೆಡೆಗೆ ಚದುರಿದ ಶಿವಶರಣ, ಶರಣೆಯರು ಮಾಗಡಿ ಸೀಮೇಯ ಶಿವಗಂಗೆಯಿಂದ ರೇವಣಸಿದ್ದರ ಬೆಟ್ಟದ ತಪ್ಪಲಿನವರೆಗೆ ತಪೋಭೂಮಿಯನ್ನಾಗಿಸಿಕೊಂಡು ನೆಲೆಸಿದ್ದರು. ಬಸವಾದಿಶರಣರ ಸಮಾನತೆಯ ಧಾರ್ಮಿಕ ಆಂದೋಲವನ್ನು ಮುಂದುವರೆಸಿದರು. ಕಲ್ಯದಲ್ಲಿ ಸರ್ವಶೀಲೆ ಚನ್ನಮ್ಮ ನೆಲೆಸಿದಂತೆ, ಹೊಸಪೇಟೆ ಬೆಟ್ಟದ ತಪ್ಪಲಿನಲ್ಲಿ ಸರ್ವಶೀಲೆ ಶರಣೆ ಸೋಮಕ್ಕ ಮಠವನ್ನು ನಿರ್ಮಿಸಿಕೊಂಡು ಶರಣ ಶರಣೆಯರೊಂದಿಗೆ ಬಾಳಿ ಬದುಕಿದ್ದರು ಎಂಬುದನ್ನು ಶಿವತತ್ವ ಚಿಂತಾಮಣಿ ಕೃತಿಯಲ್ಲಿ ವರ್ಣಿಸಿದೆ.

ಅದರ ಕುರುಹುಗಳಾಗಿ ಸೋಮಕ್ಕನ ಮಠದ ಆವರಣದಲ್ಲಿ ಅವರ ಸಮಾಧಿ ಇಂದಿಗೂ ಅನಾಥವಾಗಿ ವಿನಾಶದತ್ತ ಸಾಗಿದೆ. ಪಾಲ್ಕುರಿಕೆ ಸೋಮನಾಥನ ಬಸವಪುರಾಣಮು ಕೃತಿಯಲ್ಲಿ ಸೋಮಕ್ಕನೆಂಬ ಶಿವಶರಣೆ ಮಾಗಡಿಯಲ್ಲಿ, ತಿಳಿಯೆ ಶಿವಂಗೆ ವಧುವಾಗಿ ಪುರುಷರೂಪ, ತಳೆದು ನಿಜಮುಕ್ತಿಯಂ ಪಡೆದಳಾ ಸೋಮಕ್ಕ. ಲಲಿತ ಶಿವಲಿಂಗಪೂಜೆಯನರಿದುದೀಪವೇ ಸಲೆ ಮಾಡುತ್ತಿರುವರಕಂಡು ಕೊಲ ಬರೆ ಶಿವಯೆ ನಲು ದೀಪವೇ ಸ್ವಯಂ ಜ್ಯೋತಿ ಲಿಂಗಾಕಾರಮಾಗಿಯಾ ಶಿವಶರಣೆಯಂ ಎಂಬುದಾಗಿ ಚಿತ್ರಿಸಲಾಗಿದೆ.

ಸೋಮಕ್ಕನ ಮಠದಲ್ಲಿ ನೂರ ಎಂಟು ಮಂದಿ ಶಿವಶರಣೆಯರು ನೆಲೆಸಿದ್ದರು. ಶರಣೆಯರ ನೂರೆಂಟು ನಾಮಾವಳಿ ಎಂದು ಪ್ರಾತಃಸ್ಮರಣೀಯರಾದ ಸೋಮಕ್ಕ ತಂಡದ ಶಿವಶರಣೆಯರನ್ನು ಸ್ತುತಿಸುವ ಪದ್ಯಗಳು ದೊರಕಿವೆ. ಜೈನ, ವೈದಿಕ ಮತ್ತು ವೀರಶೈವ ಧರ್ಮಗಳಿಗೆ ತೀವ್ರ ಪೈಪೋಟಿ ಇದ್ದಂಥ ಸಂದರ್ಭದಲ್ಲಿ ಸೋಮಕ್ಕ ಸರ್ವಶೀಲೆ ಸಂಪನ್ನೆಯಾಗಿ ಬಸವಾದಿ ಶರಣರೂ ಆಚರಣೆಗೆ ತಂದಿದ್ದ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳನ್ನು ಪ್ರಚಾರ ಮಾಡುವುದರ ಜತೆಗೆ ಜಗದೊಡೆಯ ಶ್ರೀಶೈಲದ ಮಲ್ಲಿಕಾರ್ಜುನನ ನಾಮಸ್ಮರಣೆ ಮಾಡುತ್ತಾ, ಆಧ್ಯಾತ್ಮಕಿ ಮತ್ತು ಸಾಮಾಜಿಕ ಚಳವಳಿಗೆ ಸ್ಫೂರ್ತಿ ನೀಡಿದ್ದರು. ಜೈನರಲ್ಲಿ ಸುಕುಮಾರಚರಿತೆ, ಸಮಯ ಪರೀಕ್ಷೆ, ಧರ್ಮಪರೀಕ್ಷೆ, ವಿಜಯಕುಮಾರಿ ಚರಿತೆ, ಶಿವಶರಣರ ವಚನಗಳಲ್ಲಿ ಸೋಮಕ್ಕ ಮಲ್ಲಿಕಾರ್ಜುನಸ್ವಾಮಿಯ ಮಾಹಿತಿ ಲಭ್ಯವಿದೆ.

ಶರಣರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದ ಸೋಮಕ್ಕ ಬೆಟ್ಟದ ತಪ್ಪಲಿನಲ್ಲಿ ಶಿವಶರಣೆರ ಸಹಾಯದಿಂದ ಬೃಹತ್ ಬಂಡೆಯ ತಪ್ಪಲಿನಲ್ಲಿ ಮಠವನ್ನು ನಿರ್ಮಿಸಿಕೊಂಡು ಬಾಳಿ ಬದುಕಿದ್ದಾರೆ. ಮಠದ ಪೂರ್ವದಿಕ್ಕಿನಲ್ಲಿ ಕೆರೆ, ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಶಿವನ ದೇಗುಲಗಳನ್ನು ಕಟ್ಟಿಸಿ, ನಿತ್ಯ ಶಿವನ ಧ್ಯಾನ, ತಪಸ್ಸು, ವಚನ ರಚನೆ, ವಚನ ಪರಿಪಾಠದ ಮೂಲಕ, ಕಲ್ಯಾಣ ಒಡೆಯರ ಮಠ, ಅರೆಶಂಕರ ಮಠ, ಪರಂಗಿ ಚಿಕ್ಕನಪಾಳ್ಯದ ಬಳಿ ಇರುವ ಕೆರೆಕೋಡಿ ಮಲ್ಲೇಶ್ವರ ಮಠಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಂವಾದ ಚರ್ಚೆಗಳಲ್ಲಿ ಭಾಗವಹಿಸಿ ಸಾಮಾಜಿಕ ಕ್ರಾಂತಿಯ ಮೂಲಕ ಕಾಯಕ ನಿಷ್ಠೆಯನ್ನು ಜನಮಾನಸದಲ್ಲಿ ಮೂಡಿಸಿದ್ದರು ಎಂದು ಇತಿಹಾಸ ಸಂಶೋಧಕ ಪ್ರೊ.ತಿಮ್ಮಹನುಮಯ್ಯ ಮಾಹಿತಿ ನೀಡಿದರು.

ಕಾಯಕದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಶರಣೆಯರಾದ ತಿಲಕವ್ವೆ, ಕೊಲ್ಲವ್ವೆ, ವೈಜಕವ್ವೆ,ಯ ಸಮಕಾಲೀನರಾಗಿ ವಚನಕ್ರಾಂತಿಯ ದಿವ್ಯ ಸಂದೇಶವನ್ನು ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನವಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಸೋಮಕ್ಕನ ಮಠ ಮತ್ತು ಸಮಾಧಿ (ಗದ್ದುಗೆ) ಇಂದು ಭೂತ ಬಂಗಲೆಯಂತಾಗಿದೆ. ಮಠದ ಸುತ್ತಲೂ ಗಿಡಪೊದೆ ಬೆಳೆದಿವೆ. ಮಠಕ್ಕೆ ಸೇರಿದ್ದ ಕೆರೆಯನ್ನು ಮುಚ್ಚಲಾಗುತ್ತಿದೆ. ಕಲ್ಯಾಣಿಯನ್ನು ಭೂದಾಹಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಸೋಮಕ್ಕನೆ ಹೆಸರಿನಲ್ಲಿ ಉಳಿದಿರುವ ಬೆಟ್ಟಗುಹೆ, ಮಠದ ಸ್ಮಾರಕಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಶರಣರ ಕಾಯಕ ನಿಷ್ಠೆಯನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದರು.

ಮುಜರಾಯಿ ಇಲಾಖೆ ಮತ್ತು ಸರ್ವೆ ಇಲಾಖೆ ಒತ್ತುವರಿಯಾಗಿರುವ ಸೋಮಕ್ಕನ ಮಠದ ಭೂಮಿಯನ್ನು ತೆರವುಗೊಳಿಸಿ ಸಮಾಧಿ(ಗದ್ದುಗೆ) ಪುನರುಜ್ಜೀವನ ಗೊಳಿಸಿಬೇಕು ಎಂಬುದು ಇತಿಹಾಸ ಪ್ರಿಯರ ಒತ್ತಾಯ. ಹೊಸಪೇಟೆಯಿಂದ ರಾಮನಗರ ರಸ್ತೆಯಲ್ಲಿ ಸಾಗಿದರೆ, ಮಾರುತಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಬೆಟ್ಟದ ಮೇಲೆ ಮೂರು ಬೆಲ್ಲದಚ್ಚಿನಂತೆ ಕಾಣುವ ಬಂಡೆಗಳಿಂದ ಕೂಡಿರುವ ಬೆಟ್ಟವಿದೆ. ಸೋಮಕ್ಕನ ಮಠ ಬೆಟ್ಟದ ತಪ್ಪಲಿನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.