ಮಂಗಳವಾರ, ಮೇ 18, 2021
28 °C
ಚನ್ನಪಟ್ಟಣ ನಗರಸಭೆ: ಜೆಡಿಎಸ್‌ಗೆ 16, ಕಾಂಗ್ರೆಸ್‌, ಬಿಜೆಪಿಗೆ ತಲಾ 7 ಸ್ಥಾನ

ಜೆಡಿಎಸ್‌ಗೆ ಸರಳ ಬಹುಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಇಲ್ಲಿನ ನಗರಸಭಾ ಚುನಾವಣೆಯಲ್ಲಿ 16 ಮಂದಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, 31 ವಾರ್ಡ್‌ಗಳ ನಗರಸಭೆಯಲ್ಲಿ ಜೆಡಿಎಸ್ ಸರಳ ಬಹುಮತದೊಂದಿಗೆ ಅಧಿಕಾರ ಪಡೆದಿದೆ.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮತ ಎಣಿಕೆ ನಡೆಯಿತು. ಜೆಡಿಎಸ್ ಅಭ್ಯರ್ಥಿಗಳು 16 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ 7 ಸ್ಥಾನಗಳಲ್ಲಿ, ಬಿಜೆಪಿ 7 ಸ್ಥಾನಗಳಲ್ಲಿ, ಪಕ್ಷೇತರ ಒಂದು ಸ್ಥಾನಗಳಲ್ಲಿ ಜಯ ಗಳಿಸಿದರು.

2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಜಯ ಸಾಧಿಸಿದ್ದ ಜೆಡಿಎಸ್ ಈಗ ಒಂದು ಸ್ಥಾನ ಹೆಚ್ಚಿಸಿಕೊಂಡರೆ, 14 ಸ್ಥಾನಗಳಲ್ಲಿ ಜಯ ಸಾಧಿಸಿದ್ದ ಕಾಂಗ್ರೆಸ್ ಈಗ ಕೇವಲ 7 ಸ್ಥಾನಗಳಿಗೆ ಕುಸಿಯಿತು. ಇದುವರೆಗೂ ನಗರಸಭೆಯಲ್ಲಿ ಖಾತೆಯನ್ನೆ ತೆರೆಯದಿದ್ದ ಬಿಜೆಪಿ, ಈಗ 21 ಸ್ಥಾನಗಳಲ್ಲಿ ಸ್ಪರ್ಧಿಸಿ ಒಮ್ಮೆಲೆ 7 ಸ್ಥಾನಗಳಲ್ಲಿ ಜಯಸಾಧಿಸಿ ಪರಾಕ್ರಮ ಮೆರೆದಿದೆ.

30ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಯ ಒಲಿದಿದೆ. ಹಾಗೆಯೆ ತಲಾ ಐದು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಸ್.ಡಿ.ಪಿ.ಐ. ಮತ್ತು ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಸೋಲು ಅನುಭವಿಸಿದರು.

2013ರಲ್ಲಿ 15 ಸ್ಥಾನಗಳಲ್ಲಿ ಜಯಗಳಿಸಿದ್ದ ಜೆಡಿಎಸ್ ಹೆಚ್ಚು ಸ್ಥಾನ ಪಡೆದೂ ಅಧಿಕಾರ ಪಡೆಯುವಲ್ಲಿ ವಿಫಲವಾಗಿತ್ತು. ಆಗ 14 ಸ್ಥಾನಗಳಲ್ಲಿ ಜಯಸಾಧಿಸಿದ್ದ ಕಾಂಗ್ರೆಸ್ ಇಬ್ಬರು ಪಕ್ಷೇತರರ ಬೆಂಬಲ ಪಡೆದು ಅಧಿಕಾರಕ್ಕೇರಿತ್ತು. ಈಗ ಕೇವಲ 7 ಸ್ಥಾನ ಪಡೆದ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಿದೆ.

ಪಕ್ಷೇತರ ಅಭ್ಯರ್ಥಿ ಗೆಲುವು: ನಗರಸಭೆಯ 30ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಉಮಾ 453 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪಾರ್ವತಿ 237 ಮತಗಳನ್ನು ಪಡೆಯಲಷ್ಟೆ ಶಕ್ತರಾದರು. 26ನೇ ವಾರ್ಡ್‌ನಲ್ಲಿ ಜಯಸಾಧಿಸಿದ ಜೆಡಿಎಸ್ ಅಭ್ಯರ್ಥಿ ಪ್ರಶಾಂತ್ ಗೆ ತೀವ್ರ ಸ್ಪರ್ಧೆ ನೀಡಿದ್ದು ಪಕ್ಷೇತರ ಅಭ್ಯರ್ಥಿ ಬೋರಲಿಂಗಯ್ಯ. ಇಲ್ಲಿ ಪ್ರಶಾಂತ್ 776 ಮತ ಪಡೆದು ಜಯಶಾಲಿಯಾದರೆ, ಪಕ್ಷೇತರ ಬೋರಲಿಂಗಯ್ಯ 687 ಮತ ಪಡೆದು ತೀವ್ರ ಸ್ಪರ್ಧೆ ನೀಡಿದರು. ಇಲ್ಲಿ ಕಾಂಗ್ರೆಸ್ 107 ಮತಗಳನ್ನು ಮಾತ್ರ ಪಡೆಯಿತು.

17ನೇ ವಾರ್ಡಿನಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ವಾಸಿಲ್‌ಗೆ ಪಕ್ಷೇತರ ಅಭ್ಯರ್ಥಿ ಜಕ್ಕಿ ಅಹಮದ್ ತೀವ್ರ ಸ್ಪರ್ಧೆ ನೀಡಿದರು. ವಾಸಿಲ್ 603 ಮತ ಪಡೆದರೆ, ಪಕ್ಷೇತರ ಅಭ್ಯರ್ಥಿ ಜಕ್ಕಿ ಅಹಮದ್ 464 ಮತ ಪಡೆದರು. ಇಲ್ಲಿ ಮತ್ತೊಬ್ಬ ಪಕ್ಷೇತರ ಇಮ್ರಾನ್ 403 ಮತ ಪಡೆದರೆ, ಜೆಡಿಎಸ್ ಅಭ್ಯರ್ಥಿ ಕೇವಲ 154 ಮತ ಪಡೆದರು.

ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಹಿ ಹಂಚಿ ಸಂಭ್ರಮ: ನಗರಸಭೆಯಲ್ಲಿ ಜೆಡಿಎಸ್ ಅತೀ ಹೆಚ್ಚು ಸ್ಥಾನ ಗೆಲ್ಲುತ್ತಿದ್ದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಸಿಹಿ ಹಂಚಿ ಸಂಭ್ರಮ ಪಟ್ಟರು. ಕೊರೊನಾ ಕಾರಣ ಜಿಲ್ಲಾಡಳಿತ ವಿಜಯೋತ್ಸವ ಆಚರಣೆಯನ್ನು ನಿಷೇಧಿಸಿದ್ದ ಕಾರಣ ವಿಜಯೋತ್ಸವ ಕಂಡು ಬರಲಿಲ್ಲ. ಗೆದ್ದವರಿಗೆ ಜೈಕಾರ ಕೇಳಿಬಂತು.

ಅಭಿನಂದನೆ: ಇಲ್ಲಿನ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ಕಾರಣ ಸಂತಸಗೊಂಡ ಶಾಸಕ ಎಚ್.ಡಿ. ಕುಮಾರಸ್ವಾಮಿ ವಿಜೇತ ಜೆಡಿಎಸ್ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.