ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ಪ್ರದೇಶಗಳ ಅಧ್ಯಯನ: ಕೈ ಮಿಲಾಯಿಸಿದ ಪರಿಷತ್ ಸದಸ್ಯ, ಬಿಜೆಪಿ ಮುಖಂಡ

ಬಿಜೆಪಿ ನಾಯಕರ ಪ್ರವಾಸದ ವೇಳೆ ಘಟನೆ
Published 9 ನವೆಂಬರ್ 2023, 15:38 IST
Last Updated 9 ನವೆಂಬರ್ 2023, 15:38 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಬರ ಪ್ರದೇಶಗಳ ಅಧ್ಯಯನಕ್ಕಾಗಿ ತಾಲ್ಲೂಕಿನ ವಿಭೂತಿಕೆರೆ ಗ್ರಾಮಕ್ಕೆ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಗುರುವಾರ ಭೇಟಿ ನೀಡಿದ್ದಾಗ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ ಮತ್ತು ಚನ್ನಪಟ್ಟಣ ತಾಲ್ಲೂಕಿನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಜಯರಾಮು ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.

ಕಾರ್ಯಕರ್ತರೊಬ್ಬರ ಪೂಜಾರಿ ಅವರು ಭೇಟಿ ನೀಡಿ ವಾಪಸ್ಸಾಗುತ್ತಿದ್ದಾಗ, ಇಬ್ಬರ ನಡುವೆ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ನೋಂದಣಿ ಕುರಿತು ವಾಗ್ವಾದ ಶುರುವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸ್ಥಳೀಯ ಮುಖಂಡರು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಘಟನೆಯಿಂದಾಗಿ ಪೂಜಾರಿ ಅವರು ಇರುಸುಮುರುಸಾದರು.

ಘಟನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಜಯರಾಮು, ‘ಪದವೀಧರರ ನೋಂದಣಿಯನ್ನು ಎಷ್ಟು ಮಾಡಿಸಿದ್ದಿಯಾ ಎಂದಾಗ, ನಾನು 25–30 ಮಾಡಿಸಿರುವೆ ಎಂದು ಪ್ರತಿಕ್ರಿಯಿಸಿದೆ. ಆಗವರು, ನಿನ್ನಂತಹವರು ಏಕೆ ಇರಬೇಕು ಎಂದು ನನ್ನ ಕೆನ್ನೆಗೆ ಬಾರಿಸಿ, ಮತ್ತೆ ಹೊಡೆಯಲು ಕೈ ಎತ್ತಿದರು. ಆಗ, ನಾನು ಕೂಡ ಕೈ ಎತ್ತಿದೆ. ಅಷ್ಟರೊಳಗೆ ಎಲ್ಲರೂ ಬಂದು ಸಮಾಧಾನಪಡಿಸಿದರು’ ಎಂದರು.

ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅ. ದೇವೇಗೌಡ, ‘ಕ್ಷುಲ್ಲಕ ಕಾರಣಕ್ಕೆ ನಡೆದ ಸಣ್ಣ ಘಟನೆಯಷ್ಟೇ. ನಮ್ಮಿಬ್ಬರ ನಡುವೆ ಹೇಳಿಕೊಳ್ಳುವಂತಹ ಜಗಳವೇನೂ ನಡೆದಿಲ್ಲ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT