ರಾಮನಗರ: ಅತ್ತೆಯನ್ನೇ ಕೊಲೆ ಮಾಡಿದ ಅಳಿಯನಿಗೆ ಕನಕಪುರದ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ಹಾಗೂ ₹75 ಸಾವಿರ ದಂಡ ವಿಧಿಸಿದೆ. ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ ತುಳಸಿದೊಡ್ಡಿಯ ಭೀಮಾನಾಯ್ಕ (40) ಶಿಕ್ಷೆಗೊಳಗಾದ ಅಪರಾಧಿ. ತನ್ನ ಅತ್ತೆ ಲಕ್ಷ್ಮಿಬಾಯಿ ಅವರನ್ನು 2021ರ ಮಾರ್ಚ್ 26ರಂದು ಆತ ಕೊಲೆ ಮಾಡಿದ್ದ.
ಸ್ವಗ್ರಾಮದ ಶಶಿಕಲಾ ಅವರನ್ನು ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಭೀಮಾನಾಯ್ಕ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮದ್ಯವ್ಯಸನಿಯಾಗಿದ್ದ ಆತ ಕೆಲಸಕ್ಕೆ ಹೋಗುತ್ತಿರಲಿಲ್ಲ. ತವರು ಮನೆಯ ಆಸ್ತಿ ಮಾರಾಟ ಮಾಡಿ ಹಣ ತೆಗೆದುಕೊಂಡು ಬಂದು ಪತ್ನಿಯನ್ನು ಪೀಡಿಸುತ್ತಿದ್ದ.
ತವರು ಮನೆಯ ಸಹಾಯದೊಂದಿಗೆ ಪತ್ನಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮದ್ಯಪಾನ ಮಾಡಲು ಹಣ ಕೊಡುವಂತೆ 2021ರ ಮಾರ್ಚ್ 26ರಂದು ಬೆಳಿಗ್ಗೆ ಭೀಮಾನಾಯ್ಕ ಪತ್ನಿ ಜೊತೆ ಜಗಳವಾಡಿದ್ದ. ತವರಿನ ಆಸ್ತಿ ಮಾರಿ ಹಣ ತಂದುಕೊಂಡು ಎಂದು ತಾಕೀತು ಮಾಡಿದ್ದ. ವಿಷಯ ತಿಳಿದ ಅತ್ತೆ ಲಕ್ಷ್ಮಿಬಾಯಿ ಅವರು, ಸಂಜೆ ಮಗಳ ಮನೆಗೆ ಹೋಗಿ ಅಳಿಯನಿಗೆ ಬುದ್ಧಿ ಹೇಳಿ ಮೊಮ್ಮಕ್ಕಳೊಂದಿಗೆ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು.
ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಭೀಮಾನಾಯ್ಕ, ಹುಣಸೆ ಹಣ್ಣು ಜಜ್ಜುವ ಮರದ ಪಟ್ಟಿಯಿಂದ ಲಕ್ಷ್ಮಿಬಾಯಿ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದ. ಘಟನೆ ಕುರಿತು ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಟಿ.ಟಿ. ಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಕುಮಾರ್ ಎಚ್.ಎನ್ ಅವರು, ಭೀಮಾನಾಯ್ಕನಿಗೆ ಜೀವಾವಧಿ ಶಿಕ್ಷೆ ಮತ್ತು ₹75 ಸಾವಿರ ದಂಡ ವಿಧಿಸಿದರು. ಆ ಪೈಕಿ, ₹50 ಸಾವಿರವನ್ನು ಮೃತರ ಪತಿಗೆ ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ, 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಈ. ಯೋಗೇಶ್ವರ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.