ಗುರುವಾರ , ಅಕ್ಟೋಬರ್ 1, 2020
28 °C
ಗೋಪಹಳ್ಳಿ, ಕಾಳಾರಿ ಕಾವಲ್‌ ಗ್ರಾ.ಪಂ. ಗಳಲ್ಲಿ ಸ್ವಮಿತ್ವ ಯೋಜನೆಯ ಪ್ರಾಯೋಗಿಕ ಅನುಷ್ಟಾನ

ರಾಮನಗರ: ಆಸ್ತಿಪತ್ರ ವಿತರಣೆಗೆ ಅ.2ರ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಡ್ರೋಣ್ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದ ವಸತಿ ಪ್ರದೇಶಗಳಲ್ಲಿನ ಜಮೀನನ್ನು ಭೂಮಾಪನ ಮಾಡಿ ಆಸ್ತಿ ಪತ್ರಗಳನ್ನು ವಿತರಿಸುವ ಸ್ವಮಿತ್ವ ಯೋಜನೆಯ ಪ್ರಾಯೋಗಿಕ ಅನುಷ್ಟಾನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಅಕ್ಟೋಬರ್‌ 2ರಂದು ಈ ಯೋಜನೆಯ ಫಲಾನುಭವಿಗಳಿಗೆ ಆಸ್ತಿಪತ್ರ ವಿತರಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ಕೇಂದ್ರ ಸರ್ಕಾರದ ಸರ್ವೆ ಆಫ್ ಇಂಡಿಯಾ ಸಂಸ್ಥೆ, ರಾಜ್ಯದ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 5 ಜಿಲ್ಲೆಗಳ 83 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಪೈಲಟ್ ಯೋಜನೆಯಾಗಿ ರಾಮನಗರ ತಾಲ್ಲೂಕಿನ ಗೋಪಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 6 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾಗಡಿ ತಾಲ್ಲೂಕಿನ ಕಾಳಾರಿ ಕಾವಲ್/ಹೊಸಪಾಳ್ಯ ಗ್ರಾಮ ಪಂಚಾಯಿತಿಯ 7 ಗ್ರಾಮಗಳನ್ನು ಎರಡನೇ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. 13 ಗ್ರಾಮಗಳಿಂದ ಸುಮಾರು 5 ಸಾವಿರ ಆಸ್ತಿಗಳನ್ನು ಆಸ್ತಿಗಳನ್ನು ಭೂಮಾಪನ ಮಾಡಿ ಅಕ್ಟೋಬರ್ 2ರಂದು ಆಸ್ತಿ ಪತ್ರವನ್ನು ವಿತರಿಸುವ ಗುರಿಯನ್ನು ಜಿ.ಪಂ. ಹೊಂದಿದೆ.

ಈಗಾಗಲೇ ಗೋಪಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಆಸ್ತಿಗಳನ್ನು ಗುರುತಿಸುವ ಮತ್ತು ಡ್ರೋಣ್ ಮೂಲಕ ಛಾಯಾಚಿತ್ರವನ್ನು ಸೆರೆಹಿಡಿಯುವ ಕಾರ್ಯವು ಪೂರ್ಣಗೊಂಡಿದೆ. ಕಾಳಾರಿ ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಆಸ್ತಿಗಳನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ.

ವಿಶೇಷ ಸಭೆ: ಯೋಜನೆಯ ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಗ್ರಾಮ ಸಭೆಯನ್ನು ನಡೆಸಿ ಜನಪ್ರತಿನಿಧಿಗಳಿಗೆ ಮತ್ತು ಗ್ರಾಮಸ್ಥರಿಗೆ ಯೋಜನೆ ಅನುಷ್ಠಾನ ಬಗ್ಗೆ, ಯೋಜನೆಯ ಪ್ರಯೋಜನಗಳ ಬಗ್ಗೆ ಮತ್ತು ಗ್ರಾಮಸ್ಥರು ನೀಡಬೇಕಾದ ಸಹಕಾರದ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ.

ನಂತರ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಂದಿಗೆ ಭೂಮಾಪಕರು ಪ್ರತಿಯೊಂದು ಆಸ್ತಿಯ ಗಡಿಗಳನ್ನು ಆಸ್ತಿಯ ಮಾಲೀಕರ ಸಮ್ಮುಖದಲ್ಲಿ ಪರಿಶೀಲಿಸಿ, ಗಡಿಗಳ ಅಂಚುಗಳನ್ನು ಸುಣ್ಣದಲ್ಲಿ ಗುರುತಿಸುತ್ತಾರೆ. ಆಸ್ತಿಯ ಗಡಿಗಳನ್ನು ಗುರುತಿಸಿದ ನಂತರ ಡ್ರೋಣ್ ಮೂಲಕ ಗ್ರಾಮದ ಆಸ್ತಿಗಳ ಛಾಯಾಚಿತ್ರವನ್ನು ಸೆರೆ ಹಿಡಿಯಲಾಗುವುದು. ಈ ಛಾಯಚಿತ್ರಗಳನ್ನು ಸಂಸ್ಕರಿಸಿ, ಸುಣ್ಣದಲ್ಲಿ ಗುರುತಿಸಲಾದ ಅಂಚುಗಳನ್ನು ಆಧರಿಸಿ ಪ್ರತಿಯೊಂದು ಆಸ್ತಿಯ ನಕ್ಷೆ ತಯಾರಿಸಿ, ನಕ್ಷೆಯನ್ನು ಜಮೀನಿನೊಂದಿಗೆ ತಾಳೆ ಮಾಡಲಾಗುವುದು. ಆನಂತರ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಆಸ್ತಿ ಮಾಲೀಕರಿಂದ ದಾಖಲೆಗಳನ್ನು ಪಡೆದುಕೊಂಡು ನಕ್ಷೆ ಮತ್ತು ಕರಡು ಆಸ್ತಿ ಪತ್ರವನ್ನು ಸಿದ್ಧಪಡಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾಗುವುದು. ಕರಡು ನಕ್ಷೆ ಮತ್ತು ಆಸ್ತಿ ಪತ್ರದ ಬಗ್ಗೆ ಆಸ್ತಿ ಮಾಲೀಕರಿಂದ ಆಕ್ಷೇಪಣೆಗಳು/ತಕರಾರು ಇದ್ದಲ್ಲಿ ಇತ್ಯರ್ಥಪಡಿಸಿ ಅಂತಿಮ ಆಸ್ತಿ ಪತ್ರವನ್ನು ವಿತರಿಸಲಾಗುವುದು.

ಗ್ರಾಮದಲ್ಲಿ ವಸತಿ ಪ್ರದೇಶದ ಆಸ್ತಿ ಮಾಲೀಕರು ಭೂಮಾಪಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಆಸ್ತಿಗಳ ಗಡಿಗಳನ್ನು ಗುರುತಿಸುವಾಗ ಸ್ಥಳದಲ್ಲಿ ಹಾಜರಿದ್ದು, ತಮ್ಮ ಆಸ್ತಿಯ ಗಡಿಗಳನ್ನು ತೋರಿಸಲು ಹಾಗೂ ಆಸ್ತಿಯ ಬಗ್ಗೆ ತಮ್ಮಲ್ಲಿರುವ ದಾಖಲೆಗಳನ್ನು ಸಿಬ್ಬಂದಿ ಕೇಳಿದಾಗ ಸಲ್ಲಿಸಬೇಕು. ಹೀಗೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಯೋಜನೆ ಯಶಸ್ವಿ ಆಗುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ.

ಏನಿದು ಯೋಜನೆ?
ಗ್ರಾಮೀಣ ವಸತಿ ಪ್ರದೇಶಗಳ ಆಸ್ತಿಯ ಗಡಿಗಳನ್ನು ನಿರ್ಧರಣೆ ಮಾಡಿ ಹಕ್ಕು ದಾಖಲೆಗಳನ್ನು ಕಾಲೋಚಿತಗೊಳಿಸುವುದು. ಆಸ್ತಿ ಮಾಲೀಕರಿಗೆ ನಕ್ಷೆ ಸಹಿತ ಆಸ್ತಿ ಪತ್ರಗಳನ್ನು ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಅನುಷ್ಠಾನದಿಂದ ಆಸ್ತಿ ಮಾಲೀಕರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದ ಸುಲಭವಾಗುತ್ತದೆ. ಹಣಕಾಸು ಸಂಸ್ಥೆಗಳು ಈ ದಾಖಲೆಗಳ ಖಾತ್ರಿಯಿಂದಾಗಿ ಜನರಿಗೆ ಹೆಚ್ಚಿನ ಹಣಕಾಸು ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ. ಪ್ರತಿಯೊಂದು ಆಸ್ತಿಯ ಆಸ್ತಿ ತೆರಿಗೆಯನ್ನು ಸ್ಪಷ್ಟವಾಗಿ ಮತ್ತು ವೈಜ್ಞಾನಿಕವಾಗಿ ನಿರ್ಧರಿಸಲು ದಾರಿ ಮಾಡಿಕೊಡುತ್ತದೆ, ಇದರಿಂದ ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಿ, ನಾಗರಿಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಅಲ್ಲದೆ ಆಸ್ತಿಯ ಮಾಲೀಕರು ಕಟ್ಟಡ ಪರವಾನಗಿಯನ್ನು ಪಡೆಯುವ ಪ್ರಕ್ರಿಯೆ ಸರಳವಾಗುತ್ತದೆ. ಸರ್ಕಾರಿ ಆಸ್ತಿಯಲ್ಲಿನ ಅಕ್ರಮ ಸ್ವಾಧೀನವನ್ನು ತೆರವುಗೊಳಿಸಬಹುದಾಗಿರುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು.

*
ಜಿಲ್ಲೆಯ ಎರಡು ಗ್ರಾ.ಪಂ.ಗಳಲ್ಲಿ ಸ್ವಮಿತ್ವ ಯೋಜನೆ ಪ್ರಾಯೋಗಿಕ ಅನುಷ್ಟಾನ ಪ್ರಗತಿಯಲ್ಲಿದೆ. ಅಕ್ಟೋಬರ್‌ 2ರ ಒಳಗೆ ಇಲ್ಲಿನ ಜನರಿಗೆ ಆಸ್ತಿಪತ್ರ ವಿತರಿಸಲಾಗುವುದು.
-ಇಕ್ರಂ, ಜಿ.ಪಂ. ಸಿಇಒ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.