ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆಕಾಯಿ ಮಾರಾಟ ಜೋರು

Last Updated 21 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಈಗ ಅವರೆಕಾಯಿ ಮಾರಾಟ ಆರಂಭಗೊಂಡಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಹಾಗಾಗಿ, ಬೆಲೆ ಏರಿಕೆಯಾಗಿದೆ.

ಇಲ್ಲಿನ ಬೆಂಗಳೂರು-ಮೈಸೂರು ರಸ್ತೆ ಪಕ್ಕದಲ್ಲಿ, ಎಪಿಎಂಸಿ ಮಾರುಕಟೆಯ ಆಸುಪಾಸು, ಹಳೆ ಬಸ್ ನಿಲ್ದಾಣದಲ್ಲಿ ಮತ್ತು ಬಡಾವಣೆಗಳಲ್ಲಿ ತಳ್ಳುವ ಗಾಡಿಗಳ ಮೂಲಕ ಅವರೆಕಾಯಿ ಮಾರಾಟ ನಡೆಯುತ್ತಿದೆ. ಸುಮಾರು 10 ಕ್ಕೂ ಹೆಚ್ಚು ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಅವರೆಕಾಯಿ ವ್ಯಾಪಾರ ಮಾಡುತ್ತಾರೆ.

ಪ್ರಸ್ತುತ ಪ್ರತಿದಿನ ಜಿಲ್ಲಾ ಕೇಂದ್ರಕ್ಕೆ 500 ರಿಂದ 600 ಕೆಜಿಯಷ್ಟು ಅವರೆ ಪೂರೈಕೆಯಾಗುತ್ತಿದೆ. ಆದರೆ, 1 ಸಾವಿರ ಕೆಜಿಗೂ ಹೆಚ್ಚು ಬೇಡಿಕೆಯಿದೆ. ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇಂದಿಗೂ ಇಲ್ಲಿಗೆ ಕೊಳ್ಳೇಗಾಲ, ಮೈಸೂರು ಜಿಲ್ಲೆಯ ನಂಜನಗೂಡು, ಎಚ್.ಡಿ. ಕೋಟೆ, ಗುಂಡ್ಲುಪೇಟೆ, ಹುಣಸೂರು ಭಾಗದಿಂದಲೇ ಹೆಚ್ಚಾಗಿ ಅವರೆಕಾಯಿ ಸ್ವಲ್ಪ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ಹಾಗಾಗಿ, 1 ಕೆಜಿಗೆ ₹50ಕ್ಕೆ ಮುಟ್ಟಿದೆ.

ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆ ಪೂರೈಕೆ ಆಗಬೇಕಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಪ್ರಸ್ತುತ ಮಾರುಕಟ್ಟೆಗೆ ಬರುವ ಅವರೆ ಕಾಯಿ ಸಂಜೆ ವೇಳೆಗೆ ಮಾರಾಟವಾಗುತ್ತಿದೆ. ಉಳಿಯುತ್ತಿರುವುದು ಕಡಿಮೆ. ಹಾಗಾಗಿ, ವ್ಯಾಪಾರಿಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ. . ಬಡಾವಣೆಗಳ್ಲಲಿ ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು 1 ಕೆಜಿಗೆ ₹45 ರಿಂದ 50 ದರ ನಿಗದಿ ಪಡಿಸುತ್ತಾರೆ. ಈ ಅವಧಿಯಲ್ಲಿಯೇ ಅವರೆಯಿಂದ ಮಾಡಿದ ಖಾದ್ಯ ಸೇವಿಸುವುದರಿಂದ ಗ್ರಾಹಕರು ವಿಧಿ ಇಲ್ಲದೆ ಖರೀದಿಸುವಂತಾಗಿದೆ.

ಈಗ ಅವರೆಕಾಯಿ ಸೀಸನ್ ಆರಂಭವಾಗಿದೆ. ಚಳಿಗಾಲದಲ್ಲಿ ರುಚಿರುಚಿಯಾದ ಅವರೆಕಾಯಿ ಖಾದ್ಯ ಸವಿಯಬೇಕೆಂದುಕೊಂಡವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷ ₹20 ರಿಂದ 25ಕ್ಕೆ ಒಂದು ಕೆ.ಜಿ. ಅವರೆಕಾಯಿ ಲಭಿಸುತ್ತಿತ್ತು. ಈ ಬಾರಿ ಇದರ ಬೆಲೆ 45 ರಿಂದ 50 ರೂಪಾಯಿಗಳವರೆಗೆ ಇದೆ. ರಾಗಿ, ಮೆಕ್ಕೆಜೋಳ, ಜೋಳ, ತೊಗರಿ ಹೊಲಗಳಲ್ಲಿ ಉಪ ಬೆಳೆಯಾಗಿ ಅವರೆಕಾಯಿಯನ್ನು ಬೆಳೆಯುತ್ತಿದ್ದು, ಆದರೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ರೋಗದ ಕಾರಣ ಅವರೆಕಾಯಿ ಇಳುವರಿ ಕಡಿಮೆಯಾಗಿದೆ ಎಂದು ಹಿರಿಯರಾದ ಡಿ.ವಿ. ಶಿವಾನಂದಸ್ವಾಮಿ ತಿಳಿಸಿದರು.

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬರುತ್ತಿಲ್ಲವಾದ ಕಾರಣ ಬೆಲೆ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಸೊಗಡಿನ ಅವರೆಕಾಯಿ ದುಬಾರಿ ಬೆಲೆ ನೀಡುತ್ತೇನೆಂದರೂ ಲಭ್ಯವಾಗುತ್ತಿಲ್ಲ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಖರೀದಿಸಿ ಅವುಗಳನ್ನು ಒಣಗಿಸಿ ಸೀಸನ್ ಮುಗಿದ ಬಳಿಕವೂ ಬಳಸುತ್ತಿದ್ದವರು ಬೆಲೆ ಏರಿಕೆಯ ಕಾರಣಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT