ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫಲಶ್ರುತಿ: ಸೋಲಿಗ ಕುಟುಂಬಕ್ಕೆ ತಾತ್ಕಾಲಿಕ ಆಶ್ರಯ

ಮಕ್ಕಳಿಗೆ ವಿದ್ಯಾಭ್ಯಾಸ; ಸಕಲ ನೆರವು– ಶಾಸಕರ ಆಶ್ವಾಸನೆ l ಸಂಘ–ಸಂಸ್ಥೆಗಳು, ಓದುಗರಿಂದ ಸಹಾಯದ ಮಹಾಪೂರ
Last Updated 15 ಜೂನ್ 2021, 22:34 IST
ಅಕ್ಷರ ಗಾತ್ರ

ಮಾಗಡಿ: ಹಸಿವಿನಿಂದ ಕಂಗಾಲಾಗಿದ್ದ ಸೋಲಿಗ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಅಶ್ವತ ನಾರಾಯಣ ಅವರ ಸಲಹೆಯ ಮೇರೆಗೆ ಶಾಸಕ ಎ.ಮಂಜುನಾಥ್, ಪುರಸಭೆ ಮತ್ತು ತಾಲ್ಲೂಕು ಆಡಳಿತ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿ ಆಶ್ರಯ ನೀಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಜೂ.15ರಂದು ‘ಸೋಲಿಗ ಕುಟುಂಬ ಹಸಿವಿನಿಂದ ಕಂಗಾಲು’ ವಿಶೇಷ ಲೇಖನ ಪ್ರಕಟಿಸಿತ್ತು. ಇದರಿಂದ ಸ್ಥಳೀಯ ಶಾಸಕರು, ತಾಲ್ಲೂಕು ಆಡಳಿತ ಎಚ್ಚೆದ್ದು ಅನುಕೂಲ ಕಲ್ಪಿಸಲು ಮುಂದಾಗಿದೆ.

ಹುಣಸೆ ಮರದ ಕೆಳಗೆ ವಾಸವಾಗಿದ್ದ ನಿರ್ಗತಿಕ ಕುಟುಂಬದವರನ್ನು ಪುರಸಭೆ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಟೆಂಪೋದಲ್ಲಿ ಕರೆದುಕೊಂಡು ತಿರುಮಲೆ ಬಳಿ ನಿರ್ಮಾಣ ಹಂತದಲ್ಲಿರುವ ವಸತಿಗೆ ಸೇರಿಸಿದರು.

ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ರವಿ, ಪುರಸಭೆ ಎಂಜಿನಿಯರ್ ಪ್ರಶಾಂತ್. ಶಾಸಕರ ಆಪ್ತ ಸಹಾಯಕ ಸಿಡಗನಹಳ್ಳಿ ವೆಂಕಟೇಶ್, ತಾಲ್ಲೂಕು ಅಲೆಮಾರಿ ಅರೆಅಲೆಮಾರಿ ಸಂಘಟನೆ ಅಧ್ಯಕ್ಷ ಮಾರಯ್ಯ ದೊಂಬಿದಾಸ, ವೆಂಕಟೇಶ್ ಇದ್ದರು.

ಶಾಶ್ವತ ಅನುಕೂಲ: ಶಾಸಕ ಎ.ಮಂಜುನಾಥ್ ಮಾತನಾಡಿ, ‘ತಿರುಮಲೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಾಣ ಹಂತದಲ್ಲಿನ ಮನೆಯೊಂದರಲ್ಲಿ ವಸತಿ ವ್ಯವಸ್ಥೆ ಕಲಿಸಿದ್ದೇವೆ. ಆಧಾರ್ ಕಾರ್ಡ್‌, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಮಾಡಿಸಿಕೊಟ್ಟು, ಭೀಮ ಅವರ ಪುತ್ರ, ಪುತ್ರಿಯರನ್ನು ಸರ್ಕಾರಿ ಶಾಲೆಗೆ ದಾಖಲಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಅವರ ಜೀವನ ನಿರ್ವಹಣೆಗೆ ಶಾಶ್ವತ ಅನುಕೂಲ ಮಾಡಲಾಗುತ್ತದೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ‘ನಮ್ಮ ತೋಟದ ಮನೆಯಲ್ಲಿ ವಾಸಕ್ಕೆ ಅನುಕೂಲ ಮಾಡಿಕೊಡುತ್ತೇವೆ, ಕಳಿಸಿಕೊಡಿ ಎಂದು ಸುಂಕುತಿಮ್ಮನ ಪಾಳ್ಯದ ಲಕ್ಷ್ಮೀಕಾಂತ್ ಅವರನ್ನು ಕಳಿಸಿದ್ದೆ. ಭೀಮ ದಂಪತಿ ತೋಟಕ್ಕೆ ಹೋಗುವುದಿಲ್ಲ’ ಎಂದರು.

