ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸೀಲ್‌ಡೌನ್‌: ಶ್ಯಾನುಭೋಗನಹಳ್ಳಿ ಮಂದಿಗೆ ಸಂಕಷ್ಟ

ಆಹಾರ ಸಾಮಗ್ರಿ ಅಭಾವ: ಪೂರೈಕೆಗೆ ತಾಲ್ಲೂಕು ಆಡಳಿತಕ್ಕೆ ಒತ್ತಾಯ
Last Updated 15 ಜೂನ್ 2020, 14:55 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್‌-19 ಸೋಂಕಿತರು ಇರುವ ಕಾರಣಕ್ಕೆ ಸೀಲ್‌ಡೌ‌ನ್‌ಗೆ ಒಳಗಾಗಿರುವ ಚನ್ನಪಟ್ಟಣ ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಆಹಾರದಕೊರತೆ ಎದುರಾಗಿದೆ.ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅಲ್ಲಿನ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ದುಂಬಾಲು ಬಿದ್ದಿದ್ದಾರೆ.

ಗ್ರಾಮದ ಅನೇಕರಲ್ಲಿ ಕೋವಿಡ್‌-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಇಡೀ ಗ್ರಾಮ ಸೀಲ್‌ಡೌನ್ ಆಗಿದೆ. ಇಲ್ಲಿನ ಜನರು ಹೊರಗೆ ಕಾಲಿಡದಂತಹ ಪರಿಸ್ಥಿತಿ ಇದೆ. ಆದರೆ, ಜನರಿಗೆ ಅಗತ್ಯವಾದ ಆಹಾರ ಸಾಮಗ್ರಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಕೊರತೆ ಇದೆ. ಇದಕ್ಕಾಗಿ ತಾಲ್ಲೂಕು ಆಡಳಿತ ನೀರುಗಂಟಿ ಒಬ್ಬರನ್ನು ನಿಯೋಜನೆ ಮಾಡಿದೆಯಾದರೂ ಎಲ್ಲವೂ ಅವರಿಂದ ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಬಡವರ ಮನೆಗಳಲ್ಲಿ ಆಹಾರ ದಾಸ್ತಾನು ಖಾಲಿಯಾಗಿದೆ ಎಂಬುದು ಸ್ಥಳೀಯರ ದೂರು.

ಗ್ರಾಮದಲ್ಲಿ ಮೊದಲಿಗೆ 25 ವರ್ಷದ ಜೈಲು ಸಿಬ್ಬಂದಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ನಂತರದಲ್ಲಿ ಅವರ ಪ್ರಾಥಮಿಕ ಸಂಪಕಕ್ಕೆ ಬಂದಿದ್ದ ಇತರರಿಗೂ ಸೋಂಕು ಪಸರಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಹಲವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಹಳ್ಳಿಯಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಸೀಲ್‌ಡೌನ್‌ ಕಾರಣಕ್ಕೆ ವಾರದಿಂದ ಇಲ್ಲಿನ ನಿವಾಸಿಗಳು ಹಳ್ಳಿಯಲ್ಲೇ ಉಳಿದಿದ್ದಾರೆ.

’ಗ್ರಾಮದವರೆಲ್ಲ ಕೃಷಿಕರು. ಅಂದಿನ ದುಡಿಮೆ ಅಂದಿಗೆ ಎಂದು ನಂಬಿಕೊಂಡ ಸಾಕಷ್ಟು ಕುಟುಂಬಗಳು ಇಲ್ಲಿವೆ. ಇವರೆಲ್ಲ ಈಗ ದಿನದ ಊಟಕ್ಕೂ ಪರದಾಡುವಂತೆ ಆಗಿದೆ. ಸೀಲ್‌ಡೌನ್‌ ಆದಾಗಿನಿಂದ ಗ್ರಾಮಕ್ಕೆ ಸರಿಯಾಗಿ ಆಹಾರ ಧಾನ್ಯ ಪೂರೈಕೆ ಆಗುತ್ತಿಲ್ಲ. ಜನರಿಗೆ ಅಗತ್ಯವಾದ ಮಾತ್ರೆಗಳನ್ನು ಹೊರತುಪಡಿಸಿ ವೈದ್ಯರ ಸೇವೆಯೂ ದೊರೆಯುತ್ತಿಲ್ಲ. ಸೋಂಕಿನ ಭೀತಿಯ ಕಾರಣಕ್ಕೆ ವೈದ್ಯರು ದೂರದಿಂದಲೇ ಮಾತನಾಡಿಸಿ ಔಷದ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಜನರಿಗೆ ಅಗತ್ಯವಾದ ಮಾಸ್ಕ್‌, ಸ್ಯಾನಿಟೈಸರ್ ಮತ್ತಿತರ ಸಾಮಗ್ರಿಗಳನ್ನು ಸಹ ನೀಡಿಲ್ಲ’ ಎಂದು ದೂರುತ್ತಾರೆ ಗ್ರಾಮದ ನಿವಾಸಿ ಶಿವಸ್ವಾಮಿ ಆರಾಧ್ಯ.

ಕೃಷಿಗೆ ಹೊಡೆತ:'ಗ್ರಾಮದ ಸುತ್ತಮುತ್ತ ಆನೆಗಳ ಕಾಟ ಹೆಚ್ಚು. ಇದರಿಂದ ನಾವು ಭತ್ತ, ರಾಗಿ, ಬಾಳೆ ಯಾವುದಕ್ಕೂ ಬೆಳೆಯಲು ಆಗುತ್ತಿಲ್ಲ. ಇದ್ದದ್ದರಲ್ಲಿ ಒಂದಿಷ್ಟು ಹಸು ಸಾಕುತ್ತ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದೆವು. ಈಗ ಅದಕ್ಕೂ ಕಲ್ಲು ಬಿದ್ದಿದೆ. ಸಾಕಷ್ಟು ಜನರು ರೇಷ್ಮೆ ಹುಳು ಸಾಕಣೆ ಮಾಡಿಕೊಂಡಿದ್ದಾರೆ. ಆದರೆ, ಸೀಲ್‌ಡೌನ್‌ ಆದಾಗಿನಿಂದ ಚಾಕಿ ಸರಬರಾಜು ಸಹ ನಿಂತಿದೆ. ಹೀಗಾಗಿ ರೇಷ್ಮೆ ಕೃಷಿ ಸಹ ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮದ ಶಿವಲಿಂಗೇಗೌಡ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

'ಸೀ‌ಲ್‌ಡೌನ್ ಕಾರಣಕ್ಕೆ ಡೇರಿಯವರು ಇಲ್ಲಿನ ಮನೆಗಳಿಂದ ಹಾಲು ಶೇಖರಣೆ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ನಿತ್ಯ ಸಾವಿರಾರು ಲೀಟರ್‌ನಷ್ಟು ಹಾಲು ವ್ಯರ್ಥವಾಗುತ್ತಿದೆ. ಸೋಂಕಿತರ ಮನೆಗಳನ್ನು ಹೊರತುಪಡಿಸಿ ಉಳಿದ ಮನೆಗಳಿಂದ ಹಾಲು ಸಂಗ್ರಹಕ್ಕೆ ಅನುಮತಿ ನೀಡಬೇಕು. ಗ್ರಾಮಸ್ಥರಲ್ಲಿ ಮನೆಗೊಬ್ಬರಿಗೆ ಕನಿಷ್ಠ ಒಂದು ಗಂಟೆ ಕಾಲ ಸಮೀಪದ ಕೋಡಂಬಳ್ಳಿಗೆ ತೆರಳಿ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಗ್ರಾಮದಲ್ಲಿ ನಿರಂತರವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಜನರಿಗೆ ಅತ್ಯಗತ್ಯವಾದ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಅನ್ನು ಉಚಿತವಾಗಿ ವಿತರಿಸಬೇಕು. ಕಡು ಬಡವರಿಗೆ ಸೀಲ್‌ಡೌನ್‌ ಮುಗಿಯುವವರೆಗೂ ಗ್ರಾಮ ಪಂಚಾಯಿತಿಯಿಂದಲೇ ಆಹಾರ ಸಾಮಗ್ರಿ ವಿತರಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ತಹಶೀಲ್ದಾರ್‌ ಭೇಟಿ: ಚನ್ನಪಟ್ಟಣ ತಹಶೀಲ್ದಾರ್‌ ಬಿ.ಕೆ.ಸುದರ್ಶನ್‌ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಆಲಿಸಿದರು. ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ’ಜನರಿಗೆ ಆಹಾರ ಸಾಮಗ್ರಿ ಪೂರೈಕೆ ಸಂಬಂಧ ಸ್ಥಳೀಯ ಪಿಡಿಒಗೆ ಸೂಚನೆ ನೀಡಿದ್ದೇನೆ. ಪಂಚಾಯಿತಿ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಿ ನಾಳೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಗ್ರಾಮಕ್ಕೆ ಅಗತ್ಯವಾದ ವೈದ್ಯರು, ಪಶು ವೈದ್ಯರ ಸೇವೆಯನ್ನು ಒದಗಿಸಲಾಗಿದೆ. ಜನರು ಮನೆಯೊಳಗೇ ಇರುವ ಕಾರಣ ಅವರಿಗೆ ಮಾಸ್ಕ್‌ಗಳ ಅಗತ್ಯ ಇಲ್ಲ. ಸಿಬ್ಬಂದಿಗೆ ಮಾತ್ರ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT