ಶನಿವಾರ, ಸೆಪ್ಟೆಂಬರ್ 25, 2021
22 °C

‘ಸೃಜನಾತ್ಮಕತೆ ಗುರುತಿಸಲು ಬೇಸಿಗೆ ಶಿಬಿರ ಸಹಕಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಮಕ್ಕಳಲ್ಲಿನ ಸೃಜನಾತ್ಮಕತೆ ಗುರುತಿಸಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ’ ಎಂದು ಶಿಕ್ಷಣ ಫೌಂಡೇಷನ್‌ನ ಮಾರ್ಗದರ್ಶಕ ಯೋಗೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಭೂಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಫೌಂಡೇಶನ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿಣ್ಣರ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರವು ಉಚಿತವಾಗಿ ದೊರಕಬೇಕೆನ್ನುವ ಉದ್ದೇಶದಿಂದ ಶಾಲೆಯಲ್ಲಿ 25 ದಿನಗಳ ಕಾಲ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪ್ರತಿನಿತ್ಯ ಯೋಗಾಸನ, ಇಂಗ್ಲಿಷ್ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಮನರಂಜನೆ ಕಾರ್ಯಕ್ರಮ, ಆಟಗಳ ಮೂಲಕ ಮಕ್ಕಳಲ್ಲಿ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲಾಗಿತ್ತು. ಮಕ್ಕಳ ಸರ್ವತೋಮುಖ ಪ್ರಗತಿಗೆ ಈ ಶಿಬಿರ ಸಹಕಾರಿಯಾಗಿದೆ’ ಎಂದರು.

‘ಎಲ್ಲ ವಿಭಾಗಗಳಲ್ಲಿಯೂ ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ್ದರು.  ಬೇಸಿಗೆ ರಜೆಯನ್ನು ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಸದ್ಧಳಕೆ ಮಾಡಿಕೊಂಡರು. ಎಲ್ಲ ಮಕ್ಕಳು ಇದರ ಉಪಯೋಗ ಪಡೆದರು’ ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಕೌಶಲ್ಯ ಮಾತನಾಡಿ ‘ಶಿಕ್ಷಣ ಫೌಂಡೇಷನ್ ಸಂಸ್ಥೆ ಬೇಸಿಗೆ ಶಿಬಿರವನ್ನು ಉಚಿತವಾಗಿ ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಸಂತಸದ ವಿಚಾರ. 25 ದಿನಗಳ ಕಾಲ ನಡೆದ ಶಿಬಿರದಲ್ಲಿ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಶಿಬಿರ ಸಾಕಷ್ಟು ಸಹಕಾರಿಯಾಯಿತು. ಈ ಮೂಲಕ ಮಕ್ಕಳಿಗೆ ಕಲಿಸುವ ವಿಧಾನ ಯಶಸ್ಸು ಕಂಡಿತು. ಶಿಬಿರ ಹಮ್ಮಿಕೊಂಡಿದ್ದ ಸಂಸ್ಥೆಗೆ ತಾವು ಆಭಾರಿಯಾಗಿರುತ್ತೇವೆ’ ಎಂದು ತಿಳಿಸಿದರು.

‘ರೀಡ್ ಇಂಗ್ಲಿಷ್ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಿದ್ದು ಬಹಳ ಉಪಯುಕ್ತವಾಗಿದೆ. ಕಂಪ್ಯೂಟರ್ ಶಿಕ್ಷಣ ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದ್ದು ಅದರ ಆರಂಭಿಕ ಹಂತವನ್ನು ಮಕ್ಕಳು ತರಬೇತಿ ಪಡೆದುಕೊಂಡಿದ್ದಾರೆ. ತರಬೇತಿಯಲ್ಲಿ ಕಲಿತಿದ್ದನ್ನು ಬಿಡದೆ ಅಭ್ಯಾಸ ಮಾಡಬೇಕು‘ ಎಂದರು.

ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು ಹಾಗೂ ಮಕ್ಕಳು ಸೇರಿ ಕೇಕ್ ಕತ್ತರಿಸುವ ಮೂಲಕ ‘ಸ್ವಲ್ಪ ಮೋಜು–ಸ್ವಲ್ಪ ಓದು’ ಶೀರ್ಷಿಕೆಯಡಿ ಚಿಣ್ಣರ ಬೇಸಿಗೆ ಶಿಬಿರದ ಸಮರೋಪ ಸಮಾರಂಭ ಪ್ರಾರಂಭಿಸಿದ್ದು ವಿಶೇಷವಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜು, ಸಹಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.