ಬಿಜೆಪಿ ಮುಖಂಡ ಮುನಿರಾಜು ಗೌಡ ಪ್ರತಿಕ್ರಿಯಿಸಿ, ಸೋಲಿಗ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚ ಭರಿಸುವುದಾಗಿ ತಿಳಿಸಿದರು.

ಸೋಲಿಗ ಕುಟುಂಬ ವಾಸವಾಗಿದ್ದ ಹುಣಸೆ ಮರದ ಬಳಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರಹಮತ್ ಉಲ್ಲಾಖಾನ್, ಸದಸ್ಯರಾದ ನಾಗರತ್ನಮ್ಮ ರಾಜಣ್ಣ, ವಿಜಯಲಕ್ಷ್ಮೀರೂಪೇಶ್, ಅಶ್ವತ್ಥ, ಎಂ.ಎನ್.ಮಂಜುನಾಥ್, ರಿಯಾಜ್‌, ಕಸಬಾಹೋಬಳಿ ರಾಜಸ್ವನಿರೀಕ್ಷೆ ನಟರಾಜ ಮಧು, ಗ್ರಾಮಲೆಖ್ಖಾಧಿಕಾರಿ ಧನುಶ್, ಜೆಡಿಎಸ್ ಮುಖಂಡ ಎನ್.ಇ.ಎಸ್ ರಮೇಶ್, ತಾಲ್ಲೂಕು ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್, ಕಾರ್ಯದರ್ಶಿ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಮೋಹನ್ ಕುಮಾರ್, ಈರಣ್ಣನಾಯಕ, ಮಾರಪ್ಪದೊಂಬಿದಾಸ, ವೆಂಕಟೇಶ್‌ ಸ್ಥಳಕ್ಕೆ ಭೇಟಿ ನೀಡಿ ದಿನಸಿ ಪದಾರ್ಥ ಇತರೆ ನಿತ್ಯ ಬಳಕೆಯ ವಸ್ತುಗಳನ್ನು ನೀಡಿದರು.

ಭಾವುಕರಾದ ಭೀಮ

ಪತ್ರಿಕೆಯಲ್ಲಿ ಬಂದ ವರದಿಯ ಬಗ್ಗೆ ತಿಳಿದು ಭೀಮ ಭಾವುಕರಾದರು. ‘ನಮ್ಮ ತಾತ, ತಂದೆ ಮಂಜಯ್ಯ, ದುಡುಪನಹಳ್ಳಿಯಿಂದ ಅಲೆದಾಡುತ್ತಾ, ಕುಣಿಗಲ್ ತಾಲ್ಲೂಕಿನ ಹುಲಿಯೂರಮ್ಮ ಗುಡಿಯಲ್ಲಿ ಹಲವು ವರ್ಷಗಳು ಉಳಿದಿದ್ದರು. ನಾನು ಜನಿಸಿದ್ದು, ಹುಲಿಯೂರಮ್ಮ ಗುಡಿಯ ಬಯಲಿನಲ್ಲಿ. ಅಲ್ಲಿಂದ ಸಾತನೂರು ಬಳಿ ಕಬ್ಬಾಳಮ್ಮನ ಗುಡಿಯ ಬಳಿ ನನ್ನ ಬಾಲ್ಯ ಕಳೆಯಿತು. ತಂದೆಯ ನೆನಪಿಗಾಗಿ ಮೊದಲ ಮಗನಿಗೆ ಕಬ್ಬಾಳು ಎಂದು ಹೆಸರಿಟ್ಟಿದ್ದೇವೆ. ಶ್ರೀಕೃಷ್ಣ ಗುಡಿಯ ಮುಂದೆ ಜ್ಯೋತಿಯೊಂದಿಗೆ ಮದುವೆಯಾಯಿತು. 3 ವರ್ಷ ಕಳೆದ ಮೇಲೆ ಗೌರಿಯನ್ನು ಮದುವೆಯಾದೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಎರಡನೆ ಪತ್ನಿ ಗೌರಿ ಐದು ತಿಂಗಳ ಗರ್ಭಿಣಿ. ಬಳಿ ಹರಿದ ಬಟ್ಟೆಗಳನ್ನು ಹೊಲಿದು ಮಾಡಿದ್ದ ಟೆಂಟ್‌ಗಳಲ್ಲಿ ಜೀವನ ಸಾಗಿಸಿದ್ದೇವೆ. ಕುಟುಂಬ ದೊಡ್ಡದಾದಮೇಲೆ ಟೆಂಟ್ ಸಹ ದೊರೆಯದಾಯಿತು. ರಂಗೇಗೌಡರ ಹೊಲದಲ್ಲಿನ ಹುಣಸೆ ಮರದ ಬಳಿ ಬಂದು ಬಯಲಿನಲ್ಲಿ ನೆಲಸಿದೆವು. ವಾರದಲ್ಲಿ ಎರಡು ದಿನ ತೆಂಗಿನ ಕಾಯಿ ಕೀಳಲು ಮರ ಹತ್ತುತ್ತಿದ್ದೆ. ದಿನಕ್ಕೆ ₹50 ಸಿಗುತ್ತಿತ್ತು. ಬಯಲಿನಲ್ಲಿ ಉಳಿದರೆ ಹೊಟ್ಟೆಗೆ ದೊರೆಯುವುದಿಲ್ಲ. ಸಂಕಟದ ಸಮಯದಲ್ಲಿ ನಮ್ಮಂತಹ ನಿರ್ಗತಿಕರ ನೆರವಿಗೆ ಮುಂದಾಗಿರುವ ‘ಪ್ರಜಾವಾಣಿ’ ಮತ್ತು ಸಹಾಯ ಮಾಡುತ್ತಿರುವ ಎಲ್ಲರಿಗೂ ನಮಸ್ಕರಿಸುತ್ತೇವೆ’ ಎಂದು ಕಣ್ಣೀರಾದರು.

ಹುಣಸೆ ಮರಕ್ಕೆ ಪೂಜೆ

ಹುಣಸೆ ಮರದಿಂದ ವಸತಿಯತ್ತ ತೆರಳುವ ಮುನ್ನ ಸೋಲಿಗ ಸಂಪ್ರದಾಯದಂತೆ ಮರಕ್ಕೆ ಊದುಕಡ್ಡಿ ಹಚ್ಚಿ ಬಾಳೆಹಣ್ಣು, ಬೆಲ್ಲದ ಅಚ್ಚು ಮುರಿದಿಟ್ಟು ಅರಿಶಿಣ, ಕುಂಕುಮ, ವೀಭೂತಿ ಬಳಿದು ಪೂಜಿಸಿ, ಕುಲದೈವ ಬಿಳಿಗಿರಿರಂಗಯ್ಯನಿಗೆ ಭೀಮ ಅವರ ಕುಟುಂಬದವರು ನಮನಿಸಿದರು.

ಮರದ ಸುತ್ತಲೂ ಮೂರು ಸುತ್ತುಹಾಕಿ, ‘ಹುಣಸೆ ಮರದವ್ವ, ಭೂಮಮ್ಮ ನಮ್ಮನ್ನು ಕೈಬಿಡಬೇಡ’ ಎಂದು ಕೈಮುಗಿದು, ನೆಲಕ್ಕೆ ನಮಿಸಿದರು. ಟೆಂಪೋ ಹತ್ತಿ ತಿರುಮಲೆಯತ್ತ ತೆರಳುವ ಮುನ್ನ, ಭೀಮ, ಜ್ಯೋತಿ, ಗೌರಿ ಮತ್ತು ಹುಣಸೆ ಮರದತ್ತ ತಿರುತಿರುಗಿ ನೋಡುತ್ತಾ ಕಣ್ಣೀರು ಸುರಿಸುತ್ತಾ ಮುನ್ನೆಡೆದರು.

‘ಪ್ರಜಾವಾಣಿ’ ಓದುಗರ ಸ್ಪಂದನೆ

‘ಪ್ರಜಾವಾಣಿ’ ಓದುಗರಾದ ಆನೇಕಲ್ ತಾಲ್ಲೂಕು ಬೊಮ್ಮಸಂದ್ರದ ನಿವಾಸಿಗಳಾದ ಕವಿತಾ ಮತ್ತು ಶ್ರೀನಿವಾಸ್, ಸೋಲಿಗ ಕುಟುಂಬಕ್ಕೆ ಟೆಂಟ್, ನೂತನ ಉಡುಪುಗಳು, ಎಣ್ಣೆ, ಬೇಳೆ, ಬೆಲ್ಲ, ಅಕ್ಕಿ, ತರಕಾರಿ, ಹಣ್ಣು ಹಂಪಲು, ನೀಡಿದರು.

‘ಪ್ರಜಾವಾಣಿ’ ಓದುಗ ಶ್ರೀಪತಿಹಳ್ಳಿ
ವಾಸು ₹5 ಸಾವಿರ ನಗದನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಮಿ ಅವರಿಗೆ ನೀಡಿ, ಸೋಲಿಗ ಕುಟುಂಬಕ್ಕೆ ಅನುಕೂಲ ಮಾಡುವಂತೆ ತಿಳಿಸಿದರು. ಬೆಂಗಳೂರಿನ ಕಿರಣ ಮತ್ತು ಇತರೆ ಸಹಸ್ರಾರು ಓದುಗರು ‘ಪ್ರಜಾವಾಣಿ’ ಪತ್ರಿಕೆ ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿ, ತಮ್ಮಿಂದಾಗುವ ನೆರವು ನೀಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT