ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ | ಜಲಕ್ಷಾಮ ಎದುರಾಗುವ ಭೀತಿ

ಗೋವಿಂದರಾಜು ವಿ.
Published 10 ಮಾರ್ಚ್ 2024, 4:32 IST
Last Updated 10 ಮಾರ್ಚ್ 2024, 4:32 IST
ಅಕ್ಷರ ಗಾತ್ರ

ಹಾರೋಹಳ್ಳಿ: ಬೇಸಿಗೆ ಆರಂಭಕ್ಕೂ ಮುನ್ನವೇ ಹಾರೋಹಳ್ಳಿ ತಾಲ್ಲೂಕಿನ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಜಲಕ್ಷಾಮ ಎದುರಾಗುವ ಭೀತಿ ಉಂಟಾಗಿದೆ. 

ತೀವ್ರ ಬರಗಾಲ ಪೀಡಿತ ತಾಲ್ಲೂಕಿನ ಪಟ್ಟಿಯಲ್ಲಿರುವ ಹಾರೋಹಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಅಭಾವ ಕಂಡು ಬಂದಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಪರಿಸ್ಥಿತಿಯಿದೆ.

ಯಾವ ಗ್ರಾಮಗಳಲ್ಲಿ ಸಮಸ್ಯೆ?: ಬಿರು ಬಿಸಿಲಿನ ಪರಿಣಾಮ ಹಾಗೂ ಕಳೆದ ಭಾರಿ ವರುಣನ ಅವಕೃಪೆಯಿಂದ ಬೇಸಿಗೆಗೂ ಮುನ್ನ ಹಲವು ಗ್ರಾಮಗಳಲ್ಲಿ ಬೋರ್‌ವೆಲ್‌ಗಳ ನೀರು ಕಡಿಮೆಯಾಗಿದೆ. ಕೆಲ ಗ್ರಾಮಗಳಲ್ಲಿ ಬೋರ್‌ವೆಲ್‌ಗಳು ಬತ್ತಿ ಹೋಗಿವೆ.

ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತನಗರ, ಹುಲಿಸಿದ್ದೇಗೌಡನ ದೊಡ್ಡಿ, ದ್ಯಾವಸಂದ್ರ ಗ್ರಾಮ ಪಂಚಾಯಿತಿ ಗೊಟ್ಟಿಗೆಹಳ್ಳಿ, ಅತ್ತಿಗುಪ್ಪೆ, ಕಾಡುಜಕ್ಕಸಂದ್ರ, ತೋಕಸಂದ್ರ ಗ್ರಾಮ ಪಂಚಾಯಿತಿ ಚವ್ವಯ್ಯನದೊಡ್ಡಿ, ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯ ಜಟ್ಟಿಪಾಳ್ಯ, ವಡೇರಹಳ್ಳಿ, ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡಸಾದೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಈ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕಾಯ್ದುಕೊಳ್ಳದೆ ಹೋದಲ್ಲಿ ಮುಂದಿನ ದಿಗನಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಸ್ಥಿತಿ ಎದುರಾಗಲಿದೆ.

ಟ್ಯಾಂಕರ್ ನೀರು ಸರಬರಾಜು: ಹಾರೋಹಳ್ಳಿ ತಾಲ್ಲೂಕಿನ ಗಡಿ ಗ್ರಾಮ ಉರುಗನದೊಡ್ಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ಜಟಿಲವಾಗಿದೆ. ಈಗಾಗಲೇ ಕೊಳವೆಬಾವಿ ನೀರು ನಿಂತು ಹೋಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಕ್ಕದ ತಟ್ಟೆಕೆರೆ, ಗೋದೂರು ಅರೆಗಡಕಲು ಗ್ರಾಮದಲ್ಲಿಯೂ ನೀರಿನ ಅಭಾವ ಕಾಡತೊಡಗಿದೆ. ಕೊಟ್ಟಗಾಳು ಗ್ರಾಮ ಪಂಚಾಯಿತಿ ಗೊಲ್ಲಹಳ್ಳಿಯಲ್ಲೂ ಇದೇ ಸಮಸ್ಯೆ ಕಾಣಿಸಿಕೊಂಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಿದರಿಂದ ಇದೀಗ ನೀರಿನ ಸಮಸ್ಯೆ ದೂರವಾಗಿದೆ. ಪಟ್ಟಣದಲ್ಲಿ ಸದ್ಯಕ್ಕಿಲ್ಲ ಸಮಸ್ಯೆ: ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಪಟ್ಟಣ ವ್ಯಾಪ್ತಿಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಈಗಷ್ಟೇ ಕಾವೇರಿ ನೀರಿನ ಸರಬರಾಜು ಪಟ್ಟಣಕ್ಕೆ ಆರಂಭಿಸಿರುವುದರಿಂದ ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಕಾವೇರಿ ನದಿ ನೀರು ಖಾಲಿಯಾಗಿರುವುದರಿಂದ ಬೇಸಿಗೆಗೆ ನೀರಿನ ಟ್ಯಾಂಕರ್ ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಶುದ್ಧ ನೀರಿನ ಘಟಕಗಳಿಗೆ ಹೆಚ್ಚಿದ ಬೇಡಿಕೆ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಸಹ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಈಗಾಗಲೇ ಬೇಡಿಕೆ ಸೃಷ್ಟಿಯಾಗಿದೆ. ಮರಳವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವು ಘಟಕಗಳಿಗೆ ಕಾಯಕ ಕಲ್ಪಿಸಬೇಕಾಗಿದೆ. ಈ ಬಗ್ಗೆ ಗಮನಹರಿಸದಿದ್ದರೆ ಶುದ್ಧ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ

ನೀರು ತುಂಬಿಸಿಕೊಳ್ಳಲು ಎತ್ತಿನ ಬಂಡಿ: ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳೆಚೆನ್ನವಲಸೆ ಗ್ರಾಮದಲ್ಲಿ ಎತ್ತಿನಬಂಡಿ ಮೂಲಕ ಕುಡಿಯುವ ನೀರು ತುಂಬಿಸಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿ ಕಾಣಬಹುದು.

ಸಹಾಯವಾಣಿ ಆರಂಭ

ಹಾರೋಹಳ್ಳಿ ತಾಲ್ಲೂಕ್ ವ್ಯಾಪ್ತಿಯ ಎಲ್ಲ ನಾಗರಿಕರು ನಗರ ಹಾಗೂ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ :97345149/9731376469 ಕರೆ ಮಾಡಿ ನೀರಿನ ಸಮಸ್ಯೆಯ ದೂರು ದಾಖಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT